ಕೆಎಫ್​ಡಿ ನಿಯಂತ್ರಿಸಲು ಸೂಚನೆ

ತೀರ್ಥಹಳ್ಳಿ: ತಾಲೂಕಿನಲ್ಲಿ ಕೆಎಫ್​ಡಿ ಸೋಂಕನ್ನು ನಿಯಂತ್ರಿಸುವ ಸಲುವಾಗಿ ಮುಂದಿನ ಮೂರು ತಿಂಗಳ ಅವಧಿಯಲ್ಲಿ ದಿನದ 24 ತಾಸೂ ಎಚ್ಚರದಿಂದ ಇರಬೇಕು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಹೇಳಿದರು.

ಮಂಗನಕಾಯಿಲೆಗೆ ಸಂಬಂಧಿಸಿ ಸೋಮವಾರ ತಾಲೂಕು ಕಚೇರಿಯಲ್ಲಿ ಕರೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿ, ಯಾವುದೆ ಕ್ಷಣದಲ್ಲಿ ಗ್ರಾಮೀಣ ಭಾಗದ ಜನರಿಗೆ ತುರ್ತಾಗಿ ಸ್ಪಂದಿಸುವ ಸಲುವಾಗಿ ತಾಲೂಕು ಕೇಂದ್ರದಲ್ಲಿ ದೂರವಾಣಿ ಕೇಂದ್ರವನ್ನು ತೆರೆಯಬೇಕು ಎಂದರು.

ಮಾಹಿತಿ ಸಂಗ್ರಹದಲ್ಲಿ ಲೋಪವಾಗದಂತೆ ನೋಡಿಕೊಳ್ಳುವ ಹೊಣೆ ಅಧಿಕಾರಿಗಳ ಮೇಲಿದೆ. ಡಿಎಂಪಿ ತೈಲ ಹಾಗೂ ಲಸಿಕೆ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಜಾನುವಾರುಗಳ ಬೆನ್ನುಹುರಿಗೆ ಹಚ್ಚುವ ಔಷಧವನ್ನು ವಿತರಿಸುವ ವ್ಯವಸ್ಥೆ ಮಾಡಲಾಗುವುದು. ಸಿಬ್ಬಂದಿ ಓಡಾಟಕ್ಕೆ ವಾಹನದ ಕೊರತೆ ಇದ್ದರೆ ಒಂದು ಖಾಸಗಿ ವಾಹನವನ್ನು ಎರಡು ತಿಂಗಳ ಅವಧಿಗೆ ಬಾಡಿಗೆಗೆ ಪಡೆಯುವಂತೆ ಸೂಚಿಸಿ ಇದರ ಬಾಡಿಗೆ ಹಣವನ್ನು ನೀಡುವುದಾಗಿ ಸೂಚಿಸಿದರು. ಪಶ್ಚಿಮಘಟ್ಟದಲ್ಲಿ ಜನರು ಟ್ರಕ್ಕಿಂಗ್ ಹೋಗುವುದು ಸಾಮಾನ್ಯವಾಗಿದೆ. ಆದರೆ ಈ ಸೋಂಕಿನ ನಿಯಂತ್ರಣದ ಸಲುವಾಗಿ ಚಾರಣವನ್ನು ಸಂಪೂರ್ಣ ನಿಷೇಧಿಸಬೇಕಿದೆ. ಆದರೆ ಹೊರಗಿನಿಂದ ರೆಸಾರ್ಟ್​ಗಳಿಗೆ ಬರುವವರನ್ನು ನಿಯಂತ್ರಿಸುವ ಅನಿವಾರ್ಯತೆಯಿಲ್ಲ ಎಂದರು.

