ಶನಿವಾರಸಂತೆ: ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲಕನೂರು ಹೊಸಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಜಲಾನಯನ ಯಾತ್ರೆಗೆ ನೇರುಗಳಲೆ ಗ್ರಾಮ ಪಂಚಾಯತಿ ಅಧ್ಯಕ್ಷ ಎಚ್.ಕೆ.ವಿನೋದ್ ಕುಮಾರ್ ಚಾಲನೆ ನೀಡಿದರು.
ಜಲಾನಯನ ಇಲಾಖೆ ನಮ್ಮ ಗ್ರಾಮಕ್ಕೆ ಒಂದು ವರದಾನವಾಗಿದೆ. ನಮ್ಮ ಊರಿನ ರೈತರಿಗೆ, ಭೂರಹಿತರಿಗೆ ಅನೇಕ ಸೌಲಭ್ಯ ನೀಡಿ ಊರಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಸಹಕಾರಿ ಆಗಿದೆ ಎಂದರು.
ಜಂಟಿ ಕೃಷಿ ನಿರ್ದೇಶಕ ಡಾ.ಚಂದ್ರಶೇಖರ್ ಮಾತನಾಡಿ, ಜಲಾನಯನದ ಮಹತ್ವ, ಮಣ್ಣು, ನೀರು, ಅರಣ್ಯ ಗಿಡಗಳ ರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಜಲ ಭದ್ರತೆ ಹಾಗೂ ಕೃಷಿ ಸುಸ್ಥಿರ ಬಗ್ಗೆ ತಿಳಿಸಿದರು. ಸಮುದಾಯದ ಭೂಮಿಗಳಲ್ಲಿ ಕಿಂಡಿ ಆಣೆ ಕಾಮಗಾರಿಗಳನ್ನು ಮಾಡುವುದರಿಂದ ಹರಿವು ನೀರನ್ನು ತಡೆದು ನಿಲ್ಲಿಸಿ ನಂತರ ಅ ನೀರನ್ನು ರೈತರು ತಮ್ಮ ಹೊಲ, ಜಮೀನು, ತೋಟಗಳಿಗೆ ನೀರು ಹಾಯಿಸಬಹುದಾಗಿ. ಕೃಷಿ ಹೊಂಡ ರಚನೆ ಮಾಡುವುದರಿಂದ ಅಂತರ್ಜಲ ಮಟ್ಟವನ್ನು ಹೆಚ್ಚಿಸಬಹುದು. ರೈತರಿಗೆ ತಮ್ಮ ತೋಟಗಳಿಗೆ ನೀರಿನ ಪೂರೈಕೆ ಮಾಡಬಹುದಾಗಿದೆ. ಇದರಿಂದ ಸಮಯಕ್ಕೆ ತಕ್ಕಂತೆ ಗಿಡಗಳಿಗೆ ನೀರು ಹಾಯಿಸಿ ಉತ್ತಮ ಫಸಲು ಪಡೆಯಲು ಸಹಕಾರಿಯಾಗಿದೆ. ಭೂರಹಿತ ಮಹಿಳೆಯರಿಗೆ ಅವರ ಜೀವನೋಪಾಯ ಘಟಕದಡಿ ಅನೇಕ ಸೌಲಭ್ಯಗಳನ್ನು ಇಲಾಖೆ ನೀಡಿದ್ದು ಅದರ ಉಪಯೋಗವನ್ನು ಭೂರಹಿತರು ಪಡೆದುಕೊಂಡಿದ್ದಾರೆ ಎಂದರು.
ಜಲಾನಯನ ಸಹಾಯಕರು, ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಉಪ ಕೃಷಿ ನಿರ್ದೇಶಕ ಡಾ. ಸೋಮಶೇಖರ್, ಸಹಾಯಕ ಕೃಷಿ ನಿರ್ದೇಶಕ ಕೆ.ಪಿ.ವೀರಣ್ಣ, ತಾಂತ್ರಿಕ ಅಧಿಕಾರಿ ಕವಿತಾ, ಐಸಿರಿ ಇದ್ದರು.
ಕಾರ್ಯಕ್ರಮಕ್ಕೂ ಮೊದಲು ಊರಿನ ಮಹಿಳೆಯರು ಕಳಸ ಹೊತ್ತು ಮುಖ್ಯ ಬೀದಿಯಲ್ಲಿ ಯಾತ್ರೆಯಲ್ಲಿ ಸಾಗಿದರು. ಮಣ್ಣು ಮತ್ತು ನೀರಿನ ಮಹತ್ವದ ಬಗ್ಗೆ ಕಲಾ ತಂಡದಿಂದ ಬೀದಿ ನಾಟಕ ಮೂಲಕ ರೈತರಲ್ಲಿ, ಸ್ವ ಸಹಾಯ ಸಂಘದ ಸದಸ್ಯರಲ್ಲಿ ಅರಿವು ಮೂಡಿಸಲಾಯಿತು.