More

  ಕೆಎಲ್‌ಇ ನೆನಪಿನಂಗಳದಲ್ಲಿ ಕಣವಿ ಚೆಂಬೆಳಕು

  ಬೆಳಗಾವಿ: ಚೆಂಬೆಳಕಿನ ಕವಿ ಎಂದೇ ಹೆಸರಾಗಿದ್ದ ನಾಡೋಜ, ಡಾ.ಚನ್ನವೀರ ಕಣವಿ ಅವರು, ಹಲವು ಕವನಗಳಲ್ಲಿ ಕೆಎಲ್‌ಇ ಸಪ್ತರ್ಷಿಗಳನ್ನು ಮನಸಾರೆ ಆರಾಧಿಸಿದ್ದರು. ಬಸವನಾಳ ಅವರ ಕುರಿತು ರಚಿಸಿದ ಕವನ ಅಮರ ಕವನಗಳಲ್ಲಿ ಒಂದು. ಅಷ್ಟೇ ಅಲ್ಲ, ಕೆಎಲ್‌ಇ ವಿಶ್ವವಿದ್ಯಾಲಯದ ಸ್ವಾಗತ ಗೀತೆಯಾದ ವಿಶ್ವಭಾರತಿಗೆ ಕನ್ನಡದಾರತಿಯನ್ನು ರಚಿಸಿಕೊಟ್ಟು, ಕೆಎಲ್‌ಇ ಎತ್ತರ-ಬಿತ್ತರಗಳನ್ನು ಅಭಿವ್ಯಕ್ತಿಸಿದ ರೀತಿ ಅನನ್ಯ. ಅದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸ್ವಾಗತಗೀತೆಯೂ ಆಗಿ ಮತ್ತಷ್ಟು ಮನ್ನಣೆ ಗಳಿಸಿತ್ತು.

  ಬೆಳಗಾವಿ ಲಿಂಗರಾಜ ಕಾಲೇಜ್‌ನ ಕನ್ನಡ ಸಂಘ, ಜೆಎನ್‌ಎಂಸಿ ಕಾಲೇಜ್ನ ಕನ್ನಡ ಬಳಗದ ಹಲವಾರು ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದ ಕಣವಿ ಅವರು, ಬೆಳಗಾವಿಯಲ್ಲಿ ಕನ್ನಡ ಡಿಂಡಿಮ ಮೊಳಗಿಸಿದವರು. ಕನ್ನಡ ಬಳಗ ಕಟ್ಟಿ ಬೆಳೆಸುವಲ್ಲಿ ಪ್ರೋತ್ಸಾಹಿಸಿದವರು. 2007ರ ಮಾ. 28ರಲ್ಲಿ ಲಿಂಗರಾಜ ಕಾಲೇಜ್‌ನಲ್ಲಿ ಆಯೋಜಿಸಿದ್ದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಕೆಎಲ್‌ಇ ಕುರಿತು ಅಭಿಮಾನ ವ್ಯಕ್ತಪಡಿಸಿದ್ದರು.

  ಆರು ದಶಕದಿಂದ ಕಣವಿ ಅವರೊಂದಿಗೆ ಡಾ.ಕೋರೆ ಅವರ ಒಡನಾಟವಿತ್ತು. ಹಲವಾರು ದಶಕಗಳಿಂದ ಕೆಎಲ್‌ಇ ಪರಿವಾರದೊಂದಿಗೆ ಅವರದು ಅವಿನಾಭಾವ ಸಂಬಂಧ. ಕಣವಿ ಅವರು ಸಂಸ್ಥೆಯನ್ನು ತಮ್ಮ ಕುಟುಂಬದ ಭಾಗವಾಗಿ ಮಾರ್ಗದರ್ಶಿಸಿದ್ದರು. ಸಂಸ್ಥೆಯ ಕ್ರಿಯಾಶೀಲತೆಯನ್ನು, ವಿಸ್ತಾರೋನ್ನತೆಯನ್ನು ಕಂಡು ವಿಸ್ಮಯ ಪಟ್ಟು ಹರ್ಷಿತರಾಗಿದ್ದರು.

