ಕೃಷಿ ಸಹಾಯಕ ನಿರ್ದೇಶಕ ತರಾಟೆಗೆ

ಸವಣೂರ: ಸರ್ಕಾರದ ವಿವಿಧ ಯೋಜನೆಯ ಎಸ್​ಸಿ, ಎಸ್​ಟಿ ಫಲಾನುಭವಿಗಳ ಆಯ್ಕೆ ಪಟ್ಟಿಯಲ್ಲಿ ಮುಸ್ಲಿಮರ ಹೆಸರು ಸೇರಿಸಿದ್ದಕ್ಕೆ ತಾಪಂ ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣನವರ ಕೃಷಿ ಸಹಾಯಕ ನಿರ್ದೇಶಕ ಪ್ರದೀಪ ಕಿವಟೆ ಅವರನ್ನು ತರಾಟೆ ತೆಗೆದುಕೊಂಡರು.
ತಾಪಂ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಕೆಡಿಪಿ ಸಭೆಯಲ್ಲಿ ಮಾಸಿಕ ಪ್ರಗತಿ ವರದಿ ಸಲ್ಲಿಸಲು ಮುಂದಾದ ಕೃಷಿ ಅಧಿಕಾರಿಯನ್ನು ತಡೆದ ಅವರು, ಏನ್ರೀ ನಿಮ್ಮದು ಪ್ರತಿ ತಿಂಗಳು ಇದೇ ಕತೆಯಾಯಿತು. ಸರಿಯಾಗಿ ವರದಿ ಸಲ್ಲಿಸುಸುವುದಿಲ್ಲ.ಫಲಾನುಭವಿಗಳ ಆಯ್ಕೆ ಪಟ್ಟಿಯಲ್ಲಿ ಮುಸ್ಲಿಮರನ್ನು ಎಸ್​ಎಸಿ, ಎಸ್​ಟಿ ಸಮುದಾಯವರೊಂದಿಗೆ ಸೇರಿಸಿದ್ದೀರಲ್ಲ ಏಕೆ ಎಂದು ಪ್ರಶ್ನಿಸಿದರು.
ಪ್ರತಿಕ್ರಿಯಿಸಿದ ಅಧಿಕಾರಿ ಕಿವಟೆ, ಫಲಾನುಭವಿಗಳ ಪಟ್ಟಿಯಲ್ಲಿ ಇತರೆ ಶಬ್ದ ಬಿಟ್ಟು ಹೋಗಿದ್ದು, ಸರಿಪಡಿಸಲಾಗುವುದು ಎಂದರು. ಅದಕ್ಕೆ ಉಪಾಧ್ಯಕ್ಷೆ ಜಯಶೀಲಾ ರೊಟ್ಟಿವಾಡ, ಸರ್ಕಾರದ ಯೋಜನೆ, ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಅಳವಡಿಸಿಕೊಳ್ಳಿ ಎಂದರು.
ದೈಹಿಕ ಶಿಕ್ಷಣ ಅಧಿಕಾರಿ ಮೃತ್ಯುಂಜಯ ಗೌಡ್ರ ಮಾತನಾಡಿ, ಮಾ. 21ರಿಂದ ಏ. 4ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗಲಿವೆ. ತಾಲೂಕಿನ ಪ್ರೌಢ ಶಾಲೆಗಳಲ್ಲಿ ಹೆಚ್ಚುವರಿ ತರಬೇತಿ ಮೂಲಕ ಮಕ್ಕಳನ್ನು ಪರೀಕ್ಷೆಗೆ ಸಿದ್ಧಗೊಳಿಸಲಾಗಿದೆ. ಸವಣೂರಲ್ಲಿ 3, ಹತ್ತಿಮತ್ತೂರ 1, ಹೂವಿನಶಿಗ್ಲಿ 1, ಕುಣಿಮೆಳ್ಳಿಹಳ್ಳಿ 1, ಕಡಕೋಳ 1 ಸೇರಿ ತಾಲೂಕಿನಲ್ಲಿ 7 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ. 1832 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದರು.
ಟಿಎಚ್​ಒ ಡಾ. ರಾಘವೇಂದ್ರ ಜಿಗಳಿಕೊಪ್ಪ ವರದಿ ಸಲ್ಲಿಸಲು ಮುಂದಾಗುತ್ತಿದ್ದಂತೆ ಅವರನ್ನು ತಡೆದ ಅಧ್ಯಕ್ಷ ಸುಬ್ಬಣ್ಣನವರ, ಹಳ್ಳಿಗಳ ಪಿಎಚ್​ಸಿ ಕೇಂದ್ರಗಳಲ್ಲಿ ವೈದ್ಯರು, ಸಿಬ್ಬಂದಿ ಕೊರತೆಯಿದೆ. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಚಳ್ಳಾಳ ಗ್ರಾಮದಲ್ಲಿ ಹೆಚ್ಚು ಸಮಸ್ಯೆಯಾಗಿದೆ. ಇದಕ್ಕೇನು ಕ್ರಮ ಕೈಗೊಂಡಿದ್ದಿರಿ? ಎಂದರು.
