ಹುಲಸೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಮಿಕರಿಗೆ ೧೦೦ ದಿನ ಕೂಲಿ ಕೆಲಸ ಮಾಡಲು ಅವಕಾಶವಿದ್ದು, ಗ್ರಾಮೀಣ ಭಾಗದ ಕಾರ್ಮಿಕರಿಗೆ ನರೇಗಾ ವರದಾನವಾಗಿದೆ ಎಂದು ತಾಲೂಕು ಪಂಚಾಯಿತಿ ಇಒ ವೈಜಣ್ಣ ಫುಲೆ ಹೇಳಿದರು.
ಮಿರಖಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಣಮಂತವಾಡಿ ಗ್ರಾಮದ ಹೊರ ವಲಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿ ನಡೆಯುತ್ತಿರುವ ಸಮುದಾಯ ಕಾಮಗಾರಿ ಗುರುವಾರ ಸ್ಥಳಕ್ಕೆ ಭೇಟಿ ನೀಡಿ , ಆರ್ಥಿಕ ವರ್ಷದಲ್ಲಿ ನರೇಗಾ ಯೋಜನೆಯಡಿ ೧೦೦ ದಿನ ಕೂಲಿ ಕೆಲಸ ಪೂರ್ಣಗೊಳಿಸಿದ ಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದ ಅವರು, ಏ.೧ರಿಂದ ನರೇಗಾ ಯೋಜನೆಯ ಹೊಸ ಆರ್ಥಿಕ ವರ್ಷ ಆರಂಭವಾಗಲಿದ್ದು, ನರೇಗಾ ಕೂಲಿ ಕಾರ್ಮಿಕರು ಸಂಬಂಧಪಟ್ಟ ಗ್ರಾಪಂಗೆ ಭೇಟಿ ನೀಡಿ ಕೂಲಿ ಬೇಡಿಕೆ ಸಲ್ಲಿಸಿ ನರೇಗಾ ಕಾಮಗಾರಿಗಳಲ್ಲಿ ಕೆಲಸ ಮಾಡಬೇಕು ಎಂದರು.
ತಾಪಂ ನರೇಗಾ ಸಹಾಯಕ ನಿರ್ದೇಶಕ ಮಹಾದೇವ ಜಮ್ಮು ಮಾತನಾಡಿ, ರೈತರು ನರೇಗಾ ಯೋಜನೆಯಡಿ ಲಭ್ಯವಿರುವ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಲಾಭ ಪಡೆದುಕೊಳ್ಳಬೇಕೆಂದು ಹೇಳಿದರು.
ಮಿರಖಲï ಗ್ರಾಪಂ ಸದಸ್ಯ ನಾಗೇಶ ಮದ್ನೆ ಮಾತನಾಡಿದರು. ನರೇಗಾ ತಾಂತ್ರಿಕ ಸಂಯೋಜಕ ಶಿವರಾಜ ಪಾಟೀಲ್, ಪಿಡಿಒ ರಮೇಶ ಮಿಲಿಂದಕರ, ಐಇಸಿ ಸಂಯೋಜಕ ಗಣಪತಿ ಹಾರಕೂಡೆ, ಗ್ರಾಪಂ ಸದಸ್ಯ ಸತೀಶ ಪಾಟೀಲï, ಅನಿತಾ, ಬಿಎಫ್‌ಟಿ ಮಿಲಿಂದಕುಮಾರ ಇತರರಿದ್ದರು. ಕೇಕ್ ಕತ್ತರಿಸಿ ವಿಶ್ವ ಮಹಿಳಾ ದಿನ ಆಚರಿಸಲಾಯಿತು.