Wednesday, 14th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಕೃತಕ ಅನ್ನ ಸೃಷ್ಟಿಸುವ ಆತಂಕಗಳು…

Saturday, 24.06.2017, 3:04 AM       No Comments

ಪ್ಲಾಸ್ಟಿಕ್ ಕರಗಿಸಿ, ಅದಕ್ಕೆ ಅಕ್ಕಿಯಷ್ಟೇ ಹೊಳಪುಕೊಟ್ಟು ಅದನ್ನು ಬಿಡಿಬಿಡಿಯಾಗಿ ಕಾಳುಗಳನ್ನಾಗಿ ಪರಿವರ್ತಿಸುವ ತಾಂತ್ರಿಕತೆಯೂ ಸೇರಿ ಆಗುವ ವೆಚ್ಚ ಎಷ್ಟಿರಬಹುದು? ಹೇಗೆ ಯೋಚಿಸಿದರೂ ನೆಲಮೂಲಕ ಅಕ್ಕಿಯೇ ಸುಲಭ ಹೊರತು ಕೃತಕ ಅನ್ನ ಸೃಷ್ಟಿ ಖಂಡಿತ ಅಸಾಧ್ಯ.

 

ತಿನ್ನುವ ಪ್ರತೀ ಅನ್ನದ ಹಿಂದೆ ಬೆವರು, ಶ್ರಮ, ಹೆಸರು, ಸಂಬಂಧ ಇರುವುದರಿಂದಲೇ ಈ ದೇಶದ ಬಹುಮಂದಿಗೆ ಅದು ದೇವರಾಗುವುದು. ಆಹಾರವನ್ನು ಹುಡುಕುವ ಕಾಲದ ಕಥೆಯೇ ಬೇರೆ. ಈಗಿನದು ಅನ್ನ ಸಂಪಾದಿಸುವ ವ್ಯವಸ್ಥೆ. ಎರಡರಲ್ಲೂ ಆನ್ನ ಬ್ರಹ್ಮವೇ. ನಾವೇ ಉತ್ಪಾದಿಸಲಿ ಅಥವಾ ಅನ್ನ ಇನ್ನೆಲ್ಲಿಂದಲೋ ಬರಲಿ ಅದರೊಂದಿಗೆ ನಮ್ಮಗೊಂದು ಬೇರು ಸಂಬಂಧ ಇದ್ದೇ ಇದೆ. ಸೂಕ್ಷ್ಮ ಮನಸ್ಸಿನವನಿಗೆ ಉಣ್ಣುವಾಗಲೆಲ್ಲ ಆ ಮಣ್ಣ ವಾಸನೆ ಬಂದೇ ಬರುತ್ತದೆ.

ಚಪಾತಿ, ರೊಟ್ಟಿ, ಮುದ್ದೆಗಳಿಗಿಂತ ಅನ್ನ ಸಂಬಂಧ ಹೆಚ್ಚು ಜಟಿಲವಾಗುವುದು ಅದು ಮೇಲಿನವುಗಳಿಂದ ಹೆಚ್ಚು ಕಚ್ಚಾ ಮತ್ತು ಹೆಚ್ಚು ಸಾವಯವ ಸಂಬಂಧಕ್ಕಾಗಿ. ಗೋಧಿಯೋ, ರಾಗಿಯೋ ಹಿಟ್ಟಾಗಿ ರೊಟ್ಟಿ, ಮುದ್ದೆಯಾದರೆ; ಅನ್ನ ಬೆಂದರೆ ಸಾಕು, ನೇರ ದೇಹ ಸೇರುತ್ತದೆ. ಈ ಕಾರಣಕ್ಕಾಗಿ ಪೂರ್ಣರೂಪಿ ಅಕ್ಕಿ-ಅನ್ನ ಬಾಯಿ ಸೇರುವಾಗಲೇ ಮೂಲ ರೂಪದಲ್ಲೇ ದಕ್ಕುತ್ತವೆ. ಆಕಾರ ಕಳೆದುಕೊಳ್ಳದೆಯೇ ಸಿಗುತ್ತವೆ.

