ಕೃಷಿ ಅಭಿಯಾನ ರೈತರಿಗೆ ವರದಾನ

ದೊಡ್ಡಬಳ್ಳಾಪುರ: ಸರ್ಕಾರದ ಯೋಜನೆಗಳು, ರೈತರ ಸಮಸ್ಯೆಗಳಿಗೆ ಪರಿಹಾರ ದೊರಕಿಸಲು ಸಮಗ್ರ ಕೃಷಿ ಅಭಿಯಾನ ಪೂರಕ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಪದ್ಮಾವತಿ ಮುನೇಗೌಡ ಅಭಿಪ್ರಾಯಪಟ್ಟರು.

ತಾಲೂಕಿನ ರಾಜಘಟ್ಟ ಗ್ರಾಮದ ರಾಜೀವ ಗಾಂಧಿ ಸೇವಾ ಕೇಂದ್ರದ ಆವರಣದಲ್ಲಿ ಸೋಮವಾರ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಕಸಬಾ ಹೋಬಳಿಮಟ್ಟದ 2019-20ನೇ ಸಾಲಿನ ಸಮಗ್ರ ಕೃಷಿ ಅಭಿಯಾನದಲ್ಲಿ ಮಾತನಾಡಿದರು.

ರಾಜ್ಯ ಸರ್ಕಾರ ಕೃಷಿಕರ ಏಳಿಗೆಗಾಗಿ ಅನೇಕ ಯೋಜನೆ ಜಾರಿಗೆ ತಂದಿದೆ. ಕೃಷಿ ಹೊಂಡ, ಕೃಷಿ ಯಂತ್ರೋಪಕರಣ ವಿತರಣೆ ಹಾಗೂ ಕೃಷಿಭಾಗ್ಯ ಯೋಜನೆಯಲ್ಲಿ ಸಾಕಷ್ಟು ಉಪಯೋಗಗಳಿದ್ದು, ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ ಎಂದರು.

ಸಹಾಯಕ ಕೃಷಿ ನಿರ್ದೇಶಕ ಎಸ್.ಪಿ.ನಾರಾಯಣಸ್ವಾಮಿ ಮಾತನಾಡಿ, ತಾಲೂಕುಮಟ್ಟದಲ್ಲಿ ನಡೆಸಲಾಗುತ್ತಿದ್ದ ಕಾರ್ಯಕ್ರಮದಲ್ಲಿ ರೈತರು ಭಾಗವಹಿಸುವುದು ಕಷ್ಟವೆಂಬುದನ್ನು ಅರಿತು ಹೋಬಳಿಮಟ್ಟದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕೃಷಿ ಇಲಾಖೆ ಮುಂದಾಳತ್ವದಲ್ಲಿ ಒಂದೇ ಸೂರಿನಡಿ ರೈತರಿಗೆ ಸಂಬಂಧಪಟ್ಟ ಎಲ್ಲ ಇಲಾಖೆಗಳ ಸಹಯೋಗದೊಂದಿಗೆ ರೈತ ಪರ ಮಾಹಿತಿ ನೀಡಲಾಗುತ್ತಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸರ್ಕಾರಿ ಯೋಜನೆಗಳು, ನೂತನ ಆವಿಷ್ಕಾರಗಳ ಕುರಿತು ತಿಳಿಯಬೇಕು ಎಂದರು.

ಬೆಂಕಿರೋಗ, ಇಳಕು ರೋಗ ತಡೆಗೆ ಕೈಗೊಳ್ಳಬೇಕಾದ ಮಾಗೋಪಾಯ, ಬಳಸಬೇಕಾದ ಕ್ರಿಮಿನಾಶಕ ಕುರಿತು ಹಾಡೋನಹಳ್ಳಿಯ ಕೆವಿಕೆ ವಿಜ್ಞಾನಿ ಡಾ.ಮಂಜುನಾಥ್ ಮಾಹಿತಿ ನೀಡಿದರು.

