18.5 C
Bangalore
Tuesday, December 10, 2019

ದೋಣಿ ದುರಂತ ಮೃತರ ಸಂಖ್ಯೆ 15ಕ್ಕೆ ಏರಿಕೆ

Latest News

ಹಸಿವಿನ ಸೂಚ್ಯಂಕದಲ್ಲಿ 102ನೇ ಸ್ಥಾನದಲ್ಲಿ ಭಾರತ

 ಮೈಸೂರು: ವಿಶ್ವದ ಹಸಿವಿನ ಪ್ರಮಾಣದ ಸೂಚ್ಯಂಕದಲ್ಲಿ ಭಾರತ 102ನೇ ಸ್ಥಾನದಲ್ಲಿರುವುದು ಆಘಾತಕಾರಿ ಬೆಳವಣಿಗೆ ಎಂದು ಇಂಫಾಲದ ಕೇಂದ್ರೀಯ ಕೃಷಿ ವಿವಿ ಕುಲಪತಿ ಡಾ.ಎಸ್.ಅಯ್ಯಪ್ಪನ್...

ಕಡಕೊಳ ಟೋಲ್ ಬಳಿ ಗ್ರಾಮಸ್ಥರ ಪ್ರತಿಭಟನೆ

ಮೈಸೂರು: ನಂಜನಗೂಡು ರಸ್ತೆಯ ಕಡಕೊಳ ಬಳಿ ನಿರ್ಮಿಸಿರುವ ಟೋಲ್‌ಗೇಟ್‌ನಲ್ಲಿ ಗ್ರಾಮಸ್ಥರಿಗೆ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಸೋಮವಾರ ಟೋಲ್‌ಗೇಟ್ ಬಳಿ ಪ್ರತಿಭಟನೆ...

ಕೈ ಓಟದಲ್ಲಿ ನಡೆಯದ ಕಮಲದ ಆಟ

ಮೈಸೂರು: ಕಮಲ ಒಮ್ಮೆಯೂ ಮುನ್ನಡೆಗೆ ಬರಲಿಲ್ಲ. ಕೈನ ನಾಗಾಲೋಟ ಕೊನೆಯವರೆಗೂ ನಿಲ್ಲಲಿಲ್ಲ....! ಹುಣಸೂರು ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ಹುಣಸೂರು...

ಬೆಲಗೂರಲ್ಲಿ ವಿಜೃಂಭಣೆಯ ರಥೋತ್ಸವ

ಹೊಸದುರ್ಗ: ಹನುಮ ಜಯಂತಿಯ ಅಂಗವಾಗಿ ತಾಲೂಕಿನ ಬೆಲಗೂರು ಗ್ರಾಮದ ಶ್ರೀ ಮಾರುತಿ ಪೀಠದಲ್ಲಿ ಸೋಮವಾರ ಶ್ರೀ ವೀರಪ್ರತಾಪ ಅಂಜನೇಯ ಸ್ವಾಮಿ ಹಾಗೂ ಲಕ್ಷ್ಮೀ...

ನಗರದಲ್ಲಿ ಅದ್ದೂರಿ ಹನುಮೋತ್ಸವ

ಮೈಸೂರು: ಹನುಮ ಜಂಯಂತಿ ಅಂಗವಾಗಿ ವೇದಮಂತ್ರ ಪಠಣದ ನಡುವೆ ಜೈ ಶ್ರೀರಾಮ್, ಜೈ ಬಜರಂಗ ಬಲಿ ಘೋಷಣೆಯೊಂದಿಗೆ ನಗರದಲ್ಲಿ ಸೋಮವಾರ ಆಂಜನೇಯಸ್ವಾಮಿ ಮೂರ್ತಿ...

ಕಾರವಾರ: ಕೂರ್ಮಗಡ ದ್ವೀಪದ ನರಸಿಂಹ ದೇವರ ಜಾತ್ರೆ ಮುಗಿಸಿ ಸೋಮವಾರ ವಾಪಸಾಗುತ್ತಿದ್ದ ದೋಣಿ ಮುಳುಗಿ ಮೃತಪಟ್ಟವರ ಸಂಖ್ಯೆ ಈಗ 15 ಕ್ಕೆ ಏರಿಕೆಯಾಗಿದೆ.

ದೋಣಿಯಲ್ಲಿ ಒಟ್ಟು 35 ಜನರಿದ್ದರು. ಅದರಲ್ಲಿ 19 ಜನರನ್ನು ರಕ್ಷಿಸಲಾಗಿದೆ. 8 ಮೃತದೇಹಗಳು ಸೋಮವಾರವೇ ಪತ್ತೆಯಾಗಿದ್ದವು. ಮಂಗಳವಾರ ಇನ್ನೂ 7 ಮೃತದೇಹಗಳು ಪತ್ತೆಯಾಗಿದ್ದು, ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಹೊಸೂರಿನ ಒಂದೇ ಕುಟುಂಬದ 6 ಮಕ್ಕಳು, ಇಬ್ಬರು ಮಹಿಳೆಯರು ಹಾಗೂ ಕುಟುಂಬದ ಯಜಮಾನ ಪರಶುರಾಮ ಬೆಳಗಲಕೊಪ್ಪ ಸೇರಿ 9 ಜನರು ನಾಪತ್ತೆಯಾಗಿದ್ದು, 7 ಜನರ ಶವಗಳು ಪತ್ತೆಯಾಗಿವೆ. ಇನ್ನೆರಡು ಶವಗಳ ಶೋಧ ಕಾರ್ಯ ಬುಧವಾರ ಮುಂದುವರಿಯಲಿದೆ.

