ಕೃಷಿ ಭೂಮಿ ಸೈಟ್​ಗಳಾಗಿ ಮಾರ್ಪಾಡು

| ಎಂ. ಶಿವರಾಜ ಬೆಂಗಳೂರು

ಪ್ರತಿಯೊಬ್ಬರ ತುತ್ತಿನ ಚೀಲ ತುಂಬುವುದು ಉದ್ಯೋಗದಿಂದಲೇ. ಎಲ್ಲರೂ ಒಂದಲ್ಲಾ ಒಂದು ಉದ್ಯೋಗದಿಂದಲೇ ಜೀವನದ ಬಂಡಿ ದೂಡಬೇಕು. ‘ಎಲ್ಲಿ ಜೀವನ ನಡೆವುದೋ ಅದೇ ನನ್ನೂರು…’ ಎಂಬುದು ಕನ್ನಡ ಸಿನಿಮಾದ ಜನಪ್ರಿಯ ಗೀತೆ. ಇದರ ಸಾರದಂತೆ ಉದ್ಯೋಗ ದೊರೆಯುವ ಕಡೆಯೇ ಜನ ಆಶ್ರಯ ಬಯಸುತ್ತಾರೆ.

ಏಷ್ಯಾದಲ್ಲೇ ಪ್ರಮುಖ ಕೈಗಾರಿಕಾ ವಲಯವಾಗಿ ಗುರುತಿಸಿಕೊಂಡಿರುವ ಪೀಣ್ಯ ಇಂಡಸ್ಟ್ರಿಯಲ್ ಏರಿಯಾವನ್ನು ತೆಕ್ಕೆಯಲ್ಲಿಟ್ಟುಕೊಂಡಿರುವ ಮಾಗಡಿ ಮುಖ್ಯರಸ್ತೆ ಇದೇ ಕಾರಣಕ್ಕೆ ರಿಯಾಲ್ಟಿ ಕ್ಷೇತ್ರದಲ್ಲಿ ಸದ್ದು ಮಾಡುತ್ತಿದೆ.

20/30ಅಡಿ ನಿವೇಶನ ದೊರೆತರೂ ಸಾಕು, ಅಲ್ಲಿ ಮನೆ ಮಾಡಿ ಸಮೀಪದಲ್ಲೇ ಯಾವುದಾದರೂ ಉದ್ಯೋಗ ಹಿಡಿಯಬಹುದು ಎಂಬುದು ಬಹುಮಂದಿಯ ಅನಿಸಿಕೆ. ಇದೇ ಕಾರಣಕ್ಕೆ ಸುಂಕದಕಟ್ಟೆಯಿಂದ ಮಾಗಡಿ ರಸ್ತೆಯುದ್ದಕ್ಕೂ ಅಂಜನಾನಗರ, ಜೈಭಾರತ್​ನಗರ, ನೈಸ್ ರಸ್ತೆ, ತಾವರೆಕೆರೆವರೆಗೆ ನಿವೇಶನಕ್ಕೆ ಭಾರಿ ಬೇಡಿಕೆ ಕುದುರಿದೆ. ರಿಯಾಲ್ಟಿ ಕ್ಷೇತ್ರದಲ್ಲಿ ಮಾಗಡಿ ಮುಖ್ಯರಸ್ತೆ ಹೆಸರು ಹೆಚ್ಚು ಕೇಳಿಬರುತ್ತಿದೆ. ನಗರೀಕರಣದತ್ತ ವೇಗವಾಗಿ ತೆರೆದುಕೊಳ್ಳುತ್ತಿರುವ ಮಾಗಡಿ ಮುಖ್ಯರಸ್ತೆಯ ಆಸುಪಾಸು ಕೃಷಿ ಭೂಮಿಗಳು ನಿವೇಶನಗಳಾಗಿ ಮಾರ್ಪಾಡಾಗುತ್ತಿದ್ದು, ಇಂಚು ಭೂಮಿಗೂ ಚಿನ್ನದ ಬೆಲೆ ಬಂದಿದೆ.

