Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಕೃಷಿಕರ ಸಮಸ್ಯೆಗಳಿಗೆ ಆಳುಗರು ಕಿವಿಗೊಡಬೇಕಿದೆ

Monday, 16.01.2017, 4:00 AM       No Comments

| ವರುಣ್ ಗಾಂಧಿ

ಪಂಜಾಬಿನ ಸಂಗ್ರೂರ್ ಜಿಲ್ಲೆಯ ಖನೌರಿ-ಕಲನ್ ಗ್ರಾಮದಲ್ಲಿ ಸಟ್ಲೆಜ್ ನದಿಯಿಂದ ಮಾರ್ಗಬದಲಿಸುವ ಭಾಕ್ರಾ ಪ್ರಧಾನ ಕಾಲುವೆಯ (ಇದು 159 ಕಿ.ಮೀ. ಉದ್ದವಿದ್ದು, ಪಂಜಾಬ್​ನ ಒಟ್ಟು ಕಾಲುವೆಜಾಲದ ಶೇ. 1.1ರಷ್ಟಿದೆ) ತೂಬಿನ ಬಾಗಿಲು ಕಳೆದ ವರ್ಷ ಬೇರೆಯದೇ ಕಾರಣಕ್ಕೆ ಸುದ್ದಿಯಾಯಿತು. ಸಟ್ಲೆಜ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ನಿರ್ಗತಿಕ ಕೃಷಿಕರ ಶವಗಳು ತೂಬಿನ ಪ್ರದೇಶಕ್ಕೆ ಕೊಚ್ಚಿಕೊಂಡು ಬಂದಿರಬಹುದೇ ಎಂದು ಹುಡುಕಿಕೊಂಡು ಅವರ ಕುಟುಂಬಿಕರು ಪಟಿಯಾಲಾ, ರೋಪರ್ ಜಿಲ್ಲೆಗಳಿಂದ ಅಲ್ಲಿಗೆ ಬಂದಿದ್ದರು. ಈ ಪರಿಸ್ಥಿತಿಯ ಸಂಪೂರ್ಣ ಪ್ರಯೋಜನ ಪಡೆದಿದ್ದು ಅಲ್ಲಿನ ಖಾಸಗಿ ಮುಳುಗಾಳುಗಳು ಎನ್ನಬೇಕು; ಶವಗಳನ್ನು ಪತ್ತೆಹಚ್ಚಿ ಹೊರತೆಗೆಯಲು ಸುಮಾರು 5,000ದಿಂದ 15,000 ರೂ.ವರೆಗೆ ಅವರು ಹಣ ಕಿತ್ತಿದ್ದೇ ಇದಕ್ಕೆ ಕಾರಣ. ತಿಂಗಳೊಂದಕ್ಕೆ ಇಂಥ 30-45 ಶವಗಳು ಸಿಗುತ್ತಿದ್ದವೆಂದರೆ ಅವರು ದೋಚಿದ್ದನ್ನು ಊಹಿಸಿಕೊಳ್ಳಿ! ರಾಜ್ಯ ಸರ್ಕಾರಿ ದಾಖಲೆಗಳೇ ಹೇಳುವಂತೆ, 1995-2015ರ ವರ್ಷಗಳ ನಡುವಣ ಅವಧಿಯಲ್ಲಿ 2,632ಕ್ಕೂ ಹೆಚ್ಚು ಕೃಷಿಕರು ಪಂಜಾಬ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸತ್ತ ಕೃಷಿಕಾರ್ವಿುಕರ ಸಂಖ್ಯೆಯನ್ನೂ ಇದಕ್ಕೆ ಸೇರಿಸಿದರೆ ಒಟ್ಟು ಸಂಖ್ಯೆ 4,687ಕ್ಕೆ ಮುಟ್ಟುತ್ತದೆ. ಇತರ ಸಮೀಕ್ಷೆಗಳು ಅಂದಾಜಿಸಿರುವಂತೆ ಇಂಥ ಆತ್ಮಹತ್ಯೆಗಳ ಸಂಖ್ಯೆ 7,000ದಷ್ಟಿದೆ. ‘ಹಸಿರು ಕ್ರಾಂತಿ’ಗೆ ಹೆಸರಾದ ಪಂಜಾಬ್​ನಂಥ ರಾಜ್ಯದಲ್ಲೇ ಕೃಷಿ ಅವಲಂಬಿತರು ಹೀಗೆ ಆತ್ಮಹತ್ಯೆಗೆ ಶರಣಾಗಿದ್ದು, ಈ ಪ್ರವೃತ್ತಿ ಈಗಲೂ ಮುಂದುವರಿದಿದ್ದು ಘೊರ ಸಂಗತಿಯಲ್ಲದೆ ಮತ್ತೇನು? ಹತ್ತಿ ಬೆಳೆಯು ಬಿಳಿನೊಣಗಳಿಂದಾಗಿ ಹಾಳಾಗಿದ್ದು, ಬಾಸ್ಮತಿ ಅಕ್ಕಿಯ ಮಾರುಕಟ್ಟೆ ಬೆಲೆಯು ಪ್ರತಿ ಕ್ವಿಂಟಲ್​ಗೆ 5,000 ರೂ.ನಿಂದ 1,450 ರೂ.ಗೆ ಕುಸಿದಿದ್ದು ಮತ್ತು ಸ್ಥಳೀಯ ಸಾಲದಾತರು/ಲೇವಾದೇವಿಗಾರರು ಬಡ್ಡಿದರವನ್ನು ಶೇ. 20ಕ್ಕೇರಿಸಿದ್ದು- ಹೀಗೆ ಕೃಷಿಕರ ಆತ್ಮಹತ್ಯೆಗೆ ಅನೇಕ ಕಾರಣಗಳನ್ನು ಮುಂದುಮಾಡಲಾಗಿದೆ. ಒಟ್ಟಾರೆ ಹೇಳುವುದಾದರೆ, ಕೃಷಿಕರು ದಟ್ಟದಾರಿದ್ರ್ಯ ಸ್ಥಿತಿ ತಲುಪುವಂತಾಗಿದೆ.