  ಸಮನ್ವಯದ ಕವಿ: 2016ರಲ್ಲಿ ಕೆಎಲ್‌ಇ ಶತಮಾನೋತ್ಸವ ಕಾರ್ಯಕ್ರಮದಲ್ಲಿಯೂ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು. ಬದುಕಿನುದ್ದಕ್ಕೂ ಯಾವುದೇ ಪಂಥ-ಪಂಗಡಗಳಿಗೂ ಒಳಗಾಗದೆ ಸಮನ್ವಯದ ಕವಿಯಾಗಿ, ಕನ್ನಡ ಸಾಹಿತ್ಯ ಗಂಗೋತ್ರಿಯನ್ನು ಪೋಷಿಸಿ, ಬೆಳೆಸಿದರು. ಕಣವಿಯವರು ಇಂದು ನಮ್ಮ ಮಧ್ಯೆ ಇಲ್ಲ ಎಂಬುದನ್ನು ಊಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರ ಒಡನಾಟವನ್ನು ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಸ್ಮರಿಸಿದ್ದಾರೆ.

  See also  ಮುಕ್ತಾಯದ ಹಂತಕ್ಕೆ ‘ಘೋಸ್ಟ್’; ಆ ನಂತರ ‘ಘೋಸ್ಟ್ 2’

  ಶತಮಾನೋತ್ಸವದ ನೆನಪು: 2016ರಲ್ಲಿ ಕೆಎಲ್‌ಇ ಶತಮಾನೋತ್ಸವ ಕಾರ್ಯಕ್ರಮಕ್ಕೆ ಡಾ.ಕಣವಿ ಅವರನ್ನು ಆಹ್ವಾನಿಸಿದ್ದಾಗ ಅವರು ಅತ್ಯಂತ ಪ್ರೀತಿಯಿಂದ ಆಗಮಿಸಿದ್ದರು. ಶತಮಾನೋತ್ಸವದ ರ‌್ಯಾಲಿಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಅನುರಾಗ ಠಾಕೂರ್ ಅವರೊಂದಿಗೆ ದೀಪ ಬೆಳಗಿಸುವ ಮೂಲಕ ಶತಮಾನೋತ್ಸವಕ್ಕೆ ಚಾಲನೆ ನೀಡಿದರು. ಕೆಎಲ್‌ಇ ಅಂಚೆ ಚೀಟಿ, ಶತಮಾನೋತ್ಸವದ ಲಾಂಛನ ಅನಾವರಣಗೊಳಿಸಿದರು. ಇಡೀ ದಿನ ಕೆಎಲ್‌ಇ ಪರಿವಾರದೊಂದಿಗೆ ಉತ್ಸಾಹದಿಂದ ಕಳೆದರು. ಕೆಎಲ್‌ಇ ಪ್ರಸಾರಂಗಕ್ಕೆ ಭೇಟಿ ನೀಡಿ, ಪ್ರಕಟಣೆಗಳನ್ನು ನೋಡಿ ಅಭಿನಂದಿಸಿದರು. ಅಂದು ನಾಡೋಜ ಕಣವಿಯವರೊಂದಿಗಿನ ಕಳೆದ ಆ ಕ್ಷಣಗಳನ್ನು ಮರೆಯಲಾಗದು ಎಂದು ಡಾ.ಕೋರೆ ಅಭಿಮಾನ ವ್ಯಕ್ತಪಡಿಸಿದ್ದಾರೆ.

  ಬೆಳಗಾವಿ ಸಾಹಿತಿಗಳಿಂದ ಕಂಬನಿ: ಡಾ.ಚನ್ನವೀರ ಕಣವಿ ಅವರ ನಿಧನಕ್ಕೆ ಬೆಳಗಾವಿ ಸಾಹಿತಿಗಳಾದ ಪ್ರೊ. ಬಿ.ಎಸ್. ಗವಿಮಠ, ಡಾ.ಬಸವರಾಜ ಜಗಜಂಪಿ, ಡಾ.ಗುರುದೇವಿ ಹುಲೆಪ್ಪನವರಮಠ, ಡಾ.ರಾಮಕೃಷ್ಣ ಮರಾಠೆ, ಡಾ. ವಿ.ಎಸ್. ಮಾಳಿ, ಏಣಗಿ ಸುಭಾಷ, ಯ.ರು. ಪಾಟೀಲ, ಬಸವರಾಜ ಗಾರ್ಗಿ, ಎಂ.ಎಸ್. ಇಂಚಲ, ಎಲ್.ಎಸ್. ಶಾಸ್ತ್ರಿ, ಎ.ಎ. ಸನದಿ, ಎ.ಬಿ. ಕೊರಬು, ರತ್ನಪ್ರಭಾ ಬೆಲ್ಲದ, ಆಶಾ ಯ ಮಕನಮರಡಿ, ಡಾ.ಮಹೇಶ ಗುರನಗೌಡರ, ಡಾ. ಡಿ.ಎಸ್. ಚೌಗಲಾ, ಪ್ರಕಾಶ ಗಿರಿಮಲ್ಲಣ್ಣವರ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

