ಕೆಎಫ್​ಡಿ ಸಂತ್ರಸ್ತ ಕುಟುಂಬಗಳಿಗೆ ಸಿಗದ ಪರಿಹಾರ

ಶಿವಮೊಗ್ಗ: ಚುನಾವಣೆ ಭರಾಟೆಯಲ್ಲಿ ಕೆಎಫ್​ಡಿ ಸಂತ್ರಸ್ತರು ನಿರ್ಲಕ್ಷ್ಯ್ಕೆ ತುತ್ತಾಗಿದ್ದು, ಮೃತರ ಕುಟುಂಬಗಳಿಗೆ ಪರಿಹಾರ ಬಿಡುಗಡೆಗೆ ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಗೆ ಧೂಳು ಹಿಡಿದಿದೆ.

ಜಿಲ್ಲೆಗೆ ಭೇಟಿ ನೀಡಿದ್ದ ಆರೋಗ್ಯ ಸಚಿವರು, ಉಸ್ತುವಾರಿ ಸಚಿವರು, ಮುಖ್ಯಮಂತ್ರಿ ಕೂಡ ಕೆಎಫ್​ಡಿಯಿಂದ ಮೃತರಾದ ಕುಟುಂಬಗಳಿಗೆ ಪರಿಹಾರದ ಭರವಸೆ ನೀಡಿ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದರು. ಇದೆಲ್ಲ ಆಗಿದ್ದು ಮೂರು ತಿಂಗಳ ಹಿಂದೆ.

ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ ಸರ್ಕಾರ ಮಾತ್ರ ಕಣ್ತೆರೆಯಲೇ ಇಲ್ಲ. ಬಜೆಟ್ ಘೊಷಣೆ ಬಳಿಕ ಸಂಪೂರ್ಣವಾಗಿ ಚುನಾವಣೆಯತ್ತ ಮುಖಮಾಡಿದ ಕಾರಣ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಎಂಬುದು ಮರೀಚಿಕೆಯಾಗಿಯೇ ಉಳಿಯಿತು.

ಸಾಗರ ತಾಲೂಕು ಅರಳಗೋಡು ಭಾಗದ ಜನರು ಕೆಎಫ್​ಡಿ (ಮಂಗನ ಕಾಯಿಲೆ)ಯಿಂದ ಬಸವಳಿದರು. ಕೆಲವರು ಇನ್ನೂ ಜ್ವರದಿಂದ ಚೇತರಿಸಿಕೊಂಡಿಲ್ಲ. ಕೇವಲ ಮೂರು ತಿಂಗಳ ಅವಧಿಯಲ್ಲಿ ಈ ಭಾಗದಲ್ಲೇ 15 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಬಹುತೇಕರು ಕುಟುಂಬದ ಆಧಾರವಾಗಿದ್ದರು. ಅವರ ಅಗಲಿಕೆಯಿಂದ ಇಡೀ ಕುಟುಂಬ ಬೀದಿಗೆ ಬಂದಿದೆ. ಸರ್ಕಾರದ ಪರಿಹಾರದ ಭರವಸೆ ಇನ್ನೂ ಈಡೇರಿಲ್ಲ.

ಆರೋಪ-ಪ್ರತ್ಯಾರೋಪಕ್ಕೆ ಸೀಮಿತ:ಇದೀಗ ಚುನಾವಣೆ ಪ್ರಚಾರದಲ್ಲಿ ಮಂಗನ ಕಾಯಿಲೆ ಮೈತ್ರಿಕೂಟ ಹಾಗೂ ಬಿಜೆಪಿ ನಡುವೆ ಆರೋಪ-ಪ್ರತ್ಯಾರೋಪಕ್ಕೆ ಸೀಮಿತವಾಗಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರು ಅಪ್ಪಿತಪ್ಪಿಯೂ ಕೆಎಫ್​ಡಿಯಿಂದ ಅಸುನೀಗಿದ ವ್ಯಕ್ತಿಗಳ ಕುಟುಂಬಕ್ಕೆ ಪರಿಹಾರ ನೀಡುವ ಮಾತನಾಡುತ್ತಿಲ್ಲ.

ಮೈತ್ರಿಕೂಟದ ಮುಖಂಡರು ಮಂಗನ ಕಾಯಿಲೆ ನಿಯಂತ್ರಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ. ಹಾಲಿ ಸಂಸದರು ಈ ಸಮಸ್ಯೆಯನ್ನು ಕೇಂದ್ರದ ಮುಂದೆ ತರುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಸಂತ್ರಸ್ತ ಕುಟುಂಬಗಳು ಮಾತ್ರ ಇನ್ನೂ ರಾಜ್ಯ ಸರ್ಕಾರದ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ. ಚುನಾವಣೆ ಬಳಿಕವಾದರೂ ಪರಿಹಾರ ಸಿಗಬಹುದೆಂದು ನಿರೀಕ್ಷೆಯಿಂದ ಕಾಯುತ್ತಿದ್ದಾರೆ.