ಕೃಷಿಕರ ಆತ್ಮಹತ್ಯಾ ಪ್ರವೃತ್ತಿ ಹೊಸದೇನೂ ಅಲ್ಲ. ‘ನ್ಯಾಷನಲ್ ಕ್ರೖೆಮ್ ರೆಕಾರ್ಡ್ಸ್ ಬ್ಯೂರೋ’ ಮಾಹಿತಿಯ ಅನುಸಾರ, 2015ರ ವರ್ಷವೊಂದರಲ್ಲೇ 2,195ರಷ್ಟು ಬಡ ಕೃಷಿಕರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಲ್ಲಿ ಮಹಾರಾಷ್ಟ್ರದ ಪಾಲೇ 834ರಷ್ಟಿದೆ; ಇನ್ನು 3,618ರಷ್ಟು ಸಣ್ಣ ಕೃಷಿಕರು ಕೂಡ ಆತ್ಮಹತ್ಯೆಗೆ ಶರಣಾಗಿದ್ದು, ಇಲ್ಲಿ ಕೂಡಾ ಮಹಾರಾಷ್ಟ್ರದ ಪಾಲು 1,285ರಷ್ಟಿದೆ. ಮಹಾರಾಷ್ಟ್ರ, ತೆಲಂಗಾಣ ಮತ್ತು ಕರ್ನಾಟಕದಂಥ ರಾಜ್ಯಗಳಲ್ಲಿ ಸಣ್ಣ ಕೃಷಿಕರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಹೀಗೆ ಜೀವ ಕಳೆದುಕೊಂಡಿರುವುದು ವಿಷಾದನೀಯ.

