ಕೃಷಿ ಅಭಿಯಾನ ರಥಕ್ಕೆ ಚಾಲನೆ

ಯಲ್ಲಾಪುರ: ಕೃಷಿ ಇಲಾಖೆ ಆಶ್ರಯದಲ್ಲಿ ಪ್ರಸಕ್ತ ಸಾಲಿನ ಸಮಗ್ರ ಕೃಷಿ ಅಭಿಯಾನ ರಥಕ್ಕೆ ಇಲಾಖೆ ಆವಾರದಲ್ಲಿ ಶಾಸಕ ಶಿವರಾಮ ಹೆಬ್ಬಾರ ಸೋಮವಾರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ತಹಸೀಲ್ದಾರ್ ಡಿ.ಜಿ. ಹೆಗಡೆ, ಜಿಪಂ ಸದಸ್ಯೆ ಶ್ರುತಿ ಹೆಗಡೆ, ತಾಪಂ ಸದಸ್ಯೆ ಮಾಲಾ ಚಂದಾವರ, ಕಣ್ಣಿಗೇರಿ ಗ್ರಾಪಂ ಸದಸ್ಯೆ ಗಂಗಿ ಕೊಕರೆ, ತಾಪಂ ಇಒ ಡಾ. ನಾರಾಯಣ ಹೆಗಡೆ, ಜಿಪಂ ಮಾಜಿ ಸದಸ್ಯ ವಿಜಯ ಮಿರಾಶಿ, ಪಶು ಸಂಗೋಪನೆ ಇಲಾಖೆಯ ಡಾ. ಸುಬ್ರಾಯ ಭಟ್ಟ, ತೋಟಗಾರಿಕೆ ಇಲಾಖೆಯ ಶಂಕರಪ್ಪ ಅರಿಕಟ್ಟಿ, ಕೃಷಿ ಸಹಾಯಕ ನಿರ್ದೇಶಕ ವಿ.ಜಿ. ಹೆಗಡೆ, ಸಹಾಯಕ ಅಧಿಕಾರಿಗಳಾದ ಟಿ.ಎಸ್. ಚಿಕ್ಕಮಠ, ಪ್ರಮೀಳಾ ಗೋಡ್ಸೆ, ಆತ್ಮಾ ಯೋಜನೆಯ ಎಂ.ಜಿ. ಭಟ್ಟ, ಕೃಷಿಕ ಗಜಾನನ ಭಟ್ಟ ಜಡ್ಡಿ ಇತರರಿದ್ದರು. ಕಾರ್ಯಕ್ರಮಕ್ಕೆ ಎರಡು ತಾಸು ತಡವಾಗಿ ಬಂದ ಶಾಸಕರು ಸಮಗ್ರ ಕೃಷಿ ಅಭಿಯಾನ ರಥಕ್ಕೆ ಚಾಲನೆ ನೀಡಿ ತಕ್ಷಣ ನಿರ್ಗಮಿಸಿದರು. ಶಾಸಕರು ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾರೆಂದು ಕಾದು ಕುಳಿತಿದ್ದ ರೈತರು, ಅಧಿಕಾರಿಗಳು ನಿರಾಸೆಗೊಳ್ಳುವಂತಾಯಿತು. ಕೃಷಿ ಇಲಾಖೆಯ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡುವ ರಥ ಹಾಗೂ ಕೇಂದ್ರ ಸರ್ಕಾರದ ಫಸಲ್ ಬಿಮಾ, ರೈತಪರ ಯೋಜನೆಗಳ ಮಾಹಿತಿ ನೀಡುವ ರಥಗಳು ತಾಲೂಕಿನಾದ್ಯಂತ 3 ದಿನಗಳು ಸಂಚರಿಸಿ ಮಾಹಿತಿ ನೀಡಲಿವೆ.

Leave a Reply

Your email address will not be published. Required fields are marked *