More

    ಕೃಷ್ಣ ಮಠದಲ್ಲಿ ಬ್ರಹ್ಮರಥೋತ್ಸವ

    ಉಡುಪಿ: ಕೃಷ್ಣ ಮಠದಲ್ಲಿ ಮಂಗಳವಾರ ಮಕರ ಸಂಕ್ರಾಂತಿ ಪ್ರಯುಕ್ತ ಸಾಯಂಕಾಲ ಬ್ರಹ್ಮರಥೋತ್ಸವ ನಡೆಯಿತು.
    ಬೆಳಗ್ಗೆ ಧಾರ್ಮಿಕ ವಿಧಿಗಳೊಂದಿಗೆ ಬ್ರಹ್ಮರಥ ಮುಗುಳಿ ಪ್ರತಿಷ್ಠಾಪನೆ ನೆರವೇರಿದ್ದು, ಸಾಯಂಕಾಲ ಶ್ರೀಕೃಷ್ಣ, ಮುಖ್ಯಪ್ರಾಣ ದೇವರಿಗೆ ಮಧ್ವ ಸರೋವರದಲ್ಲಿ ವೈಭವದ ತೆಪ್ಪೋತ್ಸವ ನಡೆದು ಬಳಿಕ ರಥಬೀದಿಯಲ್ಲಿ ಬ್ರಹ್ಮರಥದಲ್ಲಿ ಕೃಷ್ಣನ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಸಣ್ಣರಥದಲ್ಲಿ ಮುಖ್ಯಪ್ರಾಣ ದೇವರು, ಗರುಡರಥದಲ್ಲಿ ಅನಂತೇಶ್ವರ ಮತ್ತು ಚಂದ್ರೇಶ್ವರ ದೇವರ ಮೂರ್ತಿಗಳನ್ನಿಟ್ಟು ವಿವಿಧ ಮಠಾಧೀಶರ ಸಹಿತ ಭಕ್ತರು ತೇರನ್ನು ಎಳೆದರು. ರಥೋತ್ಸವ ವಿಶೇಷ ಆಕರ್ಷಣೆಯಾಗಿ ಸುಡುಮದ್ದು ಪ್ರದರ್ಶನ ನಡೆಯಿತು.
    ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು, ಕೃಷ್ಣಾಪುರ ಶ್ರೀವಿದ್ಯಾಸಾಗರ ತೀರ್ಥರು, ಅದಮಾರು ಶ್ರೀ ವಿಶ್ವಪ್ರಿಯ ತೀರ್ಥರು, ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥರು, ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥರು, ಸೋದೆ ವಿಶ್ವ ವಲ್ಲಭ ತೀರ್ಥರು, ಪಲಿಮಾರು ಕಿರಿಯ ಯತಿ ವಿದ್ಯಾರಾಜೇಶ್ವರ ತೀರ್ಥರು, ಅದಮಾರು ಕಿರಿಯ ಯತಿ ಈಶಪ್ರಿಯರು ಉತ್ಸವದಲ್ಲಿ ಪಾಲ್ಗೊಂಡರು.
    * ಇಂದು ಚೂರ್ಣೋತ್ಸವ: ಬುಧವಾರ ಹಗಲು ರಥೋತ್ಸವದೊಂದಿಗೆ (ಚೂರ್ಣೋತ್ಸವ) ಪಲಿಮಾರು ಪರ್ಯಾಯದ ಕೊನೆಯ ಸಪ್ತೋತ್ಸವಕ್ಕೆ ತೆರೆ ಬೀಳಲಿದೆ. ಬೆಳಗ್ಗೆ 9.30ಕ್ಕೆ ಮಹಾಪೂಜೆ ಬಳಿಕ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣ ದೇವರನ್ನು ಬ್ರಹ್ಮರಥದಲ್ಲಿರಿಸಿ ಪರ್ಯಾಯ ಶ್ರೀಪಾದರ ಸಹಿತ ಅಷ್ಟಮಠದ ಯತಿಗಳು ಮಂಗಳಾರತಿ ಬೆಳಗಲಿದ್ದಾರೆ. ಬಳಿಕ ಬ್ರಹ್ಮರಥೋತ್ಸವ ನಡೆಯಲಿದೆ. ವಸಂತ ಮಂಟಪದಲ್ಲಿ ಓಕುಳಿ ಪೂಜೆ, ಅಷ್ಟ ಮಠದ ಸ್ವಾಮೀಜಿಯವರಿಗೆ ಪರ್ಯಾಯ ಮಠದಿಂದ ಗೌರವ ಸಮರ್ಪಣೆ, ಮಧ್ವ ಸರೋವರದಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣದೇವರ ಅವಭೃತೋತ್ಸವ ನಡೆಯಲಿದೆ. ಇನ್ನು ಭಾಗೀರಥಿ ಜಯಂತಿವರೆಗೆ ಕೃಷ್ಣ ಮಠದಲ್ಲಿ ಬ್ರಹ್ಮರಥೋತ್ಸವ ಸೇವೆಗಳು ಜರುಗಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts