ಸಚಿವ ಎನ್.ಚಲುವರಾಯಸ್ವಾಮಿ ಅನಿಸಿಕೆ, ಖಾಸಗಿ ಕೃಷಿ ವಿಜ್ಞಾನ ಕಾಲೇಜು ಉದ್ಘಾಟನೆ
ತುರುವೇಕೆರೆ: ರೈತರು ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಂಡು ಸಮಗ್ರ ಕೃಷಿಯಲ್ಲಿ ಸಾಧನೆ ಮಾಡಬೇಕು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.ತಾಲೂಕಿನ ಮಾಯಸಂದ್ರ ಟಿ.ಬಿ.ಕ್ರಾಸ್ ಬಳಿಯ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ನಿರ್ಮಾಣವಾದ ಖಾಸಗಿ ಕೃಷಿ ವಿಜ್ಞಾನ ಕಾಲೇಜು ಉದ್ಘಾಟಿಸಿ ಮಾತನಾಡಿ, ಕೃಷಿಯಿಂದ ಯಾವ ರೀತಿ ಲಾಭ ಮಾಡಬೇಕು ಎಂಬುದನ್ನು ರೈತರು ಕಲಿಯಬೇಕಿದೆ. ಒಂದೇ ಬೆಳೆ ಬೆಳೆಯುವ ಬದಲು ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ವಿವಿಧ ಬೆಳೆಗಳ ಸಂಶೋಧನೆ ಮಾಡಿದ ತಳಿಗಳನ್ನು ಆಯ್ಕೆ ಮಾಡಿಕೊಂಡು ರೈತ ಸಂಪರ್ಕ ಕೇಂದ್ರದಲ್ಲಿ ಮಾಹಿತಿ ಪಡೆದು ಸರ್ಕಾರದಿಂದ ಸಿಗುವ ಸವಲತ್ತು ಪಡೆದುಕೊಂಡು ಕೃಷಿ ಮಾಡುವಂತೆ ಸಲಹೆ ನೀಡಿದರು.
57 ವರ್ಷಗಳ ನಂತರ ಖಾಸಗಿ ಕೃಷಿ ವಿಜ್ಞಾನ ಕಾಲೇಜು ಸರ್ಕಾರ ನೀಡಲಾಗಿದೆ. ಸರ್ಕಾರದ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಮಾತ್ರ ಕೃಷಿ ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ ಇತ್ತು. ಪ್ರತಿ ವರ್ಷ ಸರ್ಕಾರದ ಕೃಷಿ ವಿಶ್ವವಿದ್ಯಾನಿಯದಲ್ಲಿ ಕೃಷಿ ಕಾಲೇಜಿನಲ್ಲಿ ಕೃಷಿ ಪದವಿ ಪಡೆಯಲು 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಾರೆ, ರಾಜ್ಯದಲ್ಲಿ ಸಿಇಟಿ ಮೂಲಕ 5000 ವಿದ್ಯಾರ್ಥಿಗಳು ಮಾತ್ರ ಆಯ್ಕೆಯಾಗುತ್ತಾರೆ. ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುವ ಉದ್ದೇಶದಿಂದ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಇದ್ದ ನಿಬಂಧನೆ, ಗೊಂದಲಗಳನ್ನು ನಿವಾರಿಸಿ ಮುಖ್ಯಮಂತ್ರಿಗಳು, ಸಚಿವರ ಬಳಿ ಚರ್ಚಿಸಿ ಆದಿಚುಂಚನಗಿರಿ ಮಠದ ಶಿಕ್ಷಣ ಟ್ರಸ್ಟ್ಗೆ ಖಾಸಗಿ
