ಕೃಷಿ ಕ್ಷೇತ್ರದಲ್ಲಿ ಹಲವು ಅವಕಾಶ

ಶಿವಮೊಗ್ಗ: ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಕೊಡುಗೆ ನೀಡಲು ಅಪಾರ ಅವಕಾಶಗಳಿವೆ ಎಂದು ಟೆಕ್ನೋರಿಂಗ್ಸ್ ಶಿವಮೊಗ್ಗ ಸಂಸ್ಥೆ ನಿರ್ದೇಶಕ ಬಿ.ಎಸ್.ಶರತ್ ಹೇಳಿದರು.

ಜೆಎನ್​ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ವಿಭಾಗದಿಂದ ಆಯೋಜಿಸಿದ್ದ ‘ಇಂಡಕ್ಷನ್ ಹಾರ್ಡನಿಂಗ್’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ವಿದೇಶಗಳಲ್ಲಿ ಬೃಹತ್ ಪ್ರದೇಶಕ್ಕೆ ಅನ್ವಯ ಆಗುವಂತೆ ಕೃಷಿ ಕ್ಷೇತ್ರದ ಯಂತ್ರೋಪಕರಣಗಳು ಹಾಗೂ ತಂತ್ರಜ್ಞಾನದ ನೆರವು ಇದೆ. ಭಾರತ ದೇಶದಲ್ಲಿ ಸಣ್ಣ, ಮಧ್ಯಮ ಕೃಷಿಕ ವರ್ಗವೇ ಜಾಸ್ತಿ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಕಡಿಮೆ ಎಕರೆ ವಿಸ್ತೀರ್ಣದಲ್ಲಿ ಕೃಷಿ ಮಾಡಲು ಅಗತ್ಯವಿರುವ ಉಪಕರಣ ಹಾಗೂ ತಂತ್ರಜ್ಞಾನದ ಅವಶ್ಯಕತೆ ಇದೆ ಎಂದು ತಿಳಿಸಿದರು.

ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರ ಹಾಗೂ ಸಂಶೋಧನಾ ಪ್ರಯೋಗ ನಡೆಸುವ ಮೂಲಕ ಸಣ್ಣ ಕೃಷಿಕರಿಗೆ ಉಪಯುಕ್ತ ಆಗುವ ಬಗ್ಗೆ ಆಲೋಚನೆ ನಡೆಸಬೇಕು. ಭಾರತ ದೇಶದಲ್ಲಿ ಬೃಹತ್ ಮಾರುಕಟ್ಟೆ ಸಿಗಲಿದೆ. ಫೌಂಡ್ರಿ, ಉತ್ಪಾದನೆ, ಆಹಾರ, ತಂತ್ರಜ್ಞಾನ ಕ್ಷೇತ್ರದಲ್ಲಿರುವ ಅವಕಾಶಗಳ ಬಗ್ಗೆ ಅರಿತು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಜೆಎನ್​ಎನ್ ಕಾಲೇಜಿನಲ್ಲಿ ಹೊಸ ಆಲೋಚನೆ ಹಾಗೂ ಪ್ರಯೋಗಗಳಿಗೆ ಸೂಕ್ತ ರೀತಿಯಲ್ಲಿ ಆರ್ಥಿಕ ನೆರವು ಸಹ ನೀಡುವ ಯೋಜನೆ ಇದೆ. ವಿದ್ಯಾರ್ಥಿಗಳು ಹೊಸ ಆವಿಷ್ಕಾರಗಳನ್ನು ಕಾರ್ಯರೂಪಕ್ಕೆ ತರಲು ಚಿಂತನೆ ನಡೆಸಬೇಕು. ಉದ್ಯೋಗ ಅರಸುವ ಜತೆ ಸ್ವಯಂ ಉದ್ಯಮ ಸ್ಥಾಪನೆ ಬಗ್ಗೆಯೂ ಕಲ್ಪನೆ ಹೊಂದಬೇಕು ಎಂದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಎ.ಎಸ್.ವಿಶ್ವನಾಥ್ ಉದ್ಘಾಟಿಸಿದರು. ಐಐಎಫ್ ಶಿವಮೊಗ್ಗ ಅಧ್ಯಕ್ಷ ಡಿ.ಜಿ.ಬೆನಕಪ್ಪ ಹಾಗೂ ವಾಸವಿ ಟೆಕ್ನೋಕ್ರಾಟ್ಸ್ ನಿರ್ದೇಶಕ ದಾಮೋದರ್ ಬಾಳಿಗ ಮಾತನಾಡಿದರು. ಎನ್​ಇಎಸ್ ಉಪಾಧ್ಯಕ್ಷ ಅಶ್ವತ್ಥನಾರಾಯಣ ಶೆಟ್ಟಿ, ಕಾರ್ಯದರ್ಶಿ ಎಸ್.ಎನ್.ನಾಗರಾಜ್, ಜೆಎನ್​ಎನ್​ಸಿಇ ಪ್ರಾಚಾರ್ಯ ಪ್ರೊ. ಎಚ್.ಆರ್.ಮಹಾದೇವಸ್ವಾಮಿ, ಡಾ. ಎಚ್.ರಾಘವೇಂದ್ರ, ಎಂ.ಶಾಂತಿಕಿರಣ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *