ಕೂಲಿ ಹಣಕ್ಕಾಗಿ ಕಾರ್ವಿುಕರ ಪ್ರತಿಭಟನೆ

ಬ್ಯಾಡಗಿ: ಉದ್ಯೋಗ ಖಾತ್ರಿ ಯೋಜನೆಯಡಿ ಮಾಡಿದ ಕೆಲಸದ ವೇತನ ಪಾವತಿಸುವಂತೆ ಒತ್ತಾಯಿಸಿ ತಾಲೂಕು ಪಂಚಾಯಿತಿ ಕಾರ್ಯಾಲಯ ಎದುರು ಕಾರ್ವಿುಕರು ಬುಧವಾರ ಪ್ರತಿಭಟನೆ ನಡೆಸಿದರು.

ತಾಲೂಕಿನ ಘಾಳಪೂಜಿ, ಹಿರೇಹಳ್ಳಿ, ಬುಡಪನಹಳ್ಳಿ, ಕದರಮಂಡಲಗಿ, ಚಿಕ್ಕಬಾಸೂರು, ಮಾಸಣಗಿ, ಸೂಡಂಬಿ, ಹಿರೇಅಣಜಿ, ಕುಮ್ಮೂರು, ಬನ್ನಿಹಟ್ಟಿ ಗ್ರಾಮಗಳಿಂದ ಆಗಮಿಸಿದ ಕಾರ್ವಿುಕರು ಮಹಾತ್ಮ ಗಾಂಧಿ ಕಟ್ಟಡ ಮತ್ತು ಇತರೆ ಕೂಲಿ ಕಾರ್ವಿುಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಕೂಲಿಕಾರ್ವಿುಕ ಚಂದ್ರಶೇಖರ ಕಜ್ಜೇರ ಮಾತನಾಡಿ, ವಿವಿಧ ಗ್ರಾ.ಪಂ. ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಂಡ ಕಾಮಗಾರಿಗಳ ಕೂಲಿ ಹಣ ಜಮೆ ಮಾಡಿಲ್ಲ. ಗ್ರಾ.ಪಂ. ಅಧಿಕಾರಿಗಳು, ಇಂಜಿನಿಯರ್​ಗಳ ತಪ್ಪಿನಿಂದ ಕೆಲವೆಡೆ ಕೂಲಿಕಾರರ ಹಣ ಜಮೆಯಾಗಿಲ್ಲ. ಕೂಡಲೆ ಇಂತಹ ಅಧಿಕಾರಿಗಳ ಮೇಲೆ ಮೇಲಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಕೂಲಿಕಾರರ ಮುಖಂಡ ರಾಜು ಆಲದಗೇರಿ ಮಾತನಾಡಿ, ತಾಲೂಕಿನ 10 ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 3000 ಜನ ಕೂಲಿಕಾರರು ಕಾರ್ಯನಿರ್ವಹಿಸುತ್ತಿದ್ದು, ಕೆಲಸ ನಿರ್ವಹಿಸಿದ ಏಳು ದಿನಗಳಲ್ಲಿ ಕೂಲಿಕಾರರ ಖಾತೆಗೆ ಹಣ ಜಮೆ ಮಾಡಬೇಕಿದೆ. ಕೂಲಿಕಾರರ ಗೋಳಾಟಕ್ಕೆ ಹೊಣೆ ಯಾರು ? ಕೂಡಲೇ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ತಾಲೂಕಿನ ಬುಡಪನಹಳ್ಳಿ ಗ್ರಾಮದ ಕೂಲಿಕಾರ ಮಹಿಳೆ 2017ರಲ್ಲಿ ಜಾನುವಾರ ಮನೆ ನಿರ್ವಿುಸಿಕೊಂಡಿದ್ದು, ಕೂಲಿ ಹಣಕ್ಕೆ ಮೂರು ವರ್ಷದಿಂದ ಅಲೆದಾಡಿ ಸುಸ್ತಾಗಿದ್ದಾರೆ. ಈವರೆಗೂ ನಯಾಪೈಸೆ ಹಣ ಜಮೆಯಾಗಿಲ್ಲ. ನ್ಯಾಯ ಸಿಗದಿದ್ದಲ್ಲಿ ಕಾರ್ಯಾಲಯ ಎದುರು ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಾ.ಪಂ. ವ್ಯವಸ್ಥಾಪಕ ಪ್ರಕಾಶ ಹಿರೇಮಠ ಅವರಿಗೆ ಮನವಿ ಸಲ್ಲಿಸಲಾಯಿತು. ಮಹಾಂತೇಶ ನಿಡನೇಗಿಲ, ರವಿ ಅಡಿವೇರ, ದುರುಗಪ್ಪ ಹುಣಸಿಕಟ್ಟಿ, ಗಿರೀಶ ಉಪ್ಪುಣಸಿ, ಬೀರಪ್ಪ ಗೋಡೇರ, ಹನುಮಂತಪ್ಪ ಮಾಳಗಿ, ಮಂಜುನಾಥ ಪೂಜಾರ, ಪಕ್ಕೀರಪ್ಪ ಮೇಡ್ಲೇರಿ, ಹುಚ್ಚಪ್ಪ ಬೇವಿನಮಟ್ಟಿ, ಏಳುಕೋಟಿ ಕುಡುಪಲಿ, ಕರಬಸಯ್ಯ ಪಾಟೀಲ, ವೀರಭದ್ರಯ್ಯ ಗುರಪ್ಪನವರ ಇತರರಿದ್ದರು.