ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕಂಬದ ದೇವರಹಟ್ಟಿ ಗ್ರಾಮದ ತೋಟವೊಂದರ ಕೃಷಿ ಹೊಂಡದಲ್ಲಿ ಮುಳುಗಿ ಬುಧವಾರ ಇಬ್ಬರು ಮೃತಪಟ್ಟಿದ್ದಾರೆ.

ಗ್ರಾಮದ ಪ್ರವೀಣ್ (14), ರಂಗಸ್ವಾಮಿ (26) ಮೃತರು. ರಂಗಸ್ವಾಮಿ ಕೃಷಿ ಹೊಂಡದಲ್ಲಿ ಇಳಿದಿದ್ದು, ಈಜಲು ಬಾರದ ಕಾರಣ ಪ್ರವೀಣ್ ಕೂಡ ಕಾಪಾಡಲು ಯತ್ನಿಸಿದ ವೇಳೆ ದುರ್ಘಟನೆ ಸಂಭವಿಸಿ, ಇಬ್ಬರು ಸಾವನ್ನಪ್ಪಿದ್ದಾರೆ.
ರಕ್ಷಿಸಲು ಧುಮುಕಿದ ರಮೇಶ್ ಅಸ್ವಸ್ಥನಾಗಿದ್ದು, ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪಿಎಸ್‌ಐ ಸಚಿನ್ ಪಟೇಲ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತಹಸೀಲ್ದಾರ್ ಬಿ.ಬಿ.ಫಾತಿಮಾ, ಹೊಳಲ್ಕೆರೆ ವೃತ್ತ ನಿರೀಕ್ಷಕ ಚಿಕ್ಕಣ್ಣನವರ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ಕುರಿತು ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.