ಕೃವಿವಿ ಉತ್ತಮ ಕಾರ್ಯ ಮಾಡಲಿ

ಧಾರವಾಡ: ಕೃಷಿ ಭೂಮಿಗಳು ಜವಳಾಗುತ್ತಿರುವುದನ್ನು ತಡೆಯುವ ಹಾಗೂ ಸರಿಯಾಗಿ ಮಳೆ ಬಾರದ ಸಂದರ್ಭದಲ್ಲೂ ಬೇಡಿಕೆಗೆ ಅನುಗುಣವಾಗಿ ಆಹಾರ ಪೂರೈಸುವ ಜವಾಬ್ದಾರಿ ರೈತರು ಹಾಗೂ ಕೃಷಿ ವಿಜ್ಞಾನಿಗಳ ಮೇಲಿದೆ ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಹೇಳಿದರು.

ನಗರದ ಕೃಷಿ ವಿಶ್ವ ವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಸಾಮಾಜಿಕ ವಿಜ್ಞಾನಗಳಲ್ಲಿ ಆಧುನಿಕ ಸಂಶೋಧನಾ ವಿಧಾನಗಳು’ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಹಾಗೂ ರಫ್ತಾರ್ (ರೆಮ್ಯುನರೇಟಿವ್ ಅಪ್ರೋಚಸ್ ಫಾರ್ ಅಗ್ರಿಕಲ್ಚರ್ ಆಂಡ್ ಅಲೈಡ್ ಸೆಕ್ಟರ್ ರಿಜುವನೇಶನ್) ಅಗ್ರಿ ಬಿಸಿನೆಸ್ ಇನ್​ಕ್ಯೂಬೇಶನ್ ಕೇಂದ್ರ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ವಿನೂತನ ಕೃಷಿ ಉಪಕರಣಗಳನ್ನು ರೈತರಿಗೆ ಪರಿಚಯಿಸಲಾಗುತ್ತಿದೆ. ಹಲವು ಯಂತ್ರಗಳಿಗೆ ಸರ್ಕಾರ ಸಬ್ಸಿಡಿ ನೀಡುತ್ತಿದೆ. ಮಾಹಿತಿ ತಂತ್ರಜ್ಞಾನವನ್ನು ಕೃಷಿಯಲ್ಲೂ ಬಳಸಿಕೊಳ್ಳುವತ್ತ ದಾಪುಗಾಲು ಹಾಕುತ್ತಿರುವಾಗ ಕೃಷಿ ತಂತ್ರಜ್ಞಾನವೂ ಅದಕ್ಕೆ ಸರಿಸಾಟಿಯಾಗಿ ನಿಲ್ಲಬೇಕಿದೆ ಎಂದರು.

ಕೃಷಿ ಸ್ಟಾರ್ಟ್​ಅಪ್ ಮೂಲಕ ಅತ್ಯಾಧುನಿಕ ಕೃಷಿ ತಂತ್ರಜ್ಞಾನಗಳನ್ನು ರೈತರಿಗೆ ತಲುಪಿಸುವ, ಕೌಶಲಾಭಿವೃದ್ಧಿ ಉದ್ಯಮಶೀಲತೆ, ಸಾಮರ್ಥ್ಯ ವೃದ್ಧಿ, ಕೃಷಿ ಕ್ಷೇತ್ರದಲ್ಲಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಪ್ರಮುಖ ಉದ್ದೇಶಗಳನ್ನು ರಫ್ತಾರ್ ಯೋಜನೆ ಹೊಂದಿದೆ. ಈ ವಿಷಯದಲ್ಲಿ ಕೃಷಿ ವಿವಿ ಅತ್ಯುತ್ತಮ ಕಾರ್ಯ ನಿರ್ವಹಿಸಬೇಕು ಎಂದರು.

ಐಸಿಎಆರ್ ಉಪ ಮಹಾನಿರ್ದೇಶಕ ಡಾ. ಎನ್.ಎಸ್. ರಾಥೋಡ್ ಮಾತನಾಡಿ, ಕೃಷಿ ಅಭಿವೃದ್ಧಿಯಲ್ಲಿ ರಫ್ತಾರ್ ಯೋಜನೆ ಮಹತ್ವದ ಪಾತ್ರ ವಹಿಸಲಿದೆ. ಇದರ ಅನುಷ್ಠಾನಕ್ಕೆ ಕೃಷಿ ವಿವಿಯನ್ನು ಜ್ಞಾನಾಭಿವೃದ್ಧಿ ಪಾಲುದಾರ ಮಾಡಿದ್ದು, ಪ್ರಮುಖ ಅವಕಾಶ ದೊರೆತಂತಾಗಿದೆ. ಧಾರವಾಡ ಕೃವಿವಿ ಅಡಿ ಗುಜರಾತ್​ನ ಆನಂದ ಕೃಷಿ ವಿವಿ, ಮುಂಬೈನ ಕೇಂದ್ರೀಯ ಹತ್ತಿ ತಂತ್ರಜ್ಞಾನ ಕೇಂದ್ರ, ಬೆಂಗಳೂರು ರಾಷ್ಟ್ರೀಯ ಪಶು ಸಾಂಕ್ರಾಮಿಕ ರೋಗಗಳ ಮಾಹಿತಿ ಸಂಸ್ಥೆಗಳು ಜಂಟಿಯಾಗಿ ಕೆಲಸ ಮಾಡಲಿವೆ ಎಂದರು.

ಅತ್ಯುತ್ತಮ ಕೃಷಿ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಿ ಯೋಜನೆ ಅನುಷ್ಠಾನಕ್ಕೆ ತರುವ ಕಾರ್ಯ ಧಾರವಾಡ ಕೃವಿವಿಯದ್ದಾಗಿದೆ. ಇತ್ತೀಚೆಗೆ ಈ ವಿವಿಯು ರಾಷ್ಟ್ರ ಮಟ್ಟದಲ್ಲಿ ಉನ್ನತ ಕೃಷಿ ಸಂಶೋಧನೆ ನಡೆಸುತ್ತಿದ್ದು, ಇನ್ನೂ ಹೆಚ್ಚಿನ ಸಂಶೋಧನೆಗಳ ಮೂಲಕ ಜಾಗತಿಕ ಮಟ್ಟದಲ್ಲಿ ಬೆಳೆಯಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ. ಎಂ.ಬಿ. ಚೆಟ್ಟಿ ಮಾತನಾಡಿ, ಕೃಷಿ ವಿವಿ ಅಭ್ಯುದಯಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉತ್ತಮ ಸಹಕಾರ ನೀಡುತ್ತಿವೆ. ಅನುದಾನ ಹರಿದು ಬರುತ್ತಿದ್ದು, ಜಾಗತಿಕವಾಗಿ ಪ್ರಮುಖ ಸ್ಥಾನದಲ್ಲಿ ನಿಲ್ಲುವ ಶಕ್ತಿ ಹೊಂದಿದೆ ಎಂದರು.

ಕೃಷಿ ವಿವಿ ಹೊರತಂದ ಸ್ಮರಣ ಸಂಚಿಕೆ ಹಾಗೂ ಬೋಧನಾ ನೆರವು ವ್ಯವಸ್ಥೆ ಬಿಡುಗಡೆಗೊಳಿಸಲಾಯಿತು. ಡಾ. ಪಿ.ಎಸ್. ಪಾಂಡೆ, ಶಾಸಕ ಪ್ರಸಾದ ಅಬ್ಬಯ್ಯ, ವಿಜ್ಞಾನಿಗಳು, ವಿವಿ ಸಿಬ್ಬಂದಿ, ವಿದ್ಯಾರ್ಥಿಗಳು, ಇತರರು ಇದ್ದರು.

ಕೃಷಿ ವಿವಿ ಡೀನ್ ಡಾ. ಎಸ್.ಟಿ. ಕಜ್ಜಿಡೋಣಿ ಸ್ವಾಗತಿಸಿದರು. ಸಂಯೋಜಕಿ ಡಾ. ಕೆ.ವಿ. ಆಶಾಲತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎಂ.ವೈ. ಕಮತರ ರಫ್ತಾರ್ ಕುರಿತು ಮಾಹಿತಿ ನೀಡಿದರು. ಡಾ. ವಿ.ಆರ್. ಕಿರೇಸೂರ ವಂದಿಸಿದರು.