ಇಂಥ ಅನ್ನವನ್ನು ಅಂಗೈಯಲ್ಲಿಟ್ಟುಕೊಂಟು ಇದು ಕಬ್ಬಿಣನದ್ದೊ, ರಬ್ಬರ್​ನದ್ದೊ, ಪ್ಲಾಸ್ಟಿಕ್​ನದ್ದೊ ಎಂದು ಯೋಚಿಸುವುದು ಇದೆಯಲ್ಲಾ ಅತ್ಯಂತ ಯಾತನೆಯದ್ದು. ಒಂದು ಕ್ಷಣಕ್ಕೆ ಎಲ್ಲವನ್ನೂ ಕರಗಿಸುವ ಶಕ್ತಿ ನಮ್ಮ ದೇಹಕ್ಕಿದ್ದರೂ ಭಾವನಾತ್ಮಕವಾಗಿ ಇದನ್ನು ಅರಗಿಕೊಳ್ಳುವುದು ತುಂಬ ಕಷ್ಟದ ಕೆಲಸ . ಮಂಡ್ಯದ ಮದ್ದೂರಿನಲ್ಲಿ ಒಂದಷ್ಟು ಜನ ಪ್ಲಾಸ್ಟಿಕ್ ಅನ್ನ ತಿಂದರಂತೆ ಅವರ ಹೊಟ್ಟೆ ಕೆಟ್ಟಿತಂತೆ. ಬಟ್ಟಲಿನ ಅನ್ನವನ್ನು ಉಂಡೆಕಟ್ಟಿ ಚೆಂಡಿನಂತೆ ನೆಲಕ್ಕೆ ಕುಕ್ಕಿದಾಗ ಅದು ರಬ್ಬರ್​ಬಾಲನಂತೆ ಪುಟಿಯಿತಂತೆ. ಇನ್ನೊಂದು ಕಡೆ ನಾಗಮಂಗಲದ ಅಂಗಡಿಯಲ್ಲಿ ಖರೀದಿಸಿದ ಮೊಟ್ಟೆಗಳೂ ಕೂಡ ಅರೆಪ್ಲಾಸ್ಟಿಕ್​ನದ್ದೇ ಅಂತೆ. ಅದೇ ಮದ್ದೂರಿನಲ್ಲಿ ಜನ ಖರೀದಿಸಿದ ಸಕ್ಕರೆಯೂ ಪ್ಲಾಸ್ಟಿಕ್​ನದ್ದೇ ಅಂತೆ. ಹೀಗೆ ಕಳೆದ ಒಂದು ತಿಂಗಳಿಂದ ದಕ್ಷಿಣ ಭಾರತದಾದ್ಯಂತ ಇಂಥ ಸುದ್ದಿಯಾಗುತ್ತಲೇ ಇವೆ.