ನೈಸ್ ರಸ್ತೆ ಟೋಲ್ ಸೇರಿ ಪ್ರತಿಷ್ಠಿತ ಶಾಲಾಕಾಲೇಜುಗಳು ತಲೆಎತ್ತಿರುವುದು, ವಾಸಯೋಗ್ಯ ಪ್ರದೇಶವಾಗಿ ಮುಂಚೂಣಿಗೆ ಬರುತ್ತಿದೆ. ಬಿಬಿಎಂಪಿ ಸೇರಿ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳನ್ನು ಮಾಗಡಿ ಮುಖ್ಯರಸ್ತೆ ಸವರಿಕೊಂಡು ಸಾಗಿದ್ದು, ರಸ್ತೆ ಅಂಚಿನ ಜಮೀನು ರಿಯಾಲ್ಟಿ ಕ್ಷೇತ್ರದ ದಿಗ್ಗಜರ ಕಣ್ಣು ಸೆಳೆಯುತ್ತಿದೆ. ಕೈಗಾರಿಕಾ ಪ್ರದೇಶವಾಗಿ ಗುರುತಿಸಿಕೊಂಡಿರುವ ಪ್ರದೇಶದಲ್ಲಿ ಇತ್ತೀಚಿಗೆ ದೊಡ್ಡ ಉದ್ದಿಮೆಗಳ ಹೂಡಿಕೆದಾರರು ಕೈಹಾಕುತ್ತಿರುವುದು ಭೂಮಿ ಬೆಲೆ ಗಗನಕ್ಕೇರುವಂತೆ ಮಾಡಿದೆ. ರಸ್ತೆಯ ಎರಡೂ ಬದಿಗಳು ಕಮರ್ಷಿಯಲ್ ತಾಣಗಳಾಗಿದ್ದು, ವ್ಯಾಪಾರ ವಹಿವಾಟಿಗೆ ಹೇಳಿ ಮಾಡಿಸಿದ್ದಾಗಿದೆ. ಇತ್ತೀಚಿಗೆ ವಿಶಾಲ್ ಮಾಲ್ ಸೇರಿ ಅನೇಕ ವ್ಯಾಪಾರಿ ತಾಣಗಳು ಕಣ್ತೆರೆಯುತ್ತಿದ್ದು, ಹೂಡಿಕೆದಾರರ ಪಾಲಿಗೆ ಮಾಗಡಿ ರಸ್ತೆ ಯೋಗ್ಯ ಎನಿಸಿದೆ.

ಸುಮನಹಳ್ಳಿ ಜಂಕ್ಷನ್ ಪಾತ್ರ ಹಿರಿದು

ಮಾಗಡಿ ರಸ್ತೆಯ ಸುಮನಹಳ್ಳಿ ಜಂಕ್ಷನ್ ಸಾರಿಗೆಗೆ ಪ್ರಮುಖ ಕೊಂಡಿಯಾಗಿದ್ದು, ಮಾಗಡಿ ರಸ್ತೆ, ತುಮಕೂರು ರಸ್ತೆ, ಮೈಸೂರು ರಸ್ತೆಯನ್ನು ಸಂರ್ಪಸುತ್ತದೆ. ಅಲ್ಲದೆ ಹೊರವರ್ತಲ ರಸ್ತೆಯಾಗಿರುವುದರಿಂದ ಈ ಮೂರು ಭಾಗಗಳಿಗೆ ತೆರಳಲು ಜನರಿಗೆ ಬಹಳ ಅನುಕೂಲವಾಗಿದೆ.

ಶಿಕ್ಷಣ ಕ್ರಾಂತಿ

ಉದ್ಯೋಗ ಸಿಕ್ಕರೆ ಸಾಕೇ? ಮಕ್ಕಳ ಶಿಕ್ಷಣಕ್ಕೆ ಏನು ಮಾಡುವುದು ಎಂಬ ಚಿಂತೆ ಕಾಡುವುದು ಪಾಲಕರಲ್ಲಿ ಸಹಜ. ಇದಕ್ಕೂ ಮಾಗಡಿ ರಸ್ತೆಯಲ್ಲಿ ಉತ್ತರವಿದೆ. ಈ ರಸ್ತೆಯುದ್ದಕ್ಕೂ ಉತ್ತಮ ಶಿಕ್ಷಣ ಸಂಸ್ಥೆಗಳಿರುವುದರಿಂದ ವಸತಿ ಯೋಗ್ಯ ಪ್ರದೇಶಕ್ಕೆ ಹೇಳಿ ಮಾಡಿಸಿದಂತಿದೆ. ಸೆಂಟ್ ಲಾರೆನ್ಸ್ ಶಾಲೆ, ಎಂಬಸಿ ಇಂಟರ್​ನ್ಯಾಷನಲ್ ಸ್ಕೂಲ್, ಜ್ಞಾನಗಂಗಾ ಸ್ಕೂಲ್, ಶ್ರೀವಾಣಿ, ಈಸ್ಟ್​ವೆಸ್ಟ್ ಸೇರಿ ಅನೇಕ ಶಾಲೆಗಳಿರುವುದು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ವರದಾನವಾಗಿ ಪರಿಣಮಿಸಿದೆ.

