ಕೃಷ್ಣಬೈರೇಗೌಡರಿಗೆ ಜಿಲ್ಲಾ ಉಸ್ತುವಾರಿ?

ಕೋಲಾರ: ಜಿಲ್ಲೆಯಿಂದ ಗೆದ್ದಿರುವ ಆರು ಶಾಸಕರ ಪೈಕಿ ಶ್ರೀನಿವಾಸಪುರ ಶಾಸಕ ಕೆ.ಆರ್.ರಮೇಶ್​ಕುಮಾರ್ ಸ್ಪೀಕರ್ ಆಗಿದ್ದು, ಉಳಿದ ಐವರು ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಪಾಲುದಾರರಾಗಿದ್ದರೂ ಸಚಿವರಾಗುವ ಯೋಗ ಸಿಗದಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರಾಗುವ ಅದೃಷ್ಟ ಯಾರಿಗೆ ಎಂಬ ಜಿಜ್ಞಾಸೆ ಉಂಟಾಗಿದೆ.

ಜಿಲ್ಲೆಯಿಂದ ಗೆದ್ದಿರುವ 4 ಕಾಂಗ್ರೆಸ್, ಒಬ್ಬ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಹಾಗೂ ಜೆಡಿಎಸ್​ನ ಒಬ್ಬರು ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಅರ್ಹರಾಗಿದ್ದರೂ ರಾಜಕೀಯ ಮೇಲಾಟ, ಒಳ ಬೇಗುದಿಯಿಂದ ಪ್ರಾತಿನಿಧ್ಯತೆ ಸಿಗದಂತಾಗಿದೆ.

ಉಸ್ತುವಾರಿ ಸಚಿವ ಸ್ಥಾನಕ್ಕೆ ಜಿಲ್ಲೆಯವರೇ ಆದ ಬ್ಯಾಟರಾಯನಪುರ ಶಾಸಕ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ಹೆಸರು ಕೇಳಿ ಬಂದಿದೆ. ರಮೇಶ್​ಕುಮಾರ್ ಸೇರಿ ಜಿಲ್ಲೆಯ ಬಹುತೇಕ ಶಾಸಕರು ಕೃಷ್ಣಾಬೈರೇಗೌಡರ ಆಯ್ಕೆ ಪರವಾಗಿದ್ದು ಸಂಸದ ಕೆ.ಎಚ್.ಮುನಿಯಪ್ಪ ಇದಕ್ಕೆ ಒಪ್ಪುತ್ತಾರಾ ಎಂಬುದು ಪ್ರಶ್ನೆಯಾಗಿದೆ.

ಮಾಜಿ ಸಚಿವರ ಪುತ್ರ: ತಂದೆ, ಮಾಜಿ ಸಚಿವ ಸಿ.ಬೈರೇಗೌಡರ ನಿಧನ ನಂತರ ಕೃಷ್ಣಬೈರೇಗೌಡ ರಾಜಕೀಯಕ್ಕೆ ಪ್ರವೇಶ ಮಾಡಿ ವೇಮಗಲ್ ಕ್ಷೇತ್ರದ ಉಪ ಚುನಾವಣೆಗೆ ಜನತಾದಳದಿಂದ ಸ್ಪರ್ಧಿಸಿ ಗೆದ್ದಿದ್ದರು. ನಂತರ 2004ರಲ್ಲಿ ಕಾಂಗ್ರೆಸ್ ಸೇರಿ ಮತ್ತೊಮ್ಮೆ ಶಾಸಕರಾದರು. 2008ರ ಚುನಾವಣೆ ವೇಳೆಗೆ ವೇಮಗಲ್ ಕ್ಷೇತ್ರ ಕೋಲಾರದಲ್ಲಿ ವಿಲೀನಗೊಂಡಿದ್ದರಿಂದ ಬೆಂಗಳೂರಿನ ಬ್ಯಾಟರಾಯನಪುರಕ್ಕೆ ವಲಸೆ ಹೋಗಿ 3 ಬಾರಿ ಜಯ ಸಾಧಿಸಿದ್ದಾರೆ.

2013ರ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿದಿತ್ತು. ಜಿಲ್ಲೆಯಿಂದ ಕೆ.ಆರ್.ರಮೇಶ್​ಕುಮಾರ್​ಗೆ ರಾಜಕೀಯ ಷಡ್ಯಂತ್ರದಿಂದ ಸಚಿವ ಸ್ಥಾನ ತಪ್ಪಿತು. ಬಂಗಾರಪೇಟೆಯ ಎಸ್.ಎನ್.ನಾರಾಯಣಸ್ವಾಮಿ ಆಡಳಿತ ಪಕ್ಷದ ಶಾಸಕರಾದರೂ ಸಚಿವ ಸ್ಥಾನ ಸಿಗಲಿಲ್ಲ. ಕೆ.ಎಚ್.ಮುನಿಯಪ್ಪ ಸಲಹೆ ಮೇರೆಗೆ ಮಂಗಳೂರು ಶಾಸಕ ಯು.ಟಿ.ಖಾದರ್ ಕೋಲಾರ ಜಿಲ್ಲಾ ಉಸ್ತುವಾರಿಯಾಗಿ 3 ವರ್ಷ ಇದ್ದರು. ಬಳಿಕ ರಮೇಶ್​ಕುಮಾರ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಜಿಲ್ಲಾ ಉಸ್ತುವಾರಿಯನ್ನಾಗಿ ಮಾಡಲಾಯಿತು.

ಕೃಷ್ಣಬೈರೇಗೌಡರಿಗೆ ಶ್ರೀರಕ್ಷೆ: ಕೃಷ್ಣಬೈರೇಗೌಡ ಜಿಲ್ಲೆಯವರೇ ಆಗಿರುವುದರಿಂದ ಉಸ್ತುವಾರಿಯಾಗಿ ಕೆಲಸ ಮಾಡಲು ಸಮಸ್ಯೆಯಾಗದು. ಒಂದು ವೇಳೆ ಆಡಳಿತಕ್ಕೆ ತೊಂದರೆಯಾದರೆ ಸ್ಪೀಕರ್ ರಮೇಶ್​ಕುಮಾರ್, ಶಾಸಕ ಕೆ.ಶ್ರೀನಿವಾಸಗೌಡ ಇನ್ನಿತರರು ಬೆಂಬಲ ನೀಡುವುದರಿಂದ ಬೇರೆಯವರ ರಾಜಕೀಯ ಹಸ್ತಕ್ಷೇಪಕ್ಕೆ ಕಿಮ್ಮತ್ತು ಇರಲಾರದು ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

ಕೃಷ್ಣಬೈರೇಗೌಡ ಜಿಲ್ಲಾ ಉಸ್ತುವಾರಿ ಸಚಿವರಾದಲ್ಲಿ ತಮ್ಮ ವಿರೋಧಿಗಳು ಮೇಲುಗೈ ಸಾಧಿಸಬಹುದೆಂದು ಸಂಸದರು ಹೈಕಮಾಂಡ್ ಮೇಲೆ ಒತ್ತಡ ತಂದು ಅವಕಾಶ ತಪ್ಪಿಸಲು ಯತ್ನಿಸಬಹುದು ಎನ್ನಲಾಗಿದ್ದು, ಇಂತಹ ಸಂದರ್ಭ ಎದುರಾದಲ್ಲಿ ತಾತ್ಕಾಲಿಕವಾಗಿ ಕೆಲವು ತಿಂಗಳು ಹೊರಗಿನವರನ್ನು ನೇಮಿಸಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಯವರಿಗೆ ಅವಕಾಶ ಸಿಕ್ಕಲ್ಲಿ ಉಸ್ತುವಾರಿಯನ್ನಾಗಿ ನೇಮಿಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ಚಾಲ್ತಿಯಲ್ಲಿರುವ ಹೊರಗಿನವರು: ಕೋಲಾರ ಉಸ್ತುವಾರಿ ಸಚಿವ ಸ್ಥಾನಕ್ಕೆ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಜಮೀರ್ ಅಹಮ್ಮದ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ, ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು, ಕಾರ್ವಿುಕ ಸಚಿವ ವೆಂಕಟರವಣಪ್ಪ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೆಸರು ಕೇಳಿ ಬಂದಿದ್ದು, ಸ್ಪೀಕರ್ ಶಿಫಾರಸು ಮಾಡುವ ಹೆಸರು ಅಂತಿಮಗೊಳ್ಳಬಹುದೆಂದು ಮೂಲಗಳು ತಿಳಿಸಿವೆ.

ಈ ಹಿಂದಿದ್ದ ಹೊರಗಿನವರು: ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎನ್.ಚಲುವರಾಯಸ್ವಾಮಿ, ಬಾಲಚಂದ್ರ ಜಾರಕಿಹೊಳಿ, ಬಿ.ಎನ್.ಬಚ್ಚೇಗೌಡ, ಬಿಜೆಪಿ ಅಧಿಕಾರದ ಅವಧಿಯಲ್ಲಿ ಆನೇಕಲ್ ನಾರಾಯಣಸ್ವಾಮಿ, 2013ರಲ್ಲಿ ಯು.ಟಿ.ಖಾದರ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.

Leave a Reply

Your email address will not be published. Required fields are marked *