ಹೆಚ್ಚುತ್ತಿರುವ ಕೃಷಿವೆಚ್ಚ: ಗೋಧಿ ಮತ್ತು ಭತ್ತದಂಥ ‘ಏಕಫಸಲಿನ ಕೃಷಿಪದ್ಧತಿ’ ಕಾಣಬರುವುದು ಪಂಜಾಬ್​ನಂಥ ರಾಜ್ಯಗಳ ವೈಶಿಷ್ಟ್ಯ ಟ್ರ್ಯಾಕ್ಟರ್, ಸಬ್​ವುರ್ಸಿಬಲ್ ಪಂಪ್​ಗಳಂಥ ಕೃಷಿಬಳಕೆಯ ಸಲಕರಣೆ ಸಂಬಂಧಿತ ನಿಶ್ಚಿತ ವೆಚ್ಚಗಳ ಜತೆಗೆ, ರಸಗೊಬ್ಬರಗಳು, ಬೆಳೆ ಸಂರಕ್ಷಣೆಯ ರಾಸಾಯನಿಕಗಳು ಮತ್ತು ಬೀಜಗಳಿಗೆ ಸಂಬಂಧಿಸಿದ ಹೆಚ್ಚುವರಿ ವೆಚ್ಚಗಳು ಏರುತ್ತಾ ಹೋದಾಗ, ಕೃಷಿಪ್ರಕ್ರಿಯೆಯು ಆರ್ಥಿಕ ದೃಷ್ಟಿಯಿಂದ ಕಾರ್ಯಸಾಧ್ಯವಲ್ಲದ್ದಾಗಿಬಿಡುತ್ತದೆ. ಉದಾಹರಣೆಗೆ, ತೊಗರಿಬೆಳೆಯ ಬೀಜದ ಬೆಲೆ 2004ರಲ್ಲಿ ಪ್ರತಿ ಕೆ.ಜಿ.ಗೆ 27 ರೂ.ನಷ್ಟಿದ್ದುದು 2013ರಲ್ಲಿ 73 ರೂ.ಗೇರಿತ್ತು; ಭತ್ತ ಮತ್ತು ಕಬ್ಬಿನ ವಿಷಯದಲ್ಲೂ ಹೀಗೆಯೇ ಗಣನೀಯ ಏರಿಕೆಯಾಗಿದೆ. ಕೃಷಿಕರು ಬೆಳೆಯ ಬೀಜಗಳನ್ನು ‘ವಂಶಪರಂಪರಾಗತ ವಸ್ತು’ವಾಗಿ ತಂತಮ್ಮ ಮಕ್ಕಳಿಗೆ ನೀಡುತ್ತಿದ್ದ ಕಾಲವೊಂದಿತ್ತು; ಈ ಪರಿಪಾಠವೀಗ ಇಲ್ಲವಾಗಿ ಬಹಳ ಕಾಲವೇ ಆಗಿದೆ. ರಸಗೊಬ್ಬರಗಳ ಬೆಲೆಯಲ್ಲೂ ಸಾಕಷ್ಟು ಏರಿಕೆಯಾಗಿದ್ದು, ಹತ್ತಿ ಬೆಳೆಗೆ ಬಳಸುವ ಎನ್​ಪಿಕೆ ರಸಗೊಬ್ಬರಗಳ ಬೆಲೆ ಪ್ರತಿ ಕೆ.ಜಿ.ಗೆ 14 ರೂ. ಇದ್ದುದು 26 ರೂ.ಗೆ ಜಿಗಿದಿದೆ. ಮತ್ತೊಂದೆಡೆ, 2004ರಲ್ಲಿ ಪ್ರತಿ ಕೆ.ಜಿ.ಗೆ 9 ರೂ.ನಷ್ಟಿದ್ದ ಸಾದಾ ಬಾರ್ಲಿ ಬೆಳೆಬೀಜದ ಬೆಲೆಯು 2012-13ರ ಹೊತ್ತಿಗಾಗಲೇ 26 ರೂ.ಗೆ ಹಠಾತ್ತನೆ ಏರಿತು. ಇನ್ನು ಕೃಷಿಕಾರ್ವಿುಕರ ಅಥವಾ ಕೂಲಿಗಳ ವಿಷಯಕ್ಕೆ ಬರೋಣ. ಹಿಂದೆಲ್ಲಾ ಗಂಟೆಗೆ 6ರಿಂದ 9 ರೂ. ಲೆಕ್ಕದಲ್ಲಿ ಕೃಷಿಕಾರ್ವಿುಕರು ಸಿಗುತ್ತಿದ್ದರು; ಆದರೀಗ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಚಾಲ್ತಿಯಿರುವಾಗಿನ ದರಗಳನ್ನು ಹೊರತುಪಡಿಸಿಯೂ ಕೃಷಿಕಾರ್ವಿುಕರಿಗೆ ಗಂಟೆಗೆ ಕನಿಷ್ಠಪಕ್ಷ 20 ರೂ. ಕೊಡಲೇಬೇಕು. ಕೃಷಿಬಳಕೆಯ ಪ್ರಾಣಿಗಳ ಮಜೂರಿಯ ದರಗಳೂ ಇದೇ ರೀತಿಯಲ್ಲಿ ಹೆಚ್ಚಾಗಿವೆ. 2004-05ರ ವರ್ಷದಲ್ಲಿ, ಭತ್ತಕೃಷಿಗೆ ಸಂಬಂಧಿಸಿ ಬಳಸಲಾಗುವ ಪ್ರಾಣಿಗಳ ಮಜೂರಿಯು ಪ್ರತಿ ಹೆಕ್ಟೇರ್​ಗೆ ಕೇವಲ 241 ರೂ.ನಷ್ಟಿದ್ದುದು, 2012-13ರ ವೇಳೆಗಾಗಲೇ 532 ರೂ.ಗೆ

ಜಿಗಿದಿದೆ. ಸೋಯಾಬೀನ್ ಕೃಷಿಯಲ್ಲಿ, ಬೆಳೆ ಸಂರಕ್ಷಣಾ ರಾಸಾಯನಿಕಗಳ ಬಳಕೆಯ ಪ್ರಮಾಣ ಹೆಚ್ಚಿದ ಪರಿಣಾಮ, 2004-05ರ ಅವಧಿಯಲ್ಲಿ ಪ್ರತಿ ಹೆಕ್ಟೇರ್​ಗೆ 89 ರೂ.ನಷ್ಟಿದ್ದ ಕೀಟನಾಶಕಗಳ ವೆಚ್ಚವು 2012-13ರ ಹೊತ್ತಿಗಾಗಲೇ 1281 ರೂ.ಗೆ ಹೆಚ್ಚಳವಾಗಿಬಿಟ್ಟಿದೆ. ಇಂಥ ಒಂದೊಂದು ಅಂಶವೂ ಕೃಷಿಕಾರ್ಯದ ಒಟ್ಟಾರೆ ವೆಚ್ಚದ ಹೆಚ್ಚಳಕ್ಕೆ ಕಾರಣವಾಗುತ್ತವೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. 2004-05ರ ಅವಧಿಯಲ್ಲಿ ಭತ್ತಕ್ಕೆ ಸಂಬಂಧಿಸಿ ಪ್ರತಿ ಹೆಕ್ಟೇರಿಗೆ 20,407 ರೂ.ನಷ್ಟಿದ್ದ ಕೃಷಿ ನಿರ್ವಹಣಾ ವೆಚ್ಚವು 2012-13ರಲ್ಲಿ 47,644 ರೂ.ಗೆ ಏರಿರುವುದು ಇದಕ್ಕೆ ಜ್ವಲಂತಸಾಕ್ಷಿ. ಇದೇ ರೀತಿಯಲ್ಲಿ ಗೋಧಿಗೆ ಸಂಬಂಧಿಸಿಯೂ ಕೃಷಿ ನಿರ್ವಹಣಾ ವೆಚ್ಚವು ಪ್ರತಿ ಹೆಕ್ಟೇರಿಗೆ 12,850 ರೂ.ನಿಂದ ಬರೋಬ್ಬರಿ 38,578 ರೂ.ಗೆ ಏರಿದೆ ಎಂಬುದು ಉಲ್ಲೇಖಾರ್ಹ.

