ಕೃಷಿ ಮೇಳದಲ್ಲಿ 16.64 ಲಕ್ಷ ಜನ ಭಾಗಿ

ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯ ಆಯೋಜಿಸಿದ್ದ 4 ದಿನಗಳ ಕೃಷಿ ಮೇಳ ಮಂಗಳವಾರ ತೆರೆ ಕಂಡಿತು. ‘ಸಿರಿಧಾನ್ಯ ಬಳಸಿ ಆರೋಗ್ಯ ಉಳಿಸಿ’ ಘೊಷವಾಕ್ಯದೊಂದಿಗೆ ಆಯೋಜಿತವಾಗಿದ್ದ ಮೇಳದಲ್ಲಿ 16.64 ಲಕ್ಷ ರೈತ ಬಾಂಧವರು, ಕಾಲೇಜು, ಶಾಲಾ ಮಕ್ಕಳು ಹಾಗೂ ವಿಸ್ತರಣಾ ಕಾರ್ಯಕತರು ಭಾಗಿಯಾಗಿ ಮೇಳದ ಲಾಭ ಪಡೆದರು.

ಹಿಂಗಾರು ಬಿತ್ತನೆಗೆ ಅಗತ್ಯ ಸಾಮಗ್ರಿ ಖರೀದಿಯ ಜೊತೆಗೆ ಉತ್ಕೃಷ್ಟ ಗುಣಮಟ್ಟದ ಬಿತ್ತನೆಯ ಬೀಜ ಖರೀದಿಗೆಂದೇ ರಾಜ್ಯದ ವಿವಿಧೆಡೆಯ ರೈತರು ಮೇಳದಲ್ಲಿ ಪಾಲ್ಗೊಳ್ಳುವುದು ರೂಢಿ. ಅದೇರೀತಿ ಈ ಬಾರಿ ಕೃಷಿ ವಿಶ್ವವಿದ್ಯಾಲಯ ಸಂಸ್ಕರಿಸಿದ ವಿವಿಧ ಹತ್ತಾರು ತಳಿಗಳ ಬಿತ್ತನೆ ಬೀಜಗಳನ್ನು ಮಾರಾಟಕ್ಕಿಟ್ಟಿತ್ತು. 4 ದಿನಗಳ ಮೇಳದಲ್ಲಿ ಸುಮಾರು 20 ಲಕ್ಷ ರೂ. ಮೌಲ್ಯದ 547 ಕ್ವಿಂಟಲ್ ಬೀಜ ಮಾರಾಟವಾಗಿದೆ.

ಪ್ರತಿಯೊಬ್ಬ ರೈತ ಇಂದು ಸಾಂಪ್ರದಾಯಿಕ ಕೃಷಿಗಿಂತ ತಂತ್ರಜ್ಞಾನ ಅಳವಡಿಕೆಗೆ ಒತ್ತು ನೀಡಿದ್ದಾರೆ. ಕೂಲಿ ಕಾರ್ವಿುಕರ ಅಲಭ್ಯತೆಯಿಂದಾಗಿ ತಾಂತ್ರಿಕತೆ ಅನಿವಾರ್ಯ ಕೂಡ. ಹೀಗಾಗಿ ರೈತಸಮೂಹಕ್ಕೆ ಕೃಷಿಯಲ್ಲಿ ತಂತ್ರಜ್ಞಾನ ಬಳಕೆಯ ಮಾಹಿತಿ ನೀಡಲಾಗುತ್ತದೆ. ವಿಶ್ವವಿದ್ಯಾಲಯದ ಕೃಷಿ ತಂತ್ರಜ್ಞಾನ ಸಲಹಾ ಕೇಂದ್ರಕ್ಕೆ 1,820 ರೈತರು ಭೇಟಿ ನೀಡಿ ಸಮಸ್ಯೆಗಳನ್ನು ವಿಜ್ಞಾನಿಗಳ ಜೊತೆ ರ್ಚಚಿಸಿ ಸಲಹೆ, ಮಾರ್ಗದರ್ಶನ ಪಡೆದುಕೊಂಡರು. ಹೆಚ್ಚಿನ ಸಂಖ್ಯೆಯಲ್ಲಿ ಸಸ್ಯ ಸಂರಕ್ಷಣೆ ಬೇಸಾಯಶಾಸ್ತ್ರ ಮತ್ತು ತೋಟಗಾರಿಕೆ ಬೆಳೆಗಳ ಬಗ್ಗೆ ವಿಚಾರ ವಿನಿಮಯ ನಡೆಯಿತು.