ಕೃಷಿ, ತೋಟಗಾರಿಕೆ, ಪಶು, ರೇಷ್ಮೆ ಇಲಾಖೆ, ಅರಣ್ಯ ಇಲಾಖೆ ಸೇರಿ ಹಲವು ಇಲಾಖೆ ಅಧಿಕಾರಿಗಳು ಸರ್ಕಾರದಿಂದ ನೀಡುತ್ತಿರುವ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ತಾಪಂ ಉಪಾಧ್ಯಕ್ಷೆ ಮೀನಾಕ್ಷಿ ಕೆಂಪಣ್ಣ, ಸದಸ್ಯರಾದ ರೇಣುಕಮ್ಮ ರಾಜಣ್ಣ, ಅನ್ನಪೂರ್ಣಮ್ಮ, ಚಿಕ್ಕಆಂಜನಪ್ಪ, ವೆಂಕಟರಮಣಪ್ಪ, ಗ್ರಾಪಂ ಅಧ್ಯಕ್ಷ ಆರ್.ಎ.ಆನಂದ್, ಸದಸ್ಯ ವಿ.ಎಸ್.ಹರೀಶ್, ಕೃಷಿಕ ಸಮಾಜದ ಉಪಾಧ್ಯಕ್ಷ ಜಯರಾಂ, ಮುಖಂಡರಾದ ನಾರಾಯಣಸ್ವಾಮಿ, ಭಾಗ್ಯಮ್ಮ, ರಾಜಣ್ಣ, ತಾಂತ್ರಿಕ ಅಧಿಕಾರಿ ರೂಪಾ, ಕೃಷಿ ಅಧಿಕಾರಿಗಳಾದ ಹರೀಶ್, ಸಿದ್ದಲಿಂಗಯ್ಯ ಮತ್ತಿತರರಿದ್ದರು.

ಬಿತ್ತನೆ ಬೀಜ ಸಾಕಾಗುತ್ತಿಲ್ಲ: ರೈತರಿಗೆ ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ಸೂಕ್ತವಾಗಿ ದೊರಕುತ್ತಿಲ್ಲ. ಒಂದು ಎಕರೆಗೆ ಸಾಕಾಗುವಷ್ಟು ಮಾತ್ರ ಬಿತ್ತನೆ ಬೀಜ ವಿತರಿಸುತ್ತಿದ್ದು ಹೆಚ್ಚಿನ ಜಮೀನಿರುವ ರೈತರಿಗೆ ದೊರಕದಾಗಿ. ಈ ಕುರಿತು ಸರ್ಕಾರದ ಗಮನಕ್ಕೆ ತಂದು ಅವಶ್ಯಕತೆಗೆ ಅನುಗುಣವಗಿ ಬಿತ್ತನೆ ಬೀಜ ಪೂರೈಸಬೇಕೆಂದು ರೈತ ಮಲ್ಲೇಶ್ ಮನವಿ ಮಾಡಿದರು.

ಮಳೆಯಾಶ್ರೀತ ರೈತರ ಜೀವನಮಟ್ಟವನ್ನು ಉತ್ತಮಗೊಳಿಸಲು ರಾಜ್ಯ ಸರ್ಕಾರ ಕೃಷಿ ಅಭಿಯಾನ ಹಮ್ಮಿಕೊಂಡಿದೆ. ಇದರ ಮಾಹಿತಿ ಪಡೆದು ಉತ್ತಮ ಬೇಸಾಯ ಮಾಡುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ರೈತರಿಗೆ ಈ ಕಾರ್ಯಕ್ರಮ ವರದಾನ.

| ಅನಸೂಯಮ್ಮ ಕೃಷಿ ಅಧಿಕಾರಿ, ಕಸಬಾ ಹೋಬಳಿ

 

Leave a Reply

Your email address will not be published. Required fields are marked *