ಕೃಷಿ ಸಾಲಕ್ಕೆ ಮಾರ್ಗಸೂಚಿ ಅಡ್ಡಿ

ಹುಬ್ಬಳ್ಳಿ: ರಾಜ್ಯ ಸರ್ಕಾರದಿಂದ ಸಾಲಮನ್ನಾ ಕುರಿತ ನಿಯಮಾವಳಿ ಬಾರದ ಕಾರಣ ಹೊಸ ಕೃಷಿ ಸಾಲ ನೀಡಲು ಸಾಧ್ಯವಾಗುತ್ತಿಲ್ಲ ಹಾಗೂ ಈ ಹಿಂದೆ ನೀಡಿರುವ ಕೃಷಿ ಸಾಲವೂ ವಸೂಲಿಯಾಗುತ್ತಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ನಗರದಲ್ಲಿ ಮಂಗಳವಾರ ನಡೆದ ಧಾರವಾಡ ಜಿಲ್ಲಾ ಬ್ಯಾಂಕ್​ಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಮಸ್ಯೆ ತೋಡಿಕೊಂಡರು.

ಜಿಲ್ಲೆಯಲ್ಲಿ ಪ್ರತಿ ತಿಂಗಳು ಸುಮಾರು 200 ಕೋಟಿ ರೂ. ಸಾಲ ವಸೂಲಿಯಾಗಬೇಕಿತ್ತು. ಆದರೆ, ರಾಜ್ಯ ಸರ್ಕಾರ ಸಾಲಮನ್ನಾ ಘೋಷಣೆ ಮಾಡಿದ ನಂತರ ಈ ಹಣ ವಸೂಲಿಯಾಗುತ್ತಿಲ್ಲ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೆ. ಈಶ್ವರ ಸಭೆಗೆ ತಿಳಿಸಿದರು. ರಾಜ್ಯ ಸರ್ಕಾರದಿಂದ ಶೀಘ್ರ ಸಾಲಮನ್ನಾದ ನಿಯಮಾವಳಿ (ಗೈಡ್​ಲೈನ್ಸ್) ಬಿಡುಗಡೆ ಮಾಡಿಸುವಂತೆ ಸಭೆಯಲ್ಲಿದ್ದ ಸಂಸದ ಪ್ರಲ್ಹಾದ ಜೋಶಿ ಅವರಲ್ಲಿ ಮನವಿ ಮಾಡಿದರು.

ಕೃಷಿ ಸಾಲ ವಸೂಲಿ ಮಾಡಬೇಕೆ ಅಥವಾ ಬೇಡವೇ ಎಂಬ ಸೂಚನೆಯೂ ಸರ್ಕಾರದಿಂದ ಇದುವರೆಗೆ ಬಂದಿಲ್ಲ. ಇದರೊಂದಿಗೆ ಬೆಳೆ ವಿಮಾ ಮೊತ್ತವೂ ರೈತರ ಖಾತೆಗಳಿಗೆ ಜಮಾ ಆಗಿಲ್ಲ. ಹೀಗಾಗಿ ಬ್ಯಾಂಕ್ ಅಧಿಕಾರಿಗಳು ಒತ್ತಡದಲ್ಲಿ ಕೆಲಸ ನಿರ್ವಹಿಸುವಂತಾಗಿದೆ. ಕೆಲವೆಡೆ ರೈತರ ಖಾತೆಗಳೂ ಬ್ಲಾಕ್ ಆಗುತ್ತಿವೆ. ಈ ಸಮಸ್ಯೆಗಳ ಕುರಿತು ರ್ಚಚಿಸಲು ಸೆ. 29ರಂದು ಬ್ಯಾಂಕರ್ಸ್ ಸಮಿತಿ ಸಭೆ ಕರೆಯಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಪ್ರಲ್ಹಾದ ಜೋಶಿ, ರೈತರ ಸಾಲ ಮನ್ನಾ ಜೊತೆಗೆ 2015-16, 2016-17, 2017-18ರ ಬೆಳೆ ವಿಮಾ ಪರಿಹಾರ ಮೊತ್ತದ ಬಿಡುಗಡೆಯೂ ಗೊಂದಲದಲ್ಲಿದೆ. ಈ ಕುರಿತು ರ್ಚಚಿಸಲು ಬ್ಯಾಂಕಿನ ಹಿರಿಯ ಅಧಿಕಾರಿಗಳು, ಜಿಲ್ಲಾಧಿಕಾರಿ ಹಾಗೂ ವಿಮಾ ಕಂಪನಿಗಳ ಸಭೆ ನಿಗದಿಪಡಿಸಿ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು.