ಕೃಷಿ ವಿಶ್ವವಿದ್ಯಾಲಯ ಸಾವಯವ ಕೃಷಿಗೂ ಆದ್ಯತೆ ನೀಡಿದೆ. ವಿಶ್ವವಿದ್ಯಾಲಯದ ಸಾವಯವ ಕೃಷಿ ಸಂಸ್ಥೆಯಿಂದ 1,64,000 ರೂ. ಮೌಲ್ಯದ ಜೈವಿಕ ಪೀಡೆನಾಶಕಗಳು ಮಾರಾಟವಾದವು.

ವಿಶ್ವವಿದ್ಯಾಲಯದ ಪ್ರಕಟಣಾ ಕೇಂದ್ರದ ಮಳಿಗೆಯಲ್ಲಿ 1.87 ಲಕ್ಷ ರೂ.ಗಳ ಪುಸ್ತಕಗಳು ಮಾರಾಟವಾದವು.

ರೈತರಿಂದ ರೈತರಿಗಾಗಿ…: ಕೃಷಿ ಮೇಳ ಕೇವಲ ಸಾಮಗ್ರಿ ಖರೀದಿಗೆ ಸೀಮಿತವಲ್ಲ. ಶ್ರೇಷ್ಠ ಕೃಷಿಕರು, ಪ್ರಗತಿಪರ ರೈತರು, ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಿ ಹೆಸರು ಗಳಿಸಿದ ರೈತರಿಂದ ಮಾರ್ಗದರ್ಶನ ಕೊಡಿಸಿದ್ದು ವಿಶೇಷ. ರೈತರಿಂದ ರೈತರಿಗಾಗಿ ಕಾರ್ಯಕ್ರಮದಲ್ಲಿ ಕೃಷಿ ಯಂತ್ರೋಪಕರಣ, ಕೋಳಿ, ಕುರಿ, ಆಡು, ಮೊಲ ಸಾಕಾಣಿಕೆ, ಒಣಭೂಮಿ ಬೇಸಾಯ, ತೋಟಗಾರಿಕೆ, ಸಮಪಾತಳಿ ಬದುಗಳು, ಆಧುನಿಕ ಯಂತ್ರೋಪಕರಣಗಳ ಅಳವಡಿಕೆ, ನೀರು ಸಂರಕ್ಷಣೆ, ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆಯ ಸವಲತ್ತುಗಳ ಬಗ್ಗೆ ರೈತರೇ ರೈತರಿಗೆ ಮಾಹಿತಿ ನೀಡಿದರು. ಬ್ಯಾಂಕ್ ಅಧಿಕಾರಿಗಳು ಹಾಗೂ ಕೃಷಿ ಮತ್ತು ಎಪಿಎಂಸಿ ಅಧಿಕಾರಿಗಳು ಕೃಷಿ ಅಭಿವೃದ್ಧಿಗಾಗಿ ಬ್ಯಾಂಕಿಂಗ್ ಕ್ಷೇತ್ರದಿಂದ ಲಭ್ಯವಿರುವ ಯೋಜನೆಗಳ ಬಗ್ಗೆ ಹಾಗೂ ಕೃಷಿ ಉತ್ಪನ್ನಗಳಿಗಾಗಿ ಇರುವ ಬೆಂಬಲ ಬೆಲೆಯ ಮಾಹಿತಿ ನೀಡಿದರು.