ಭತ್ತ, ಮೊಟ್ಟೆ, ಸಕ್ಕರೆ ಇವೆಲ್ಲವನ್ನು ಇತ್ತೀಚೆಗೆ ಬೆಳೆಸಿದ್ದ, ಉತ್ಪಾದಿಸದಿದ್ದರೂ ಇವುಗಳ ಮೂಲದ ಬಗ್ಗೆ ಹೆಚ್ಚು ಅರಿವು ಇರುವ ಗ್ರಾಮ್ಯರಿಗಿಂತ ಈ ಸುದ್ದಿ ನಗರದ ಮಂದಿಗೆ ಗರಿಷ್ಠ ಆತಂಕವನ್ನು ಸೃಷ್ಟಿಸಿದೆ. ಅಕ್ಕಿ, ಹಾಲು, ಮೊಟ್ಟೆ ಎಲ್ಲವೂ ‘ಯಂತ್ರ ಸೃಷ್ಟಿ’ ಎನ್ನುವ ಆಧುನಿಕರಿರುವ ಮಾಹಾನಗರಗಳಲ್ಲಿ, ಹೊಸ ತಲೆಮಾರಿನವರಲ್ಲಿ ಇದು ಸೃಷ್ಟಿಸಿದ ಪರಿಣಾಮ ಗಂಭೀರವಾದುದು. ಬೆಂಗಳೂರಿನ ಗೆಳೆಯರೊಬ್ಬರು ಸಕ್ಕರೆ, ಮೊಟ್ಟೆ, ತರಕಾರಿಗಳಲ್ಲಿ ಯಾವುದು ಅಸಲಿ, ಯಾವುದು ನಕಲಿ ಎಂಬುದನ್ನು ಪರೀಕ್ಷಿಸುವ ಸಾಧನ-ಯಂತ್ರಗಳು ಇದೆಯೇ ಎಂದು ನನ್ನಲ್ಲಿ ಕೇಳಿದ್ದೂ ಇದೆ. ಇಂತ ಕಲಬೆರಕೆಗಳಿಗೆ ನಾಲಿಗೆ, ದೇಹ, ಮನಸ್ಸು ಬೆರೆತು ಯಾವುದು ಸಾಚಾ, ಯಾವುದು ನಕಲಿ ಎಂಬುದನ್ನು ಅರಿಯದ ಮನಸ್ಥಿಯಲ್ಲಿ ಇಂಥ ಗೊಂದಲ ಸಹಜ. ಈ ಆತಂಕ ಹೊಟ್ಟೆ ಕೆಡಿಸಿದ್ದಕ್ಕಿಂತ ಮನಸ್ಸು ಕೆಡಿಸಿದ್ದೇ ಹೆಚ್ಚು.

ತಿನ್ನುವುದಕ್ಕಾಗಿಯೇ ಬದುಕುವುದು ಅಥವಾ ಬದುಕುವುದಕ್ಕಾಗಿಯೇ ತಿನ್ನುವುದು-ಈ ಎರಡು ವಾದಗಳಿವೆ. ರ್ತಸುವುದಾದರೂ ಅನ್ನದ ಸಮಸ್ಯೆ ಬಂದಾಗ, ತಿನ್ನುವ ಅನ್ನ ನಕಲಿ ಎಂದಾದಾಗ ಪ್ರಜಾಪ್ರಭುತ್ವ ರಾಷ್ಟ್ರವೊಂದು ಗಂಭೀರವಾಗಲೇ ಬೇಕು. ನಕಲಿ ಸೀಮೆಎಣ್ಣೆ, ನಕಲಿ ಪೆಟ್ರೋಲ್, ನಕಲಿ ಸಿಮೆಂಟುಗಳಿಗಿಂತ, ನಕಲಿ ಅನ್ನ, ನಕಲಿ ಹಾಲು, ನಕಲಿ ತರಕಾರಿ ಅತ್ಯಂತ ಸುಲಭವಾಗಿ ದೇಹ-ದೇಶವನ್ನು ನಾಶಮಾಡುತ್ತದೆ. ಆದರೆ ಈ ಕ್ಷಣದವರೆಗೆ ಅಂತಹ ಸುದ್ದಿ ಹಬ್ಬಿದ ಮಾಧ್ಯಮಗಳಾಗಲಿ, ಅವನ್ನು ಕೇಳಿಸಿಕೊಂಡ ಸರ್ಕಾರವಾಗಲೀ ಅಂತ ‘ಶುದ್ಧ’ ಪ್ಲಾಸ್ಟಿಕ್ ಅಕ್ಕಿ, ಸಕ್ಕರೆ, ಮೊಟ್ಟೆಯನ್ನು ನಮಗೆ ತಂದುಕೊಡಿ ನಿಮಗೆ ಬಹುಮಾನ-ಪ್ರಶಸ್ತಿ ಇದೆಯಂದು ಘೊಷಿಸಿದ್ದು ನನಗೆ ಗೊತ್ತೇ ಇಲ್ಲ.

