ಎನ್.ಆರ್.ಪುರ: ಕೆಎಸ್‌ಆರ್‌ಟಿಸಿ ಬಸ್‌ಗಳ ಸಮಸ್ಯೆ ಪರಿಹಾರಕ್ಕೆ ಎಷ್ಟೇ ಬಾರಿ ಕರೆ ಮಾಡಿದರೂ ಶಿವಮೊಗ್ಗ ಡಿಪೋ ವಿಭಾಗೀಯ ನಿಯಂತ್ರಣಾಧಿಕಾರಿ ಸ್ಪಂದಿಸುತ್ತಿಲ್ಲ ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ತಾಪಂನಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಸದಸ್ಯರು ಕೆಎಸ್‌ಆರ್‌ಟಿಸಿ ಬಸ್‌ಗಳ ಸಮಸ್ಯೆ ಕುರಿತು ಹರಿಹಾಯ್ದರು. ಸರ್ಕಾರಿ ಬಸ್‌ಗಳು ಸರಿಯಾಗಿ ನಿಲುಗಡೆ ಮಾಡುತ್ತಿಲ್ಲ. ಮಹಿಳಾ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಕರೆ ಮಾಡಿದರೆ ಕರೆಯನ್ನೇ ಸ್ವೀಕರಿಸದೆ ಉದ್ಧಟತನ ತೋರಿಸುತ್ತಿದ್ದಾರೆ. ಇಂಥ ಅಧಿಕಾರಿಗಳಿಂದಲೇ ಶಕ್ತಿ ಯೋಜನೆ ಸದ್ಬಳಕೆಯಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೇಸಿಲ್ ಮಾತನಾಡಿ, ಶಿವಮೊಗ್ಗದಿಂದ ಸೌತಿಕೆರೆಗೆ ಹೋಗಲು ಪುರುಷರಿಗೆ ಮಾತ್ರ ಸೌತಿಕೆರೆಯಲ್ಲಿ ಸ್ಟಾಪ್ ಕೊಡುತ್ತಾರೆ. ಆದರೆ ಮಹಿಳೆಯರಿಗೆ ಸೌತಿಕೆರೆಯಲ್ಲಿ ಸ್ಟಾಪ್ ಇಲ್ಲವೆಂದು ಮುಂದಿನ ಸ್ಟಾಪ್‌ನಲ್ಲಿ ಇಳಿಸುತ್ತಿದ್ದಾರೆ. ಹಣ ನೀಡಿದರೆ ಸೌತಿಕೆರೆಗೆ ಟಿಕೇಟ್ ನೀಡುತ್ತೇವೆ ಎನ್ನುತ್ತಾರೆ ಎಂದು ದೂರಿದರು. ಇದಕ್ಕೆ ಉತ್ತರಿಸಿದ ಚಿಕ್ಕಮಗಳೂರು ಕೆಎಸ್‌ಆರ್‌ಟಿಸಿ ಡಿಪೋ ಸಂಚಾರ ನಿಯಂತ್ರಕ ವಸಂತ್‌ಕುಮಾರ್, ಶಿವಮೊಗ್ಗದಿಂದ ಎನ್.ಆರ್.ಪುರಕ್ಕೆ ಟಿಕೇಟ್ ಪಡೆದ ಶಕ್ತಿ ಯೋಜನೆ ಫಲಾನುಭವಿಯು ಶೆಟ್ಟಿಕೊಪ್ಪದಲ್ಲಿ ಇಳಿಯುತ್ತಾರೆ. ಮುಂದೆ ಪರಿಶೀಲನೆಗೆ ಬಂದ ಅಧಿಕಾರಿಗಳು ಟಿಕೇಟ್‌ನ್ನು ಅನವಶ್ಯಕವಾಗಿ ಹರಿದು ಆದಾಯ ಹೆಚ್ಚಿಸಿಕೊಳ್ಳುತ್ತೀರಾ, ಟಿಕೇಟ್ ನೀಡಿದ ಪ್ರಯಾಣಿಕರೇ ಇಲ್ಲ ಎಂದು ನಿರ್ವಾಹಕರಿಗೆ ಹೇಳುತ್ತಾರೆ. ಅದಕ್ಕಾಗಿ ಈ ರೀತಿ ಹೇಳಿರಬೇಕೆಂದು ತಿಳಿಸಿದರು.