ರೈತರ ಗಮನ ಸೆಳೆದ ಕ್ಷೇತ್ರ ಪ್ರಾತ್ಯಕ್ಷಿಕೆ

ಧಾರವಾಡ; ಇಲ್ಲಿನ ಕೃಷಿ ವಿಶ್ವ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕೃಷಿ ಮೇಳದಲ್ಲಿನ ಕ್ಷೇತ್ರ ಪ್ರಾತ್ಯಕ್ಷಿಕೆಗಳು ರೈತರನ್ನು ಕೈ ಬೀಸಿ ಕರೆದರೂ, ಬೆಳೆಗಳ ಹಾಗೂ ರೋಗಗಳನ್ನು ತಡೆಯುವ ಬಗೆ ತಿಳಿಸಲು ಕೃಷಿ ತಜ್ಞರು ಸ್ಥಳದಲ್ಲಿ ಇಲ್ಲದಿದ್ದುದು ಹಲವರಲ್ಲಿ ಬೇಸರ ಮೂಡಿಸಿತು.

ಕೃಷಿ ಮೇಳಕ್ಕೆ ಆಗಮಿಸುವ ಬಹುತೇಕ ರೈತರು ಮೊದಲು ಭೇಟಿ ನೀಡುವುದೇ ಪ್ರಾತ್ಯಕ್ಷಿಕೆಗಳಿಗೆ. ಆದರೆ ಈ ಕ್ಷೇತ್ರದಲ್ಲಿ ಹತ್ತಿ ಬಗ್ಗೆ ಮಾಹಿತಿ ನೀಡುವವರನ್ನು ಬಿಟ್ಟು ಉಳಿದ ಬೆಳೆಗಳ ಮಾಹಿತಿ ನೀಡುವವರೇ ಇಲ್ಲ. ಅದರಲ್ಲೂ ಹತ್ತಿ ಬೆಳೆ ಬಗ್ಗೆ ಹೆಚ್ಚಿನ ಮಾಹಿತಿ ಕೇಳಿದರೆ, 175ನೇ ಮಳಿಗೆಗೆ ಹೋಗಿ ಎಂದು ಸಲಹೆ ನೀಡುತ್ತಿದ್ದುದು ಸಾಮಾನ್ಯವಾಗಿತ್ತು.

ಹತ್ತಿಯಲ್ಲಿ ಸಮಗ್ರ ಕೀಟ ನಿರ್ವಹಣೆ ಬಗ್ಗೆ ಪ್ರಾತ್ಯಕ್ಷಿಕೆ ಏರ್ಪಡಿಸಿದ್ದು ರೈತರಿಗೆ ಅತ್ಯಂತ ಪ್ರಯೋಜನಕರವಾಗಿದೆ. ಗೋವಿನ ಜೋಳ ಹಾಗೂ ಬೆಂಡೆ ಸಾಲಿನ ನಡುವೆ ಹತ್ತಿ ಬಿತ್ತನೆ ಮಾಡಲಾಗಿದೆ. ಬೆಂಡೆ ಕೀಟವನ್ನು ಟ್ರ್ಯಾಪ್ ಮಾಡಿದರೆ, ಗೋವಿನಜೋಳ ಕೀಟ ತಿನ್ನುವ ಪರತಂತ್ರ ಉತ್ಪತ್ತಿ ಮಾಡುತ್ತದೆ. ಈ ರೀತಿ ಪದ್ಧತಿಯಿಂದ ಹತ್ತಿ ಬೆಳೆಗೆ ರೋಗ ಬರುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ತಜ್ಞರು.

ಕೃವಿವಿ ವ್ಯಾಪ್ತಿಯ ಪ್ರದೇಶದಲ್ಲಿ ಮೆಕ್ಕೆಜೋಳ, ಜೋಳ, ತೃಣ ಧಾನ್ಯ ತಳಿಗಳು, ಟೊಮ್ಯಾಟೋ ಜಿಪಿಬಿಟಿ 08, ಸೂರ್ಯಪಾನ, ಬದನೆ ಡಿಡಬ್ಲೂಡಿಬಿ 1, ಈರುಳ್ಳಿ ಭೀಮಾ ಸೂಪರ್, ಹೈಬ್ರೀಡ್ ಹಾಗೂ ಬಿಟಿ ರಹಿತ ವಿವಿಧ ತಳಿಯ ಹತ್ತಿ ತಳಿಗಳು ಸೇರಿ ಇನ್ನೂ ಕೆಲ ತಳಿಗಳನ್ನು ಪ್ರಾತ್ಯಕ್ಷಿಕೆಯಲ್ಲಿ ಬೆಳೆಸಲಾಗಿದೆ.