ಸಾಲದ ಶೂಲಕ್ಕೆ ಸಿಲುಕಿದ ಕೃಷಿಕರು: ದುಬಾರಿ ಬಡ್ಡಿಗೆ ಸಾಲನೀಡುವ ಸ್ಥಳೀಯ ಸಾಲದಾತರು ಅಥವಾ ಲೇವಾದೇವಿಗಾರರ ಕಿರುಕುಳ ತಾಳಲಾರದೆ ಬಹಳಷ್ಟು ಕೃಷಿಕರು ಆತ್ಮಹತ್ಯೆಗೆ ಮುಂದಾದರು ಎಂಬುದು ರೂಢಿಗತ ಅಭಿಪ್ರಾಯ; ಆದರೆ ‘ನ್ಯಾಷನಲ್ ಕ್ರೖೆಮ್ ರೆಕಾರ್ಡ್ಸ್ ಬ್ಯೂರೋ’ನಿಂದ ದಕ್ಕಿರುವ ಮಾಹಿತಿ ಬೇರೆಯದೇ ಕತೆಯನ್ನು ಹೇಳುತ್ತದೆ- 2015ರಲ್ಲಿ ಆತ್ಮಹತ್ಯೆ ಮಾಡಿಕೊಂಡ 3,000 ರೈತರ ಪೈಕಿ 2,474 ಮಂದಿ ಸ್ಥಳೀಯ ಬ್ಯಾಂಕುಗಳಿಂದ ಸಾಲಪಡೆದವರಾಗಿದ್ದರೆ, ಸ್ಥಳೀಯ ಸಾಲದಾತರಿಂದ ಸಾಲ ಪಡೆದವರ ಪಾಲು ಒಟ್ಟು ಸಂಖ್ಯೆಯಲ್ಲಿ ಶೇ. 9.8ರಷ್ಟಿತ್ತು ಎನ್ನುತ್ತದೆ ಈ ಅಂಕಿ-ಅಂಶ. ಋಣಭಾರದ ಕಾರಣದಿಂದಾಗಿ ಮಹಾರಾಷ್ಟ್ರದಲ್ಲಿ ಇಂಥ 1,293 ಆತ್ಮಹತ್ಯೆಗಳು ಸಂಭವಿಸಿದ್ದರೆ, ಕರ್ನಾಟಕದ ಪಾಲು 946ರಷ್ಟಿದೆ. ಆದರೆ ಪಂಜಾಬ್​ನಲ್ಲಿನ ಚಿತ್ರಣವೇ ಬೇರೆ; ಇಲ್ಲಿನ ಕೃಷಿಕರು 69,355 ಕೋಟಿ ರೂ.ನಷ್ಟು ಸಾಲಪಾವತಿಯನ್ನು ಬಾಕಿ ಉಳಿಸಿಕೊಂಡಿದ್ದು, ಇಲ್ಲಿ ಸ್ಥಳೀಯ ಬ್ಯಾಂಕುಗಳಿಗಿಂತ ಸಾಂಪ್ರದಾಯಿಕ ಸಾಲಗಾರರೇ ಸಾಲನೀಡಿಕೆಯಲ್ಲಿ ಮೇಲುಗೈ ಸಾಧಿಸಿರುವಂತೆ ತೋರುತ್ತದೆ.

ಕೃಷಿನೀತಿಯನ್ನು ಪರಿಷ್ಕರಿಸಬೇಕಿದೆ: ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಮಗ್ರ ಕೃಷಿನೀತಿಯೊಂದನ್ನು ರೂಪಿಸುವ ಅಗತ್ಯವಿದೆ. ಬೆಳೆಗಳನ್ನು ಕಾಡುವ ಪಿಡುಗುಗಳನ್ನು ನಿಯಂತ್ರಿಸಲು ಜೈವಿಕ, ರಾಸಾಯನಿಕ, ಯಾಂತ್ರಿಕ ಹಾಗೂ ಭೌತಿಕ ವಿಧಾನಗಳನ್ನು ಸಂಯೋಜಿಸುವುದರೆಡೆಗೆ ಒತ್ತುನೀಡುವ ‘ಸಂಯೋಜಿತ ಪಿಡುಗು ನಿರ್ವಹಣೆ’ (ಐಠಿಛಿಜ್ಟಚಠಿಛಿಛ ಕಛಿಠಠಿ Mಚ್ಞಚಜಛಿಞಛ್ಞಿಠಿ ಐಕM) ಮಾಗೋಪಾಯವನ್ನು ನಮ್ಮ ಕೃಷಿನೀತಿಗಳು ಉತ್ತೇಜಿಸುವಂತಾಗಬೇಕು. ಅಷ್ಟೇ ಅಲ್ಲ, ಕೀಟನಾಶಕಗಳ ಅಗತ್ಯವನ್ನು ಇಲ್ಲವಾಗಿಸುವುದಕ್ಕೆ ಅಥವಾ ಗಣನೀಯವಾಗಿ ತಗ್ಗಿಸುವುದಕ್ಕೆ ಒತ್ತುನೀಡುವಂಥ ದೂರಗಾಮಿ ಚಿಂತನೆಯ ಅಗತ್ಯವೂ ಇದೆ. ವಿಯೆಟ್ನಾಂನಲ್ಲಿ, ಮೆಕಾಂಗ್ ನದೀಮುಖಜಭೂಮಿ ಪ್ರದೇಶದ 20 ಲಕ್ಷಕ್ಕೂ ಹೆಚ್ಚು ಭತ್ತದ ಕೃಷಿಕರು, ಭತ್ತದ ಸಸಿಯನ್ನು ನಾಟಿಮಾಡಿದ ಮೊದಲ 40 ದಿನಗಳ ಅವಧಿಯಲ್ಲಿ ಕೀಟನಾಶಕದ ಬಳಕೆಗೆ ಲಗಾಮುಹಾಕುವ ಸೂತ್ರವನ್ನು ಅಳವಡಿಸಿಕೊಂಡರು. ಇದರಿಂದಾಗಿ, ಭತ್ತದ ಸಸಿಯನ್ನು ಸಾಮಾನ್ಯವಾಗಿ ಕಾಡುವ ಕ್ರಿಮಿಕೀಟಗಳನ್ನು ಬೇಟೆಯಾಡಿ ತಿನ್ನುವ ‘ಪರಭಕ್ಷಕ ಜೀರುಂಡೆ’ಗಳಿಗೆ ಉತ್ತೇಜನ ಸಿಕ್ಕಂತಾಗಿ, ಭತ್ತದ ಇಳುವರಿ ಹೆಚ್ಚಿದ್ದರ ಜತೆಗೆ, ಕೀಟನಾಶಕದ ಬಳಕೆಯಲ್ಲಿ ಶೇ. 50ಕ್ಕೂ ಹೆಚ್ಚಿನ ಕಡಿತವಾಗಲು ಸಾಧ್ಯವಾಯಿತು.