ಸರ್ಕಾರಿ ವೈದ್ಯರ ಕೊರತೆ ಇರುವ ಜಾಗಗಳಲ್ಲಿ ಖಾಸಗಿ ವೈದ್ಯರ ನೆರವು ಪಡೆಯುವ ಸಲಹೆ ಕುರಿತಂತೆ ಮಾತನಾಡಿದ ಡಿಸಿ, ಈ ಬಗ್ಗೆ ಖಾಸಗಿ ಆಸ್ಪತ್ರೆಯ ವೈದ್ಯರನ್ನು ಸಂರ್ಪಸುವುದಾಗಿ ತಿಳಿಸಿದರು. ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರ ಕೊರತೆಯನ್ನು ನೀಗಿಸುವುದು ಕಷ್ಟದ ಕೆಲಸ. ನೇಮಕಗೊಂಡ ವೈದ್ಯರು ನಗರ ಪ್ರದೇಶದಲ್ಲಿ ಸಿಗದಿದ್ದರೆ ನೌಕರಿಗೇ ಬರುವುದಿಲ್ಲ ಎಂದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಆರೋಗ್ಯ ಇಲಾಖೆಯಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಹೆಚ್ಚುವರಿಯಾಗಿ ಇರುವ ಸಿಬ್ಬಂದಿಯನ್ನು ಈ ಕಾರ್ಯಕ್ಕೆ ನಿಯೋಜಿಸಬೇಕು. ಎಎನ್​ಎಂಗಳು ತಮ್ಮ ತಮ್ಮ ಕೇಂದ್ರದಲ್ಲೇ ಉಳಿಯುವಂತಾಗಬೇಕು. ಅವರಿಗಿರುವ ವಸತಿ ಸಮಸ್ಯೆಯನ್ನು ಬಗೆಹರಿಸುವ ಅಗತ್ಯವೂ ಇದೆ ಎಂದರು.

ಮಂಗನಕಾಯಿಲೆಯಿಂದ ಮರಣ ಹೊಂದಿದವರಿಗೆ ಸರ್ಕಾರದಿಂದ ಪರಿಹಾರ ಕೊಡಬೇಕು ಎಂಬ ತಾಪಂ ಸದಸ್ಯ ಚಂದವಳ್ಳಿ ಸೋಮಶೇಖರ್ ಪ್ರಸ್ತಾವನೆ ಬಗ್ಗೆ ಉತ್ತರಿಸಿದ ಜಿಲ್ಲಾಧಿಕಾರಿ ಈ ಕುರಿತು ಸರ್ಕಾರಕ್ಕೆ ಈಗಾಗಲೆ ಪ್ರಸ್ತಾವನೆ ಹೋಗಿದೆ ಎಂದರು.

ದಶಕಗಳಿಂದ ತಾಲೂಕನ್ನು ಕಾಡುತ್ತಿರುವ ಈ ಸೋಂಕಿಗೆ ಕಾರಣವಾಗುತ್ತಿರುವ ಮತ್ತು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಂಗಗಳನ್ನು ನಿಯಂತ್ರಿಸುವ ವಿಚಾರದಲ್ಲೂ ಸಾಕಷ್ಟು ಚರ್ಚೆ ನಡೆಯಿತು.

ತಾಪಂ ಅಧ್ಯಕ್ಷೆ ನವಮಣಿ ರವಿಕುಮಾರ್, ಉಪಾಧ್ಯಕ್ಷೆ ಯಶೋದಾ ಮಂಜುನಾಥ್, ಜಿಪಂ ಸದಸ್ಯರಾದ ಶ್ರೀನಿವಾಸ್, ಕಲ್ಪನಾ ಪದ್ಮನಾಭ್, ಅಪೂರ್ವ ಶರಧಿ, ಭಾರತಿ ಪ್ರಭಾಕರ್, ತಹಸೀಲ್ದಾರ್ ಆನಂದಪ್ಪ ನಾಯ್್ಕ ಡಾ. ರಾಜೇಶ್ ಸುರುಗಿಹಳ್ಳಿ, ಡಾ.ಕಿರಣ್, ಡಾ. ಶಂಕರಪ್ಪ, ಡಾ. ಶಮಾ, ಡಾ. ಅರುಣ್ ಕುಮಾರ್, ಆರೋಗ್ಯ, ಅರಣ್ಯ ಇಲಾಖೆ ಅಧಿಕಾರಿಗಳು ಇದ್ದರು.