ಸಭೆಯಲ್ಲೇ ಶಿವಮೊಗ್ಗ ಡಿಪೋ ಅಧಿಕಾರಿಗೆ ಕರೆ ಮಾಡಿದಾಗಲೂ ಕರೆ ಸ್ವೀಕರಿಸಲಿಲ್ಲ. ಆಕ್ರೋಶಗೊಂಡ ಸದಸ್ಯರು ಇದೇ ವರ್ತನೆ ಮುಂದುವರಿದರೆ ಶಿವಮೊಗ್ಗದ ಡಿಪೋ ಅಧಿಕಾರಿಗಳು ಬರುವವರೆಗೂ ಸರ್ಕಾರಿ ಬಸ್‌ಗಳನ್ನು ನಿಲ್ಲಿಸಿ ಪ್ರತಿಭಟಿಸಲಾಗುವುದೆಂದು ಎಚ್ಚರಿಸಿದರು. ಈ ಬಗ್ಗೆ ಚಿಕ್ಕಮಗಳೂರು ಡಿಪೋ ಡಿಸಿ ಅವರಿಗೆ ಮಾಹಿತಿ ನೀಡಿ ಶಿವಮೊಗ್ಗ ಡಿಪೋ ಅಧಿಕಾರಿಗಳಿಗೆ ನಿರ್ದೇಶನ ಕೊಡಿಸಲಾಗುವುದು ಎಂದು ವಸಂತ್‌ಕುಮಾರ್ ತಿಳಿಸಿದರು. ಸದಸ್ಯ ಅರುಣ ಪೂಜಾರಿ ಮಾತನಾಡಿ, ಹೊರನಾಡು-ಗುಂಡ್ಲುಪೇಟೆ ಬಸ್ ನಿಲ್ಲಿಸಲಾಗಿದೆ. ಇದರಿಂದ ಹೊರನಾಡಿಗೆ ಬರುವ ಮಹಿಳಾ ಯಾತ್ರಾರ್ಥಿಗಳಿಗೆ ತೊಂದರೆಯಾಗಿದೆ. ಶಕ್ತಿ ಯೋಜನೆಯ ಸವಲತ್ತು ನಿಂತಂತಾಗಿದೆ ಎಂದು ದೂರಿದರು. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದೆಂದು ಇಲಾಖಾಧಿಕಾರಿ ತಿಳಿಸಿದರು.
ತಾಲೂಕಿನಲ್ಲಿ 2,146 ಅಂತ್ಯೋದಯ ಹಾಗೂ 12,414 ಕಾರ್ಡುಗಳು ಅನ್ನಭಾಗ್ಯ ಯೋಜನೆಯಲ್ಲಿವೆ. 2024-25 ನೇ ಆರ್ಥಿಕ ವರ್ಷದ ಫೆಬ್ರವರಿ ಹಾಗೂ ಮಾರ್ಚ್‌ನ ಗೃಹಲಕ್ಷ್ಮಿ ಯೋಜನೆ ಹಣ ಬಾಕಿ ಇದೆ. ಈಗ ನೇರವಾಗಿ ಫಲಾನುಭವಿಗಳ ಖಾತೆಗೆ ಯೋಜನೆಯ ಹಣ ವರ್ಗಾವಣೆ ಆಗುವ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಹಣ ಬಿಡುಗಡೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಾಲೂಕಿನ ಒಟ್ಟು 13,223 ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಣ ಸಂದಾಯವಾಗಿದೆ. 16,124 ಫಲಾನುಭವಿಗಳಿಗೆ ಅನುದಾನದ ಕೊರತೆಯಿಂದಾಗಿ ಸಂದಾಯವಾಗಿಲ್ಲ. ಶೀಘ್ರ ಅನುದಾನ ಬರಲಿದೆ. 25 ಹೊಸ ಅರ್ಜಿಗಳು ಸ್ವೀಕೃತವಾಗಿವೆ. ಗ್ರಾಮ ಒನ್, ಸೇವಾ ಸಿಂಧು ಪೋರ್ಟಲ್ ಮೂಲಕ ಸಲ್ಲಿಸಿದ ಅರ್ಜಿಗಳು ನಮ್ಮ ಲಾಗಿನ್ ಬರುತ್ತವೆ. ನಂತರ ಅವುಗಳನ್ನು ಮೇಲಾಧಿಕಾರಿಗಳ ಲಾಗಿನ್‌ಗೆ ಹಾಕುತ್ತೇವೆ ಎಂದು ಸಿಡಿಪಿಒ ವೀರಭ್ರಯ್ಯ ಮಾಜಿ ಗೌಡ್ರ ತಿಳಿಸಿದರು.