ಇನ್ನು, ಸ್ಥಳೀಯ ರಸಗೊಬ್ಬರ ಉದ್ಯಮಕ್ಕೂ ಬೆಂಬಲ ನೀಡುವ ಅಗತ್ಯವಿದೆ. ಈ ವಲಯಕ್ಕೆ ಸಕಾಲದಲ್ಲಿ ಸಬ್ಸಿಡಿ ವಿತರಿಸುವುದರಿಂದಾಗಿ, ಕಾರ್ಯೋಪಯುಕ್ತ ಬಂಡವಾಳದ ಅವಶ್ಯಕತೆಗಳನ್ನು ಸುಧಾರಿಸಿದಂತಾಗುತ್ತದೆ ಮತ್ತು ಬಾಹ್ಯ ಸಾಲಗಳ ಬದಲಿಗೆ ಆಂತರಿಕ ಸಂಪನ್ಮೂಲಗಳ ನೆರವಿನಿಂದಲೇ ವೆಚ್ಚಗಳನ್ನು ನಿಭಾಯಿಸುವುದು ಈ ಉದ್ಯಮಗಳಿಗೆ ಸಾಧ್ಯವಾಗುತ್ತದೆ. ಅನುದಾನ ನೀಡಿಕೆ ವಿಳಂಬವಾದಷ್ಟೂ ರಸಗೊಬ್ಬರ ಕಂಪನಿಗಳು ಪಾವತಿಸಬೇಕಾಗಿ ಬರುವ ಬಡ್ಡಿಯ ಮೊತ್ತ ಬೆಟ್ಟವಾಗುತ್ತದೆ. ಬೆಳೆಯನ್ನು ಕಾಡುವ ಕೀಟಗಳು ಮತ್ತು ರೋಗಲಕ್ಷಣಗಳಿಗೆ ಹಾಗೂ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಗೆ ಮದ್ದು ಅರೆಯಲು ಹೊಸ ಜೀನ್​ಸಂಯೋಜನೆಗಳನ್ನು ಗುರುತಿಸುವುದರ ಜತೆಗೆ, ಗುತ್ತಿಗೆ ಕೃಷಿಯಂಥ ಪರಿಕಲ್ಪನೆಗಳನ್ನು ಉತ್ತೇಜಿಸುವ ಕಾರ್ಯನೀತಿಗಳ ಅಗತ್ಯವಿದೆ. ಕೃಷಿ ಸಲಕರಣೆ-ಸಾಮಗ್ರಿಗಳನ್ನು ಪ್ರಸ್ತುತ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದು, ಇವನ್ನು ದೇಶೀಯವಾಗಿಯೇ ತಯಾರಿಸುವಂತಾಗುವ ನಿಟ್ಟಿನಲ್ಲಿ ಕೃಷಿ ಸಲಕರಣೆ ನೀತಿಯನ್ನೂ ಪರಿಷ್ಕರಿಸಬೇಕಿದೆ. ಸಾಂಸ್ಥಿಕ ಹಣಕಾಸು ನೆರವು ಅರ್ಹ ಕೃಷಿಕರಿಗೆ ಸುಲಭವಾಗಿ ಲಭ್ಯವಂತಾಗಬೇಕಿದೆ ಮತ್ತು ಈ ಸಂಬಂಧದ ವಿಧಿವಿಧಾನಗಳು ಸರಳೀಕೃತವಾಗಬೇಕಿದೆ. ಸಾಲದ ಸುಳಿಗೆ ಸಿಲುಕಿರುವ ರೈತರ ಗ್ರಾಮವಾರು ಪಟ್ಟಿಯನ್ನು ಪ್ರತಿವರ್ಷವೂ ಸಿದ್ಧಪಡಿಸಿ, ಸಂಭಾವ್ಯ ಆತ್ಮಹತ್ಯೆಗಳನ್ನು ತಡೆಯಬೇಕಿದೆ. ಇಂಥ ಪಟ್ಟಿಗಳನ್ನು ವಿಶ್ಲೇಷಿಸಿ ಸೂಕ್ತ ಶಿಫಾರಸು ಮಾಡುವ ಹೊಣೆಗಾರಿಕೆಯನ್ನು ನಬಾರ್ಡ್ ಮತ್ತು ಸ್ಥಳೀಯ ಆಡಳಿತ ವ್ಯವಸ್ಥೆಗೆ ವಹಿಸಬೇಕಿದೆ.