ನಕಲಿ ಅನ್ನ, ನಕಲಿ ಸಕ್ಕರೆ, ನಕಲಿ ಹಾಲು ಸೃಷ್ಟಿಸುವುದು ಎಷ್ಟು ಅಪಾಯಕಾರಿಯೋ ಅಂಥ ನಕಲಿ ಸುದ್ದಿ ಸೃಷ್ಟಿಸುವುದು ಕೂಡ ಅಷ್ಟೇ ಅಪಾಯಕಾರಿ. ಆಹಾರದ ಬಗ್ಗೆ ಆಳವಾಗಿ ಅಧ್ಯಯನ ಮಾಡಿರುವ ಕೆ.ಸಿ.ರಘು, ‘ಯಾರಾದರೂ ಪ್ಲಾಸ್ಟಿಕ್​ನಿಂದ ಮೊಟ್ಟೆ ಉತ್ಪಾದಿಸಿದರೆ ಅಂಥವರಿಗೆ ನೊಬೆಲ್ ಕೊಡಬಹುದು’ ಎಂಥ ಮಾತು ಆ ದಿನದ ಮಟ್ಟಿಗೆ ಅಗ್ರ ಸುದ್ದಿಯಾಗಿದ್ದರೆ ಅದೇ ಕೆಲವು ಸುದ್ದಿ ಪ್ರಕಟಿಸಿದ ಮಾಧ್ಯಮಗಳು ನೈತಿಕವಾಗಿ ಗೆಲ್ಲಬಹುದಿತ್ತು. ಒಮ್ಮೆ ಸುದ್ದಿ ಮಾಡಿ ಅದನ್ನು ಮರೆತುಬಿಡುವ ಬದಲು ಜನರಲ್ಲಿ ಅರಿವು, ಜಾಗೃತಿ ಮೂಡಿಸಿ ಸಮಸ್ಯೆಗೆ ರ್ತಾಕ ಅಂತ್ಯ ಕಾಣಿಸಬಹುದಿತ್ತು.

ಅಕ್ಕಿ ಯಾವುದೇ ಇರಲಿ, ಕೆಜಿಗೆ ಕನಿಷ್ಠ ಮೂವತ್ತರಿಂದ ಎಂಭತ್ತು ರೂಪಾಯಿಯವರೆಗೆ ಬೆಲೆಯಿದೆ. ಬಿಳಿಬಳಿಯಾದ ಹರಳುಕಟ್ಟುವ ಅಂಥದ್ದೇ ಪ್ಲಾಸ್ಟಿಕ್ ಅಕ್ಕಿ ಮಾಡಲು ಅಷ್ಟೇ ತೂಕದ ಪ್ಲಾಸ್ಟಿಕ್ ಬೇಕು. ಒಂದು ಕೇಜಿ ಪ್ಲಾಸ್ಟಿಕ್​ಗೆ 80 ರಿಂದ 150 ರೂಪಾಯಿ ಬೆಲೆಯಿದೆ. ಈಗ ನೀವೆ ಯೋಚಿಸಿ. ಆ ಪ್ಲಾಸ್ಟಿಕ್ ಕರಗಿಸಿ, ಅದಕ್ಕೆ ಅಕ್ಕಿಯಷ್ಟೇ ಹೊಳಪುಕೊಟ್ಟು ಅದನ್ನು ಬಿಡಿಬಿಡಿಯಾಗಿ ಕಾಳುಗಳನ್ನಾಗಿ ಪರಿವರ್ತಿಸುವ ತಾಂತ್ರಿಕತೆಯೂ ಸೇರಿ ಆಗುವ ವೆಚ್ಚ ಎಷ್ಟಿರಬಹುದು? ಹೇಗೆ ಯೋಚಿಸಿದರೂ ನೆಲಮೂಲಕ ಅಕ್ಕಿಯೇ ಸುಲಭ ಹೊರತು ಕೃತಕ ಅನ್ನ ಸೃಷ್ಟಿ ಖಂಡಿತ ಅಸಾಧ್ಯ. ಮೊಟ್ಟೆ, ತರಕಾರಿ ಸೃಷ್ಟಿ ಇದಕ್ಕಿಂತಲೂ ದುಬಾರಿ.

