ಕೆಎಫ್​ಡಿಗೆ ಮತ್ತೊಂದು ಬಲಿ

ಕಾರ್ಗಲ್: ಶಂಕಿತ ಮಂಗನ ಕಾಯಿಲೆಗೆ ಸಮೀಪದ ಕಾಳಮಂಜಿ ಗ್ರಾಮದ ಕನ್ನಮ್ಮ (50) ಎಂಬುವರು ಚಿಕಿತ್ಸೆ ಫಲಿಸದೆ ಮಣಿಪಾಲ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ. ಇದರೊಂದಿಗೆ ಕೆಎಫ್​ಡಿಗೆ ಮತ್ತೊಂದು ಬಲಿಯಾಗಿದೆ.

ಮಾ. 20ರಂದು ಕಾಳಮಂಜಿ ಗ್ರಾಮದ ಕನ್ನಮ್ಮ ಅವರ ಮನೆಗೆ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಹಾಗೂ ಆಶಾ ಕಾರ್ಯಕರ್ತೆಯರ ತಂಡ ಭೇಟಿ ನೀಡಿತ್ತು. ಆ ಸಂದರ್ಭದಲ್ಲಿ ಕನ್ನಮ್ಮ ಅವರಲ್ಲಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಳಗೋಡು ಆಸ್ಪತ್ರೆಗೆ ಕಳಿಸಲಾಗಿತ್ತು. ತೀರಾ ಬಳಲಿದ್ದ ಕನ್ನಮ್ಮ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಾ. 21ರಂದು ಸಾಗರ ಆಸ್ಪತ್ರೆಗೆ ರವಾನಿಸಿದ್ದರು. ಬಳಿಕ ಅಲ್ಲಿನ ವೈದ್ಯರ ಸೂಚನೆ ಮೇರೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಕನ್ನಮ್ಮ ಅವರು ಆರೋಗ್ಯ ಇಲಾಖೆಯಿಂದ ನೀಡಿದ್ದ ಲಸಿಕೆಯನ್ನು ಪಡೆದಿರಲಿಲ್ಲ ಎನ್ನಲಾಗಿದೆ.