ಕೆಎಂಎಫ್ ಉತ್ಪನ್ನಗಳ ಪ್ಯಾಕೆಟ್ ಮೇಲೆ ಮತದಾನ ಜಾಗೃತಿ

ಧಾರವಾಡ: ಗದಗ, ಧಾರವಾಡ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳ ಹಾಲು ಒಕ್ಕೂಟದ ಹಾಲು, ಮೊಸರು, ಮಜ್ಜಿಗೆ ಸೇರಿದಂತೆ ಇತರ ಉತ್ಪನ್ನಗಳ ಪ್ಯಾಕೆಟ್​ಗಳ ಮೂಲಕ ಮತದಾರರನ್ನು ಜಾಗೃತಿ ಮಾಡುವ ಕಾರ್ಯವನ್ನು ಜಿಲ್ಲಾ ಸ್ವೀಪ್ ಸಮಿತಿ ಕೈಗೊಂಡಿದೆ.

ಮತದಾರರ ಪಟ್ಟಿಯಲ್ಲಿ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಲು 1950 ಉಚಿತ ಸಹಾಯವಾಣಿಗೆ ಕರೆ ಮಾಡಿ ಎಂಬ ಸಂದೇಶವನ್ನು ಮುದ್ರಿಸಿ ವಿತರಣೆ ಮಾಡಲಾಗುತ್ತಿದೆ. ಧಾರವಾಡ ಘಟಕ ಪ್ರತಿದಿನ ಸುಮಾರು 90 ಸಾವಿರ ಲೀ. ಹಾಲು, 10 ಸಾವಿರ ಲೀ. ಮೊಸರು, 3 ಸಾವಿರ ಲೀ. ಮಜ್ಜಿಗೆ ಹಾಗೂ 20 ಸಾವಿರ ಲೀ. ಲಸ್ಸಿಯನ್ನು ಉತ್ಪಾದಿಸುತ್ತಿದೆ. ಎಲ್ಲ ಪ್ಯಾಕೆಟ್​ಗಳ ಮೇಲೆ ಮಾಹಿತಿ ಮುದ್ರಿಸಲಾಗಿದೆ. ಕಳೆದ ಒಂದು ವಾರದಿಂದ ಈ ಕಾರ್ಯ ಕೈಗೊಳ್ಳಲಾಗಿದೆ. ಮತದಾನದ ದಿನದವರೆಗೂ ಇದು ಮುಂದುವರಿಯಲಿದೆ ಎಂದು ಧಾರವಾಡ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಜಿ.ವಿ. ಹೆಗಡೆ ತಿಳಿಸಿದ್ದಾರೆ.