ಪೂರ್ಣಸೃಷ್ಟಿ ಬೇರೆ, ಕಲಬೆರಕೆ ಬೇರೆ. ಹಾಲು, ತರಕಾರಿ ಮೈದಾ ಇತ್ಯಾದಿಗಳಿಗೆ ಇವುಗಳಿಗಿಂತ ಅಗ್ಗದ ನೆಲಮೂಲಗಳನ್ನೇ ಸೇರಿಸುವುದು ಸುಲಭ. ಇದೆಲ್ಲ ಈ ದೇಶದಲ್ಲಿ ಸುಲಭವಾಗಿ ಸಾಧ್ಯ. ಎಲುಬುಗಳಿಂದ ಕುದಿಸಿ ಎಣ್ಣೆ ತೆಗೆಯುವ, ಬೆಣ್ಣೆ ಮಾಡುವ ಸಾಕಷ್ಟು ಸಾಧ್ಯತೆಗಳು ಇದ್ದೆ ಇವೆ. ಆದರೆ ಸಂಬಂಧವೇ ಇಲ್ಲದ ಪ್ಲಾಸ್ಟಿಕ್ ರಬ್ಬರ್​ಗಳಿಂದ ಅನ್ನ, ಮೊಟ್ಟೆ, ಸಕ್ಕರೆ ಮಾಡುವ ಸಾಧ್ಯತೆ ನಂಬಲಸಾಧ್ಯ.

ದೇಶದಲ್ಲಿ ಹೊಸ ತರಕಾರಿ ಬಂದ ಮೇಲೆ ಕಳೆದ ಎರಡು-ಮೂರು ವರ್ಷಗಳಲ್ಲಿ ಹೆಚ್ಚು ಸಾವಯವ, ಸದೃಢ, ಆರೋಗ್ಯದಾಯಕ ಎನ್ನುವ ಟ್ರಾಂಪ್​ವೊಂದರ ಉತ್ಪನ್ನಗಳು ದೇಶದೆಲ್ಲೆಡೆ ರಾಶಿ ರಾಶಿಯಾಗಿ ಮಾರಾಟವಾಗುತ್ತಿವೆ. ನನ್ನ ಜಿಲ್ಲೆಯಲ್ಲೇ ಕಳೆದ 2 ವರ್ಷಗಳಲ್ಲಿ ಮುನ್ನೂರಕ್ಕಿಂತಲೂ ಹೆಚ್ಚು ಅಂಗಡಿಗಳು ಅಂಥ ಉತ್ಪನ್ನಗಳನ್ನು ಮಾರುತ್ತವೆ. ಜನ ಮುಗಿ ಬಿದ್ದು ಖರೀದಿಸುತ್ತಾರೆ. ಇದು ಒಂದು ಬದಿಯಲ್ಲಿ ಹಬ್ಬುತ್ತಿರುವ ಕ್ರಾಂತಿಯಾದರೆ, ಕರ್ನಾಟಕದಲ್ಲಿ ಕಿರುಧಾನ್ಯಗಳ ಬಳಕೆ ಚಳವಳಿ ಪಥದಲ್ಲಿ ನಡೆಯುತ್ತಿದೆ. ಸಾವಯವ, ಶುದ್ಧ, ಆರೋಗ್ಯದಾಯಕ ಬ್ರಾಂಡ್​ಗಳೆಂದು ದಿನೇದಿನೆ ವೇಗಪಡೆಯುತ್ತಿರುವ ಇವೆಲ್ಲ ನೆಲದಲ್ಲೇ ಆಗುವುದಾಗಿದ್ದರೆ ಈ ದೇಶದಲ್ಲಿ ಇದೇ ವೇಗದಲ್ಲಿ ಭೂಮಿಯ ಮೇಲೆ ಸಾವಯವ ರಾಸಾಯನಿಕ ರಹಿತ ಕೃಷಿ ನಡೆಯುತ್ತಿದೆಯೇ, ಕಿರುಧಾನ್ಯಗಳನ್ನು ಬೆಳೆಯಲಾಗುತ್ತದೆಯೇ, ಬೆಳೆಸುವುದಾಗಿದ್ದರೆ ಎಲ್ಲೆಲ್ಲಿ, ಹೇಗೆ, ಯಾರು ಎಂಬ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ. ಪ್ರತ್ಯೇಕ ಭೂ ಹಿಡುವಳಿಯನ್ನು ಹೊಂದದೆ ರೈತರಿಂದಲೇ ಖರೀದಿಸಿ ಅವಕ್ಕೆ ಬರೀ ಬ್ರಾಂಡ್ ನೇಮ್ಳನ್ನೂ ಅಂಟಿಸುವುದಾದರೆ ಅದು ‘ಹೆಸರಿಗಷ್ಟೇ ಅಸಲಿ’ಯಾಗುತ್ತದೆ ಹೊರತು ಉಳಿದಂತೆ ಅಪಾಯಕಾರಿಯೇ.

