ಮೊಳಕಾಲ್ಮೂರು: ಬದಲಾದ ಜಾಗತಿಕ ಮಟ್ಟದಲ್ಲಿ ಉದಾರೀಕರಣ, ಆರ್ಥಿಕ ಹಾಗೂ ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ರೈತ ವಿರೋಧಿ ನೀತಿಗಳು ಬದಲಾಗದಿದ್ದಲ್ಲಿ ಆಹಾರ ಭದ್ರತೆ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೇಡರಡ್ಡಿಹಳ್ಳಿ ಬಸವರಡ್ಡಿ ಎಚ್ಚರಿಸಿದರು.
ರೈತ ಸಂಘ ಹಾಗೂ ದಲಿತ ಸಂಘರ್ಷ ಸಮಿತಿ ಸಹಬಾಗಿತ್ವದಲ್ಲಿ ಪಟ್ಟಣದ ನುಂಕೆಮಲೆ ಸಿದ್ದೇಶ್ವರಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರೈತ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಘಟಿತ ಹೋರಾಟದ ಮೂಲಕ ಪ್ರಗತಿಪರ ನಿಲುವಿನಲ್ಲಿ ರೈತ ಕುಲದ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿರುವ ರೈತ ಸಂಘ ಆಳುವ ಸರ್ಕಾರಗಳ ಅಂಕುಡೊಂಕು ತಿದ್ದಲು ಪ್ರಯತ್ನಿಸಿದೆ. ಆದರೂ ಸ್ವಪ್ರತಿಷ್ಠೆ ಮೆರೆಯುತ್ತಿರುವ ನಡೆ ಪ್ರಜಾಪ್ರಭುತ್ವದ ಆಶೋತ್ತರಗಳನ್ನು ಕಡೆಗಣಿಸಿದಂತಿದೆ. ದೇಶಕ್ಕೆ ಅನ್ನಕೊಡುವ ಕೃಷಿ ಕ್ಷೇತ್ರದ ಸಬಲೀಕರಣಕ್ಕೆ ಹೆಚ್ಚಿನ ಮಹತ್ವ ಕೊಡದೆ ಎಲ್ಲ ವಲಯವನ್ನು ಖಾಸಗೀಕರಣಗೊಳಿಸಲಾಗುತ್ತಿದೆ ಎಂದು ದೂರಿದರು.
43 ವರ್ಷಗಳ ಹಿಂದೆ ನರಗುಂದ-ನವಲುಗುಂದದಲ್ಲಿ ನ್ಯಾಯ ಕೇಳಲು ಬಂದಿದ್ದ ರೈತರನ್ನು ಬಲಿ ತೆಗೆದುಕೊಂಡ ಅಂದಿನ ಸರ್ಕಾರ ಅಧಿಕಾರ ಕಳೆದುಕೊಂಡಿತು. ಈಗಿನ ಕೇಂದ್ರ ಸರ್ಕಾರ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದು, ತನ್ನ ನೀತಿಯಲ್ಲಿ ಬದಲಾವಣೆ ಮಾಡಿಕೊಳ್ಳದಿದ್ದರೆ ಅಧಿಕಾರದಿಂದ ಕೆಳಗಿಳಿಯುವುದು ಖಚಿತ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಕೊಂಡಾಪುರ ಪರಮೇಶಿ ಮಾತನಾಡಿ, ದೇಶದ ಪ್ರಭುದ್ಧತೆ ಮತ್ತು ಕಟ್ಟ ಕಡೆಯ ಸಾಮಾನ್ಯ ವ್ಯಕ್ತಿಗೂ ಸಾಮಾಜಿಕ ನ್ಯಾಯದಾನ ಕೊಡಿಸಲು ರೈತ ಹಾಗೂ ದಲಿತ ಸಂಘಟನೆ ಜೋಡೆತ್ತುಗಳಂತೆ ದುಡಿಯುತ್ತಿವೆ ಎಂದರು.
ರೈತ ಸಂಘದ ತಾಲೂಕು ಅಧ್ಯಕ್ಷ ರವಿಕುಮಾರ, ಕಾರ್ಯದರ್ಶಿ ಮಂಜುನಾಥ, ಎಚ್.ಟಿ.ಚಂದ್ರಣ್ಣ, ರಾಜಣ್ಣ, ನಿಂಗಣ್ಣ, ಕೃಷ್ಣಮೂರ್ತಿ, ಗಿರಿಯಣ್ಣ, ನಾಗರಾಜ್, ಈರಣ್ಣ, ಕನಕ ಶಿವಮೂರ್ತಿ, ಗಂಗಾಧರ, ದಡ್ಡಯ್ಯ, ಶ್ರೀನಿವಾಸ ಇದ್ದರು.
ಕಾಯ್ದೆ ಹಿಂಪಡೆಯಿರಿ
ಕೃಷಿಕರಿಗೆ ಮಾರಕವಾಗಿರುವ ಭೂಸುಧಾರಣೆ, ಜಾನುವಾರು ಪ್ರತಿಬಂಧಕ ಕಾಯ್ದೆಗಳನ್ನು ಸರ್ಕಾರ ಹಿಂಪಡೆಯಬೇಕು. ಕೃಷಿ ಬೆಲೆ ಆಯೋಗಕ್ಕೆ ಶಾಸನ ಬದ್ಧ ರೂಪ ಕೊಟ್ಟು ಅದರ ಬಲವರ್ದನೆಗೆ ತಜ್ಞರನ್ನು ನೇಮಿಸಬೇಕು. ಆವರ್ತ ನಿಧಿಗೆ ಐದು ಸಾವಿರ ಕೋಟಿ ಹಣ ಮೀಸಲಿಡಬೇಕು. ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳ ಸಾಲ ಮನ್ನಾ ಮಾಡಬೇಕು. ಪ್ರಸ್ತುತ ವರ್ಷ ಚಳ್ಳಕೆರೆ-ಮೊಳಕಾಲ್ಮೂರು ಅವಳಿ ತಾಲೂಕುಗಳಲ್ಲಿ ಮಳೆ ಕೊರತೆ ಉಂಟಾಗಿದ್ದು, ಬರಪೀಡಿತ ಪ್ರದೇಶ ಎಂದು ಘೋಷಿಸಬೇಕು. ಶ್ರೀಘ್ರವಾಗಿ ಗೋಶಾಲೆಗಳನ್ನು ತೆರೆದು ಜಾನುವಾರುಗಳಿಗೆ ಮೇವು, ನೀರಿನ ಲಭ್ಯತೆಗೆ ಸೂಕ್ತ ಕ್ರಮವಹಿಸಬೇಕೆಂದು ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಕೊಂಡಾಪುರ ಪರಮೇಶಿ ಸರ್ಕಾರಕ್ಕೆ ಒತ್ತಾಯಿಸಿದರು.