ನೈಸ್ ರಸ್ತೆ ಸುಲಭ

ಮಾಗಡಿ ಮುಖ್ಯರಸ್ತೆ ಅಂಜನಾನಗರಕ್ಕೆ ತಾಗಿಕೊಂಡಂತೆ ಆರಂಭಗೊಳ್ಳುವ ನೈಸ್​ರಸ್ತೆಯಿಂದಾಗಿ, ಮಾಗಡಿ ರಸ್ತೆಯ ಇಕ್ಕೆಲಗಳಲ್ಲಿ ಬೃಹತ್ ವಸತಿ ಸಮುಚ್ಚಯಗಳು ತಲೆಎತ್ತುತ್ತಿವೆ. ಇಲ್ಲಿಂದ ತುಮಕೂರು ಹೆದ್ದಾರಿಗೆ ಕೇವಲ 15 ನಿಮಿಷದ ಪ್ರಯಾಣ, ಮೈಸೂರು ರಸ್ತೆ ತಲುಪಲು ಕೇವಲ 20 ನಿಮಿಷ ಸಾಕು. ಇದರಿಂದ ವರ್ಷದಿಂದ ವರ್ಷಕ್ಕೆ ರಸ್ತೆಯ ಸುತ್ತಮುತ್ತಲಿನ ಭೂಪ್ರದೇಶಗಳಿಗೆ ಇನ್ನಿಲ್ಲದ ಬೇಡಿಕೆ ಕಾಣಿಸಿಕೊಂಡಿದೆ. ನೈಸ್ ರಸ್ತೆಯ ಅಕ್ಕಪಕ್ಕ ಬಿಲ್ಡರ್ಸ್​ಗಳು ನಿವೇಶನಗಳನ್ನು ರಚಿಸುತ್ತಿದ್ದು, ಖರೀದಿದಾರರು ಮುಗಿಬೀಳುತ್ತಿದ್ದಾರೆ. ನಗರದ ಟ್ರಾಫಿಕ್ ಕಿರಿಕಿರಿ, ಮಾಲಿನ್ಯದಿಂದ ತುಸು ದೂರವೇ ಇರುವ ಈ ಪ್ರದೇಶದ ಕಡೆ ಎಲ್ಲರ ಕಣ್ಣು ನೆಟ್ಟಿದೆ.

ಹೆದ್ದಾರಿ ನಿರ್ಮಾಣ ನಿರೀಕ್ಷೆ

ಮೆಜೆಸ್ಟಿಕ್​ನಿಂದ ಅಂಜನಾನಗರ ನೈಸ್ ರಸ್ತೆ ಟೋಲ್​ವರೆಗೆ ಜೋಡಿ ರಸ್ತೆ ಹೊಂದಿರುವ ಮಾಗಡಿ ರಸ್ತೆ, ಮುಂದಕ್ಕೆ ಏಕರಸ್ತೆಯಾಗಿ ಸಾಗಿದೆ. ಈಗಾಗಲೇ ಈ ಭಾಗದಿಂದ ದ್ವಿಮುಖ ಸಂಚಾರದ ಜೋಡಿ ರಸ್ತೆ ನಿರ್ಮಾಣ (ಹೆದ್ದಾರಿ)ದ ಬಗ್ಗೆ ಮಾತು ಕೇಳಿಬರುತ್ತಿದ್ದು, ಭವಿಷ್ಯದಲ್ಲಿ ಹೆದ್ದಾರಿ ರೂಪುಗೊಂಡು ಮತ್ತಷ್ಟು ವಾಹನದಟ್ಟಣೆ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ಇದೆ. ಅಲ್ಲದೆ ಈ ಭಾಗದಲ್ಲಿ ಮೆಟ್ರೋ ಸಂಚಾರದ ಬಗ್ಗೆಯೂ ನಿರೀಕ್ಷೆ ಗರಿಗೆದರಿದ್ದು, ರಿಯಾಲ್ಟಿ ಕ್ಷೇತ್ರದ ಸ್ವರ್ಗದ ಬಾಗಿಲು ತೆರೆಯುವಂತಾಗಿದೆ.

Leave a Reply

Your email address will not be published. Required fields are marked *