ಕೃಷಿಕರ ಆತ್ಮಹತ್ಯೆಯ ಪ್ರಕರಣಗಳು ತೀವ್ರವಾಗಿರುವ ಬಿಜನೂರು, ಬಹ್ರೇಚ್, ಖೇರಿ, ಅಲಹಾಬಾದ್, ಅಲಿಗಢ, ಮೊರಾದಾಬಾದ್​ನಲ್ಲಿನ ಹಳ್ಳಿಗಳಲ್ಲಿ ಒಮ್ಮೆ ಹಾದುಹೋದರೆ ಮನ ಕಲಕಿಬಿಡುತ್ತದೆ. ಕೃಷಿಕಾರ್ಯದಲ್ಲಿ ಎದುರಾಗುವ ಹತ್ತು ಹಲವು ಅಡಚಣೆಗಳ ನಡುವೆಯೂ ಮತ್ತು ಸಮರ್ಪಕ ವರಮಾನ ಇಲ್ಲದಂಥ ಪರಿಸ್ಥಿತಿಯಲ್ಲಿಯೂ ದೇಶದ ಕೃಷಿಕರು ತಮ್ಮ ಕುಟುಂಬಗಳಿಗೆ ಮತ್ತು ಮಕ್ಕಳ ಶಿಕ್ಷಣಕ್ಕೆ ಆಧಾರವಾಗಿರಬೇಕಾದ ಅನಿವಾರ್ಯತೆಯಿದೆ. ಸಂಕಷ್ಟಕ್ಕೊಳಗಾಗಿ ಸಾಲಗಾರರಾಗಿರುವ ರೈತರನ್ನು ಘನತೆಯೊಂದಿಗೆ ನಡೆಸಿಕೊಳ್ಳಬೇಕಿದೆ. ದೇಶಕ್ಕೇ ಅನ್ನದಾತರಾಗಿರುವ ರೈತರ ಸಮಸ್ಯೆಗಳಿಗೆ ಆಳುಗರು ಕಿವಿಗೊಡಬೇಕಿದೆ.

(ಲೇಖಕರು ಯುವನಾಯಕರು ಮತ್ತು ಲೋಕಸಭಾ ಸದಸ್ಯರು)

Leave a Reply

Your email address will not be published. Required fields are marked *

Back To Top