ಇತ್ತೀಚೆಗೆ ಕಟ್ಟಿನಮನೆಯಲ್ಲಿ ನವಜಾತ ಹೆಣ್ಣು ಶಿಶುವನ್ನು ಮಾರಾಟ ಮಾಡಿದ ಪ್ರಕರಣ ಪತ್ತೆ ಮಾಡಿದ್ದು, ತಂದೆ, ತಾಯಿ ಹಾಗೂ ಇದರಲ್ಲಿ ಭಾಗಿಯಾದ ನರ್ಸ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮಗುವನ್ನು ಪತ್ತೆ ಹಚ್ಚಿ ಚಿಕ್ಕಮಗಳೂರಿನಲ್ಲಿ ಆರೈಕೆ ಮಾಡಲಾಗುತ್ತಿದೆ. ಬಾಲ್ಯ ವಿವಾಹ, ಮಕ್ಕಳ ಮಾರಾಟದ ಮಾಹಿತಿ ಇದ್ದಲ್ಲಿ ಕೂಡಲೇ ನಮ್ಮ ಗಮನಕ್ಕೆ ತಂದರೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಆರ್ಥಿಕ ಸಂಕಷ್ಟವಿರುವವರು ಇಂತಹ ಪ್ರಕರಣಗಳನ್ನು ಮಾಡುತ್ತಾರೆ. ಅದಕ್ಕಾಗಿ ಇಂತಹ ಪ್ರಕರಣಗಳ ತಡೆಯಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾವಲು ಸಮಿತಿಗಳನ್ನು ರಚಿಸಲಾಗುತ್ತಿದೆ. ಈ ಬಗ್ಗೆ ವ್ಯಾಪಕ ಪ್ರಚಾರ ಮಾಡಿಸಲಾಗುವುದು ಎಂದು ಸಿಡಿಪಿಒ ವೀರಭ್ರಯ್ಯ ಮಾಜಿ ಗೌಡ್ರ ತಿಳಿಸಿದರು.
ಮೊದಲು ರೇಷನ್ ಕಾರ್ಡ್ ತಿದ್ದುಪಡಿಗೆ ಫಲಾನುಭವಿಗಳ ಮೊಬೈಲ್‌ಗೆ ಒಟಿಪಿ ಬರುತ್ತಿತ್ತು. ಇದರಿಂದ ಕಾರ್ಡು ತಿದ್ದುಪಡಿ ಮಾಡಲಾಗುತ್ತಿತ್ತು. ಆದರೆ ಈಗ ಹೆಸರು ತಿದ್ದುಪಡಿ, ವಿಳಾಸ ತಿದ್ದುಪಡಿಗಳಿದ್ದಲ್ಲಿ ಫಲಾನುಭವಿಗಳೇ ಗ್ರಾಮ ಒನ್ ಕೇಂದ್ರಕ್ಕೆ ಬಂದು ಬೆರಳಚ್ಚು ನೀಡಿದರೆ ಮಾತ್ರ ತಿದ್ದುಪಡಿ ಮಾಡಬಹುದಾಗಿದೆ. ಕುಟುಂಬದ ಸದಸ್ಯರು ಯಾರಾದರೂ ಮರಣ ಹೊಂದಿದರೆ, ಅಥವಾ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟು ಅವರ ಹೆಸರನ್ನು ಡಿಲೀಟ್ ಮಾಡಲು ಕುಟುಂಬದ ಒಬ್ಬ ಸದಸ್ಯರು ಬಂದು ಬೆರಳಚ್ಚು ನೀಡಿದರೆ ಸಾಕು. ಕಾರ್ಡ್‌ಗೆ ಹೊಸ ಸದಸ್ಯರ ಸೇರ್ಪಡೆಗೆ ಕುಟುಂಬದ ಒಬ್ಬ ಸದಸ್ಯ ಹಾಗೂ ಸೇರ್ಪಡೆಯಾಗುವವವರು ಇಬ್ಬರೂ ಕೇಂದ್ರಕ್ಕೆ ಬಂದು ಬೆರಳಚ್ಚು ನೀಡಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿ ಗಣಪತಿ ತಿಳಿಸಿದರು.
ಈ ಭಾಗದಲ್ಲಿ ಬಸ್ ನಿಲುಗಡೆ ಬಗ್ಗೆ ಸಾಕಷ್ಟು ದೂರುಗಳಿವೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಎಕ್ಸ್‌ಪ್ರೆಸ್‌ಗಳಾಗಿದ್ದು, ಎಕ್ಸ್‌ಪ್ರೆಸ್ ತೆಗೆದು ಅವುಗಳನ್ನು ಲೋಕಲ್ ಬಸ್‌ಗಳಾಗಿ ಮಾಡಲು ಆರ್‌ಟಿಒ ಒಪ್ಪಿಗೆ ನೀಡುತ್ತಿಲ್ಲ. ಗ್ರಾಮಾಂತರ ಸಾರಿಗೆ ಬಿಡಲು ಅನುಮತಿ ಪಡೆಯಬೇಕು ಎಂದು ಚಿಕ್ಕಮಗಳೂರು ಡಿಪೋ ಸಂಚಾರಿ ನಿಯಂತ್ರಕರ ವಸಂತಕುಮಾರ್ ಹೇಳಿದರು.