ಪ್ರತಿಕ್ರಿಯಿಸಿದ ಡಾ. ಜಿಗಳಿಕೊಪ್ಪ, ಸಿಬ್ಬಂದಿ ಕೊರತೆ ಅತಿಯಾಗಿದೆ. ಆದರೂ ವಾರದಲ್ಲಿ ಮೂರು ದಿನ ಹಳ್ಳಿಗಳಿಗೆ ಸಿಬ್ಬಂದಿ ನೇಮಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದರು.
ವಿವಿಧ ಇಲಾಖೆ ಅಧಿಕಾರಿಗಳು ಪ್ರಗತಿ ವರದಿ ಸಲ್ಲಿಸಿದರು. ತಾಪಂ ಇಒ ಎಸ್. ಎಂಡಿ. ಇಸ್ಮಾಯಿಲ್, ಇತರರಿದ್ದರು.
ಮೊದ್ಲು ವರದಿ ಕೊಡಿ
ತಾಲೂಕು ತೋಟಗಾರಿಕೆ ಇಲಾಖೆ ಯೋಜನೆಗಳಡಿ ಫಲಾನುಭವಿಗಳನ್ನು ಆಯ್ಕೆಗೊಳಿಸುವ, ಕೇಂದ್ರ ಸರ್ಕಾರದ ಅನುದಾನದ ಬಳಕೆ ಕುರಿತು ಯಾಕೆ ಮಾಹಿತಿ ನೀಡುವುದಿಲ್ಲ ಎಂದು ಅಧ್ಯಕ್ಷರು ಪ್ರಶ್ನಿಸಿದರು. ಅದಕ್ಕುತ್ತರಿಸಿದ ತೋಟಗಾರಿಕೆ ತಾಲೂಕು ನಿರ್ದೇಶಕ ವಿನೋದ ಬುಕಳಿ ಉತ್ತರಿಸಿ, ತಾಪಂ ಅನುದಾನ ನೀಡಿಲ್ಲ. ಬೇಡಿಕೆ ಇಟ್ಟಲ್ಲಿ ನೀಡಲಾಗುವುದು ಎಂದರು. ‘ಏನ್ರೀ ನೀವು ಅನುದಾನ, ಯೋಜನೆ ಯಾವುದಾದ್ರು ಇರಲಿ, ಮೊದ್ಲು ವರದಿ ನೀಡಿ. ಫಲಾನುಭವಿಗಳ ಆಯ್ಕೆ ಕುರಿತು ಜಾಗೃತಿ ವಹಿಸಿ’ ಎಂದು ತಾಪಂ ಅಧ್ಯಕ್ಷ ಸುಬ್ಬಣ್ಣನವರ ಎಚ್ಚರಿಸಿದರು.
ತನಿಖೆಗೆ 8 ದಿನ ಗಡುವು
ಫೆ. 28ರಂದು ಜರುಗಿದ ಕೆಡಿಪಿ ಸಭೆಯಲ್ಲಿ ಮಂತ್ರೋಡಿ ಗ್ರಾಪಂನ 14 ಲಕ್ಷ ರೂ. ಹಗರಣದ ತನಿಖೆ ಕೈಗೊಳ್ಳುವ ಕುರಿತು ಚರ್ಚೆ ನಡೆಯಿತು. ಆಗ ತಾಪಂ ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣನವರ ಅಧಿಕಾರಿಗಳಿಗೆ ಮಾ. 5ರವರೆಗೆ ಗಡುವು ನೀಡಿದ್ದರು. ಆದರೆ, ಇಂದು ಅಧಿಕಾರಿಗಳು ತನಿಖೆ ಮುಕ್ತಾಯದ ಹಂತದಲ್ಲಿದೆ. 8 ದಿನ ಕಾಲಾವಕಾಶ ನೀಡುವಂತೆ ಕೋರಿದರ. ಅದಕ್ಕೊಪ್ಪಿದ ತಾಪಂ ಅಧ್ಯಕ್ಷರು ಸಂಪೂರ್ಣ ತನಿಖೆ ಕೈಗೊಂಡು ಜಿಪಂ ಮೇಲಧಿಕಾರಿಗಳಿಗೆ ಮಾ. 13ರಂದು ವರದಿ ಸಲ್ಲಿಸುವಂತೆ ತಾಕೀತು ಮಾಡಿದರು.