ಕುರಿ ತಿಂದರೆ ಕ್ಯಾನ್ಸರ್ ಬರುತ್ತದೆ ಎಂದಾಗ ಕೋಳಿಗೆ ಬೇಡಿಕೆ ಬರುತ್ತದೆ. ಕೋಳಿ ತಿಂದರೆ ಹಕ್ಕಿಜ್ವರ ಬರುತ್ತದೆ ಎಂದಾಗ ಮೀನು ಹೆಚ್ಚು ಹೆಚ್ಚು ಬಿಕರಿಯಾಗುತ್ತದೆ. ಹೀಗೆಯೇ ಚಹಾ ಹೆಚ್ಚು ಅಪಾಯಕಾರಿ ಎಂದಾಗ ಕಾಫಿ-ಹೀಗೆ ಆಗಾಗ ಎಲ್ಲಿಂದಲೋ ಸುದ್ದಿಗಳು ಹುಟ್ಟಿಕೊಂಡಂತೆ ನಕಲಿ ಅಕ್ಕಿ, ತರಕಾರಿ, ಮೊಟ್ಟೆ, ಸಕ್ಕರೆ ಸುದ್ದಿಗಳ ಹಿಂದೆ ಉದ್ದೇಶಗಳಿರುವುದು ಸ್ಪಷ್ಟ. ಯಾರಿಗೋ ಲಾಭ ತರುವ ಇಂಥ ತಂತ್ರಗಳು ಜನಸಾಮಾನ್ಯರ ಮೇಲೆ ಸೃಷ್ಟಿಸುವ ಪರಿಣಾಮಗಳ ಬಗ್ಗೆ ಯೋಚಿಸುವವರು ಯಾರು? ಸರಕಾರ ಕಳಿಸಿಕೊಟ್ಟ ‘ಪ್ಲಾಸ್ಟಿಕ್ ಅಕ್ಕಿ’ ಸ್ಯಾಂಪಲ್​ಗಳನ್ನು ಪರೀಕ್ಷಿಸಿ ವೈಜ್ಞಾನಿಕ ವಿಶ್ಲೇಷಣೆ ನಡೆಸಿ ಯಾವ ಅಕ್ಕಿಯೂ ಪ್ಲಾಸ್ಟಿಕ್ ಅಲ್ಲ. ಅದು ಮುಗ್ಗುಲು ಅಕ್ಕಿಯಷ್ಟೇ ಎಂದು ವರದಿ ನೀಡಿದ ಕೃಷಿ ವಿಶ್ವವಿದ್ಯಾಲಯ ಆರೋಗ್ಯ ಇಲಾಖೆಯ ಪ್ರಯೋಗಾಲಯದ ಫಲಿತಾಂಶಗಳನ್ನಾದರೂ ಸರ್ಕಾರ ಜಾಹೀರಾತು ರೂಪದಲ್ಲಿ ದೊಡ್ಡದಾಗಿ ಪ್ರಕಟಿಸಿದ್ದರೆ ಅನುಕೂಲವಾಗುತ್ತಿತ್ತು.

 

(ಲೇಖಕರು ಕನ್ನಡ ಪ್ರಾಧ್ಯಾಪಕರು ಮತ್ತು ಪರಿಸರಾಸಕ್ತ ಕೃಷಿಕರು)

Leave a Reply

Your email address will not be published. Required fields are marked *

Back To Top