  ರಾಷ್ಟ್ರಕವಿ ಗೌರವ ಸಲ್ಲಬೇಕಿತ್ತು: ಸಾಹಿತ್ಯ ಕ್ಷೇತ್ರದಲ್ಲಿ ಚನ್ನವೀರ ಕಣವಿ ಅವರು ಆದರ್ಶದ ಮೇರು ಶಿಖರವಾಗಿ ನಿಲ್ಲುತ್ತಾರೆ. ಅವರಿಗೆ ‘ರಾಷ್ಟ್ರಕವಿ’ ಗೌರವ ಎಂದೋ ದೊರೆಯಬೇಕಾಗಿತ್ತು, ಆ ಕುರಿತು ಸರ್ಕಾರವು ಕೆಲ ದಿನಗಳ ಹಿಂದೆಯೇ ಶಿಫಾರಸು ಮಾಡಿತ್ತು. ಒಂದು ಶತಮಾನದ ಕೊಂಡಿ ಇಂದು ಕಳಚಿರುವುದು ದುಃಖದ ಸಂಗತಿ. ಕಣವಿ ಅವರು ಕನ್ನಡಿಗರ ಹೃದಯದಲ್ಲಿ ತಮ್ಮ ಸಾಹಿತ್ಯದ ಮೂಲಕ ಸದಾ ಜೀವಂತವಾಗಿರುತ್ತಾರೆ ಎನ್ನುತ್ತಾರೆ ಡಾ.ಪ್ರಭಾಕರ ಕೋರೆ.

  ನಾನು ಸಾಹಿತ್ಯದ ಅಭ್ಯಾಸಿ ಅಲ್ಲದಿದ್ದರೂ ಕಣವಿ ಅವರ ಮೃದುಮಧುರ ನುಡಿಗೆ, ಸರಳ ಸಜ್ಜನಿಕೆಯ ವ್ಯಕ್ತಿತ್ವಕ್ಕೆ ಪರವಶನಾಗಿದ್ದೆ. ಡಾ.ಕಣವಿ ಅವರ ಕಾವ್ಯಗಳನ್ನು ಕೇಳಿ, ಸಮಯ ಸಂದರ್ಭ ದೊರೆತಾಗ ಓದಿದ್ದೇನೆ. ಕಣವಿ ಅವರು ಪ್ರಚಾರತೆಯಿಂದ, ಪ್ರಶಸ್ತಿಗಳಿಂದ ಬಹುದೂರ ಸರಿದು ಸಾಹಿತ್ಯಮುಖೇನ ಸಮಾಜದಲ್ಲಿ ಮಾನವೀಯ ಮೌಲ್ಯ ಉಣಬಡಿಸಿದರು. ಅವರು ಇಂದಿನ ಯುವ ಸಾಹಿತಿಗಳಿಗೆ ಬರಹಗಾರರಿಗೆ ಆದರ್ಶ, ನಿದರ್ಶನವಾಗಿದ್ದಾರೆ. ಸಾಹಿತ್ಯದ ನಿಜ ಆರಾಧಕರಾಗಿ, ಬರೆದಂತೆ ಬದುಕಿ, ಯಾವುದೇ ಹಮ್ಮುಬಿಮ್ಮುಗಳನ್ನು ಹೊಂದದೆ ಉದಾತ್ತವಾಗಿ ಆಲೋಚಿಸಿದರು. ಜೀವನದಲ್ಲಿ ನುಡಿದಂತೆ ನಡೆದರು ಎಂದು ಡಾ.ಕಣವಿ ಅವರೊಂದಿಗಿನ ಒಡನಾಟವನ್ನು ಡಾ.ಕೋರೆ ಸ್ಮರಿಸಿಕೊಂಡರು.

  See also  ಹೃದಯಾಘಾತದಿಂದ ಶಿಕ್ಷಕ ಸಾವು
  Array

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts