ಕೂಲಿ ಕೆಲಸಕ್ಕಾಗಿ ದುಡಿವ ಕೈಗಳ ಪರದಾಟ

ಸಿ.ಎ.ಮುರಳೀಧರ್ ಗೌರಿಬಿದನೂರು

ಸ್ಥಳೀಯ ಪುರಸಭೆ ನಗರಸಭೆಯಾದ ಬಳಿಕ ನಗರಸಭೆ ವ್ಯಾಪ್ತಿಗೆ ಒಳಪಡುವ ಹಳ್ಳಿಗಳ ಜನತೆ ನರೇಗಾ ಯೋಜನೆಯಿಂದ ವಂಚಿತರಾಗಿದ್ದಾರೆ.

ಕಾದಲವೇಣಿ, ಹಿರೇಬಿದನೂರು, ಚಿಕ್ಕಕುರುಗೋಡು ಗ್ರಾಪಂಗಳ ಅನೇಕ ಹಳ್ಳಿಗಳು ಇತ್ತೀಚೆಗಷ್ಟೆ ನಗರಸಭೆ ವ್ಯಾಪ್ತಿಗೆ ಒಳಪಟ್ಟಿವೆ. ಇವೆಲ್ಲವೂ ಕೃಷಿ ಅವಲಂಬಿತ ಗ್ರಾಮಗಳು. ಆದರೆ, ನಗರಸಭೆ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ನರೇಗಾ ಯೋಜನೆ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಬರಗಾಲದ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ಕೃಷಿ ಕೂಲಿ ಕೆಲಸಗಳೂ ಸಿಗುತ್ತಿಲ್ಲ. ಇನ್ನೊಂದೆಡೆ ನರೇಗಾ ಯೋಜನೆಯಲ್ಲಿ ಕೂಲಿ ಕೆಲಸವೂ ಸಿಗುತ್ತಿಲ್ಲ. ಇದರಿಂದ ದುಡಿವ ಕೈಗಳು ಕೂಲಿ ಕೆಲಸಕ್ಕಾಗಿ ಪರದಾಡುವಂತಾಗಿದೆ.

ನಗರಕ್ಕೆ ಶಾಪವಾದ ನರೇಗಾ: ನರೇಗಾ ಯೋಜನೆಯಲ್ಲಿ ಕೃಷಿ, ರೇಷ್ಮೆ, ಅರಣ್ಯ ಇಲಾಖೆ ಕಾಮಗಾರಿ ನಡೆಸಬಹುದಾಗಿದೆ. ನಗರಸಭೆ ವ್ಯಾಪ್ತಿಗೆ ಒಳಪಟ್ಟಿರುವ ಬಹುತೇಕ ಗ್ರಾಮಗಳು ಕೃಷಿ ಅವಲಂಬಿತ ಗ್ರಾಮಗಳಾಗಿವೆ. ಆದರೆ, ನಗರಸಭೆ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಲ್ಲಿ ಕಾಮಗಾರಿ ನಡೆಸುವಂತಿಲ್ಲ. ಅಭಿವೃದ್ಧಿ ವಿಚಾರದಲ್ಲಿ ನಗರಸಭೆಗೆ ಸೇರ್ಪಡೆಯಾಗಿರುವುದು ಜನತೆಗೆ ಖುಷಿ ನೀಡಿದೆಯಾದರೂ ಹಳ್ಳಿಗಳಿಗೆ ಇದೇ ಶಾಪವಾಗಿದೆ.

ಬರಗಾಲ ಪರಿಹಾರಕ್ಕೆ ಆಗ್ರಹ: ಬರಗಾಲ ಹಿನ್ನೆಲೆಯಲ್ಲಿ ಸದರಿ ಗ್ರಾಮಗಳಲ್ಲೇ ನರೇಗಾ ಯೋಜನೆ ಕೈಗೆತ್ತಿಕೊಳ್ಳಲು ಅವಕಾಶ ಕಲ್ಪಿಸಿ ದುಡಿಯುವ ಕೈಗಳಿಗೆ ಕೆಲಸ ನೀಡಬೇಕೆಂದು ಜಿಲ್ಲಾಧಿಕಾರಿ, ಜಿಪಂ ಸಿಇಒ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯ ಬಡ ಕೂಲಿಕಾರ್ವಿುಕರ ಆಗ್ರಹ.

 

ನಗರಸಭೆ ವ್ಯಾಪ್ತಿಗೆ ಒಳಪಡುವ ಹಳ್ಳಿಗಳನ್ನು ಪಂಚಾಯಿತಿಯಿಂದ ಕೈ ಬಿಟ್ಟಿರುವ ಹಿನ್ನೆಲೆಯಲ್ಲಿ ಅಂತಹ ಗ್ರಾಮಗಳಲ್ಲಿ ನರೇಗಾ ಯೋಜನೆ ಅನುಷ್ಠಾನ ಸಾಧ್ಯವಿಲ್ಲ. ಆದರೆ, ನಗರಸಭೆ ವ್ಯಾಪ್ತಿಗೆ ಒಳಪಟ್ಟಿರುವ ಹಳ್ಳಿಗಳ ಸಾರ್ವಜನಿಕರಿಗೆ ಕೂಲಿ ಕೆಲಸ ನೀಡಲು ಬದ್ಧವಾಗಿದ್ದು, ಸಮೀಪದ ಪಂಚಾಯಿತಿಗಳಿಗೆ ತೆರಳಿ ಕೆಲಸ ಪಡೆಯಬಹುದಾಗಿದೆ.

| ಗಿರಿಜಾ ಶಂಕರ್

ಇಒ, ಗೌರಿಬಿದನೂರು ತಾಪಂ