ಕೃಷಿ ವಿಜ್ಞಾನ ಕಾಲೇಜು ನೀಡಲಾಗಿದೆ ಎಂದರು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ದೇಶದ ಶೇ.60 ಜನರು ಹಳ್ಳಿಗಳಲ್ಲಿದ್ದು, ಶೇ.50 ಜನರು ವ್ಯವಸಾಯ ಮಾಡಿ ದುಡಿಮೆ ಮಾಡುತ್ತಾರೆ. ಕೃಷಿಯಿಂದ ಶೇ.18 ಮಾತ್ರ ದೇಶಕ್ಕೆ ಜಿಡಿಪಿ ಆದಾಯ ಬರುತ್ತಿದೆ. ನಮ್ಮ ದೇಶದಲ್ಲಿ ಕೃಷಿ ವಿಜ್ಞಾನವಾಗಿ ಮಾರ್ಪಟ್ಟಿಲ್ಲ. ಕೃಷಿ ಕೃಷಿಯಾಗಿಯೇ ಉಳಿದಿದೆ. ಬೇರೆ ದೇಶದ ರೈತರು ಉತ್ಪಾದನೆ ಮಾಡುವಷ್ಟು ನಮ್ಮ ರೈತರು ಮಾಡಲು ಸಾಧ್ಯವಾಗುತ್ತಿಲ್ಲ. ಕೃಷಿಯಲ್ಲಿ ಸಾಕಷ್ಟು ಬದಲಾವಣೆ ಬೇಕಿದೆ ಎಂದರು. ಕೃಷಿ ಸಚಿವರು ರಿಸ್ಕ್ ತೆಗೆದುಕೊಂಡು ನಮ್ಮ ಶಿಕ್ಷಣ ಸಂಸ್ಥೆಗೆ ಕೃಷಿ ವಿಜ್ಞಾನ ಕಾಲೇಜು ನೀಡಿದ್ದಾರೆ, ಅವರಿಗೆ ಮಠದ ಪರವಾಗಿ ಅಭಿನಂದನೆಗಳು ಎಂದು ತಿಳಿಸಿದರು. ಕಾರ್ಯಕ್ರಮಕ್ಕೂ ಮುನ್ನ ಶಾಲಾ ಮಕ್ಕಳು ಆಯೋಜಿಸಿದ್ದ ಮಕ್ಕಳ ಸಂತೆಗೆ ಕೃಷಿ ಸಚಿವರು ಭೇಟಿ ನೀಡಿ ಮಕ್ಕಳ ವ್ಯಾಪಾರವನ್ನು ವೀಸಿದರು. ಸಚಿವ ಚಲುವರಾಯಸ್ವಾಮಿ ಅವರನ್ನು ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸನ್ಮಾನಿಸಿದರು. ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ವಿವಿಧ ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ, ಶ್ರೀ ಮಂಗಳಾನಾಥ ಸ್ವಾಮೀಜಿ, ಶ್ರೀ ಚೈತನ್ಯನಾಥ ಸ್ವಾಮೀಜಿ, ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಎಸ್.ವಿ.ಸುರೇಶ್, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ.ಎ.ಶೇಖರ್, ಆದಿಚುಂಚನಗಿರಿ ಮಠದ ಸಿಇಒ ಎನ್.ಎಸ್.ರಾಮೇಗೌಡ, ಕೃಷಿ ವಿಜ್ಞಾನ ಕಾಲೇಜು ಪ್ರಾಚಾರ್ಯ ಶಿವಲಿಂಗೇಗೌಡ ಇದ್ದರು.
ರೈತ ಗೀತೆಗೆ ಅವಮಾನ : ವೇದಿಕೆಯಲ್ಲಿ ಶಾಲಾ ವಿದ್ಯಾರ್ಥಿಗಳು ರೈತ ಗೀತೆ ಹಾಡಿದರು. ಆದರೆ ಕೃಷಿ ಸಚಿವರು ಸೇರಿ ಗಣ್ಯರು ಯಾರೂ ಸಹ ಎದ್ದು ನಿಂತು ಗೌರವ ನೀಡಲಿಲ್ಲ. ಕಾರ್ಯಕ್ರಮ ಆಯೋಜಕರು ರೈತ ಗೀತೆಗೆ ಎಲ್ಲರೂ ಎದ್ದು ನಿಂತು ಗೌರವ ನೀಡುವಂತೆ ಸಲಹೆ ಸಹ ನೀಡಲಿಲ್ಲ. ಕೃಷಿ ವಿಜ್ಞಾನ ಕಾಲೇಜು ಉದ್ಘಾಟನೆಯಲ್ಲಿ ರಾಜ್ಯದ ಅನ್ನದಾತನಿಗೆ ಹಾಗೂ ರೈತ ಗೀತಗೆ ಅವಮಾನ ಮಾಡಿದರು ಎಂದು ನೆರದಿದ್ದ ರೈತರು ಅಸಮಾಧಾನ ವ್ಯಕ್ತಪಡಿಸಿದರು.