ಬಿಟಿ ರಹಿತ ತಳಿ ಬೀಜಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಈ ತಳಿಗಳನ್ನು ಬಿಟಿ ಸಹಿತ ಮಾಡದೆ ನೀಡುವುದಿಲ್ಲ. ಒಂದೆರಡು ವರ್ಷದಲ್ಲಿ ಬಿಟಿ ತಳಿ ಅಭಿವೃದ್ಧಿಪಡಿಸಿದ ನಂತರವಷ್ಟೇ ರೈತರಿಗೆ ನೀಡಲಾಗುವುದು ಎನ್ನುತ್ತಾರೆ ಡಾ. ವೈ.ಆರ್. ಆಲದಕಟ್ಟಿ. 

 

ವೇದಿಕೆಯಲ್ಲೇ ಕೆಲಕಾಲ ರಂಪಾಟ

ಧಾರವಾಡ: ಕೃಷಿ ವಿಶ್ವವಿದ್ಯಾಲಯ ಕೊಡಮಾಡುವ ತಾಲೂಕು ಮಟ್ಟದ ಶ್ರೇಷ್ಠ ಯುವ ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಯೋಜಕರ ಯಡವಟ್ಟಿನಿಂದಾಗಿ ಕೆಲಕಾಲ ರಂಪಾಟಕ್ಕೆ ಕಾರಣವಾಯಿತು.

ಹಾವೇರಿ ಜಿಲ್ಲೆಯ 7 ತಾಲೂಕುಗಳ ಶ್ರೇಷ್ಠ ಕೃಷಿ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆದರೆ ಪ್ರಶಸ್ತಿ ಪತ್ರದಲ್ಲಿ ಪ್ರಕಟಿಸಿದ್ದ ಫೋಟೊಗಳು ಅದಲು ಬದಲಾಗಿದ್ದರಿಂದ ಪ್ರಶಸ್ತಿ ಪುರಸ್ಕೃತ ರೈತ ಮಹಿಳೆಯರ ಸಂಬಂಧಿಕರು ಆಕ್ಷೇಪ ವ್ಯಕ್ತಪಡಿಸಿದರು. ಸವಣೂರ ತಾಲೂಕಿನ ಶ್ರೀದೇವಿ ಮತ್ತೂರ ಹಾಗೂ ಬ್ಯಾಡಗಿ ತಾಲೂಕಿನ ಪುಷ್ಪಾ ಶ್ಯಾಡಗುಪ್ಪಿ ಅವರಿಗೆ ನೀಡಲಾದ ಪ್ರಶಸ್ತಿ ಪತ್ರದಲ್ಲಿ ಹೆಸರು ಸರಿಯಾಗಿ ನಮೂದಾಗಿದ್ದರೂ ಫೋಟೊಗಳು ಅದಲು ಬದಲಾಗಿದ್ದವು.

ಇದನ್ನು ಗಮನಿಸಿದ ಸಂಬಂಧಿಕರು ಪ್ರಶಸ್ತಿ ಪ್ರದಾನ ನಡೆಯುತ್ತಿದ್ದ ವೇದಿಕೆ ಏರಿ ಆಯೋಜಕರ ಗಮನಕ್ಕೆ ತಂದರು. ಎಲ್ಲರೂ ಒಮ್ಮೆಲೇ ವೇದಿಕೆ ಹತ್ತಿದ್ದರಿಂದ ಗೊಂದಲ ಸೃಷ್ಟಿಯಾಗಿತ್ತು. ಪ್ರಶಸ್ತಿ ಪತ್ರದಲ್ಲಾದ ಪ್ರಮಾದವನ್ನು ಸರಿಪಡಿಸುವ ಭರವಸೆ ನೀಡಿದ ನಂತರ ಪರಿಸ್ಥಿತಿ ತಿಳಿಗೊಂಡಿತು.