ಕೆಲ ಬ್ಯಾಂಕ್​ಗಳು ಬೆಳೆ ವಿಮೆ ಕಂತು ಪಾವತಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದು, ಕಾಮನ್ ಸರ್ವಿಸ್ ಸೆಂಟರ್​ನಲ್ಲಿ ಕಂತು ಪಾವತಿಸುವಂತೆ ಸೂಚಿಸುತ್ತಿವೆ. ವಿಮೆ ಕಂತು ಪಾವತಿಸಿಕೊಳ್ಳುವುದು ಬ್ಯಾಂಕ್ ಅಧಿಕಾರಿಗಳ ಜವಾಬ್ದಾರಿ ಎಂದು ಹೇಳಿದರು.  ಕಮಡೊಳ್ಳಿ ಗ್ರಾಮದ ಕೆವಿಜಿ ಬ್ಯಾಂಕ್​ನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಹಾಗೂ ಇತರ ವಸತಿ ಯೋಜನೆಗಳಿಗೆ ಗ್ರಾಪಂ ಅಧ್ಯಕ್ಷರಿಂದ ಪತ್ರ ತರಬೇಕೆಂಬ ನಿಯಮ ಜಾರಿಗೊಳಿಸಿರುವುದು ಅವೈಜ್ಞಾನಿಕ. ಈ ಯೋಜನೆಗೆ ಗ್ರಾಪಂ ಅಧ್ಯಕ್ಷರ ಪತ್ರದ ಅಗತ್ಯವಿಲ್ಲ. ಇಂತಹ ಅವೈಜ್ಞಾನಿಕ ನಿಯಮಗಳಿಂದ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದಂತಾಗುತ್ತದೆ ಎಂದು ಎಚ್ಚರಿಸಿದರು.

ವಸತಿ ಯೋಜನೆಗಳಿಗೆ ಗ್ರಾಪಂ ಅಧ್ಯಕ್ಷರ ಪತ್ರ ತರುವ ನಿಯಮವನ್ನು ಹಿಂಪಡೆದಿದ್ದಾಗಿ ಕೆವಿಜಿ ಬ್ಯಾಂಕ್ ಅಧಿಕಾರಿಗಳು ಇದೇ ಸಂದರ್ಭದಲ್ಲಿ ತಿಳಿಸಿದರು.  ಮನಗುಂಡಿ ಹೆಸರನ್ನು ವನಗುಂಡಿ ಎಂದು ನಮೂದಿಸಿದ್ದಕ್ಕೆ ಈ ಹಿಂದಿನ ಬೆಳೆವಿಮಾ ಪರಿಹಾರ ಮೊತ್ತ ಬಿಡುಗಡೆಗೊಂಡಿರಲಿಲ್ಲ. ತಾಂತ್ರಿಕ ಸಮಸ್ಯೆ ಬಗೆಹರಿಸಿದ ನಂತರ ಬಾಕಿ ಹಣ ಬಿಡುಗಡೆಗೊಂಡಿದೆ ಎಂದು ಬ್ಯಾಂಕ್ ಅಧಿಕಾರಿ ತಿಳಿಸಿದರು.  ಜಿಪಂ ಸಿಇಒ ಆರ್. ಸ್ನೇಹಲ್, ನಬಾರ್ಡ್ ಡಿಜಿಎಂ ಶೀಲಾ ಭಂಡಾರಕರ ಮತ್ತಿತರರು ಉಪಸ್ಥಿತರಿದ್ದರು.

ಒತ್ತಾಯದ ವಸೂಲಿ ಬೇಡ

ನವಲಗುಂದ ತಾಲೂಕಿನಲ್ಲಿ ಕರ್ಣಾಟಕ ಬ್ಯಾಂಕ್​ನವರು ಒತ್ತಾಯದಿಂದ ಸಾಲ ವಸೂಲಿ ಮಾಡುತ್ತಿದ್ದಾರೆಂದು ರೈತ ಮುಖಂಡ ಸುಭಾಸಚಂದ್ರಗೌಡ ಪಾಟೀಲ ಹಾಗೂ ಇತರ ರೈತರು ಸಂಸದ ಪ್ರಲ್ಹಾದ ಜೋಶಿಯವರ ಬಳಿ ಇದೇ ಸಂದರ್ಭದಲ್ಲಿ ದೂರಿಕೊಂಡರು.

ಸಾಲ ಮರುಪಾವತಿಸುವಂತೆ ತಾಲೂಕಿನ ಹಲವಾರು ರೈತರಿಗೆ ಬ್ಯಾಂಕ್​ನಿಂದ ನೋಟಿಸ್ ನೀಡಲಾಗಿದೆ. ಬ್ಯಾಂಕ್​ಗಳು ಒತ್ತಾಯದಿಂದ ಸಾಲ ವಸೂಲಿ ಮಾಡದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಕೃಷಿ ಭೂಮಿಯ ಖಾತೆಗಳನ್ನು ಇಬ್ಭಾಗ ಮಾಡದಂತೆ ಉಪನೋಂದಣಿ ಕಚೇರಿಗೆ ಬ್ಯಾಂಕ್​ಗಳು ಸೂಚಿಸಿವೆ. ಕುಟುಂಬದ ಇತರರಿಗೆ ಕೃಷಿ ಭೂಮಿ ಹಂಚಿಕೆ ಮಾಡಲು ಇದರಿಂದ ಅಡ್ಡಿಯಾಗಿದ್ದು, ತಕ್ಷಣ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು.