ಕೃಪೆ ತೋರಿದ ವರುಣದೇವ

ಮುಂಡರಗಿ: ತಾಲೂಕಿನ ಡಂಬಳ, ಡೋಣಿ, ಹಿರೇವಡ್ಡಟ್ಟಿ, ಹಾರೋಗೇರಿ ಮತ್ತಿತರ ಗ್ರಾಮಗಳಲ್ಲಿ ಭಾನುವಾರ ಉತ್ತಮ ಮಳೆ ಸುರಿಯಿತು. ಡಂಬಳದಲ್ಲಿ ಮಧ್ಯಾಹ್ನ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ರಭಸದಿಂದ ಮಳೆಯಾಯಿತು. ಮುಂಗಾರು ಪ್ರಾರಂಭವಾಗಿ ಹಲವು ದಿನಗಳೇ ಕಳೆದರೂ ಮರೆಯಾಗಿದ್ದ ವರುಣದೇವ ಶನಿವಾರ ಮತ್ತು ಭಾನುವಾರ ಪಟ್ಟಣ ಸೇರಿ ತಾಲೂಕಿನ ವಿವಿಧ ಭಾಗದಲ್ಲಿ ಕೃಪೆ ತೋರಿದ್ದಾನೆ. ಡಂಬಳ ಸುತ್ತಮುತ್ತಲಿನ ಬಹುತೇಕ ಜಮೀನುಗಳು ಜಲಾವೃತವಾಗಿದ್ದವು. ಇನ್ನು ಕೆಲ ಜಮೀನುಗಳ ಒಡ್ಡುಗಳ ಬದಿ ನೀರು ನಿಂತಿತ್ತು. ಹಳ್ಳ, ಕೊಳ್ಳ, ಸಣ್ಣಪುಟ್ಟ ಕೆರೆ, ಕೃಷಿ ಹೊಂಡ, ಬಾಂದಾರಗಳು ತುಂಬಿ ಹರಿದವು. ಹಾಗೇ ಚರಂಡಿಗಳೆಲ್ಲ ತುಂಬಿ ನೀರೆಲ್ಲ ರಸ್ತೆಯಲ್ಲಿ ಹರಿಯಿತು. ಮಳೆಗಾಗಿ ಕಾಯುತ್ತಿದ್ದ ರೈತರಲ್ಲೀಗ ಹರ್ಷ ಉಂಟಾಗಿದೆ.
ಮುಂಡರಗಿ ಪಟ್ಟಣ ಸೇರಿ ಶಿಂಗಟಾಲೂರ, ಹಮ್ಮಿಗಿ, ಬಿದರಳ್ಳಿ, ಮುಂಡವಾಡ, ಜಾಲವಾಡಗಿ, ವೆಂಕಟಾಪುರ, ಮೇವುಂಡಿ, ಬಸಾಪುರ, ತಾಮ್ರಗುಂಡಿ, ಶಿರೋಳ ಮೊದಲಾದ ಗ್ರಾಮಗಳಲ್ಲಿ ಜಿಟಿ-ಜಿಟಿ ಮಳೆಯಾಗಿದೆ. ಬಿತ್ತನೆ ಸಮಯದಲ್ಲಿ ಉತ್ತಮ ಮಳೆ ಸುರಿದಿದ್ದರೆ ರೈತರಿಗೆ ತುಂಬಾ ಅನುಕೂಲವಾಗುತ್ತಿತ್ತು. ಈಗಾಗಲೇ ಹೆಸರು ಹಾಗೂ ಮತ್ತಿತರ ಬೀಜಗಳ ಬಿತ್ತನೆ ಅವಧಿ ಮುಗಿದಿದೆ. ಈಗ ಉತ್ತಮ ಮಳೆ ಸುರಿದಿದ್ದರಿಂದ ಭೂಮಿ ಹಸಿಯಾಗಿದ್ದು ಮೆಕ್ಕೆಜೋಳ, ಸೂರ್ಯಕಾಂತಿ ಮೊದಲಾದ ಬೆಳೆ ಬಿತ್ತಬಹುದಾಗಿದೆ ಎನ್ನುತ್ತಾರೆ ರೈತ ಮುಖಂಡ ಬೀರಪ್ಪ ಬಂಡಿ, ಬಸಪ್ಪ ಕೊತಂಬ್ರಿ.

Leave a Reply

Your email address will not be published. Required fields are marked *