ನಿರಂತರ ಕಾರ್ಯಾಚರಣೆ: ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ನೌಕಾಸೇನೆ, ಭಾರತೀಯ ತಟರಕ್ಷಕದಳದ ವಿಮಾನ, ಹೆಲಿಕಾಪ್ಟರ್ ಹಾಗೂ ಹಡಗುಗಳು, ಬೋಟ್​ಗಳು ಸೇರಿ ಸಂಜೆಯವರೆಗೂ ನಿರಂತರ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹುಡುಕುವಲ್ಲಿ ಯಶಸ್ವಿಯಾದವು.

ದೋಣಿ ತರ್ತಿನೇ ಯವ್ವಾ …ಅಂದಿದ್ದ: ‘ಮಾಮಾನ ಊರಿನ ಜಾತ್ರೆಗೆ ಹೋಗಿ ದೋಣಿ ತರ್ತಿನೇ ಯವ್ವಾ ಅಂತ ಹೇಳಿ ಹೋಗಿದ್ದ ಮಕ್ಕಳು ದೋಣಿಯಲ್ಲೇ ಮುಳುಗಿಹೋದ್ವಲ್ಲೇ’ ಹೀಗೆ ಮಹಿಳೆಯರು ಎಲ್ಲರ ಬಳಿ ಜಿಲ್ಲಾಸ್ಪತ್ರೆಯಲ್ಲಿ ಹೇಳಿಕೊಂಡು ಗೋಳಿಡುವ ದೃಶ್ಯ ಸೇರಿದ್ದ ಜನರ ಮನ ಕಲಕುವಂತಿತ್ತು.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹೊಸೂರಿನ ಪರಶುರಾಮ ಬೆಳಗಲಕೊಪ್ಪ ಹಾಗೂ ಅವರ ಕುಟುಂಬದ 6 ಮಕ್ಕಳು, ಇಬ್ಬರು ಮಹಿಳೆಯರು ಸೋಮವಾರ ಸಮುದ್ರ ಪಾಲಾಗಿದ್ದಾರೆ. ಊರಿನಿಂದ ಅವರ 30ಕ್ಕೂ ಹೆಚ್ಚು ಸಂಬಂಧಿಕರು ಮಂಗಳವಾರ ಜಿಲ್ಲಾ ಆಸ್ಪತ್ರೆಗೆ ಆಗಮಿಸಿದ್ದು, ಮೃತ ದೇಹಗಳನ್ನು ನೋಡಿ ಗೋಳಿಡುತ್ತಿದ್ದರು. ಪರಶುರಾಮ ಅವರಿಗೆ ಜಮೀನಿರಲಿಲ್ಲ. ಬೇರೆಯವರ ಜಮೀನು ಉಂಬಳಿ ಪಡೆದು ಬೇಸಾಯ ಮಾಡುತ್ತಿದ್ದರು. ಎಳನೀರು ಮಾರುತ್ತಿದ್ದರು. ನಂತರ ಲಾರಿ ಖರೀದಿಸಿ ವಹಿವಾಟು ನಡೆಸಿದ್ದರು. ಕಾರವಾರದಲ್ಲಿ ಅವರ ಪತ್ನಿಯ ಅಣ್ಣ ಕನಕ ಮೀನುಗಾರಿಕೆ ಬೋಟ್​ನ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಜಾತ್ರೆಗೆ ಕರೆದರು ಎಂಬ ಕಾರಣಕ್ಕೆ ಪರಶುರಾಮ ಅವರ ಪತ್ನಿ ಭಾರತಿ, ನಾಲ್ವರು ಮಕ್ಕಳು, ಅವರ ತಮ್ಮನ ಪತ್ನಿ ಮಂಜುಳಾ ಮತ್ತು ಅವರ ಮೂವರು ಮಕ್ಕಳು ಸೇರಿ 12 ಜನರು ಜಾತ್ರೆಗೆ ತೆರಳಿದ್ದರು.

ಅನಾಥನಾದ ಬಾಲಕ: ಅಮ್ಮಂಗೆ ಹುಶಾರಿಲ್ಲ. ಔಷಧ ಕೊಡಬೇಕ್ರಿ. ಅಮ್ಮ ಎಲ್ಲದಾಳ ತೋರಿಸ್ರಿ….ಹೀಗೆ ಇಡೀ ದಿನ ಗೋಗರೆಯುತ್ತಿರುವ 9 ವರ್ಷದ ಬಾಲಕ ಗಣೇಶ ಪರಶುರಾಮ ಬೆಳಗಲಕೊಪ್ಪನ ಕೂಗು ಇಡೀ ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿದ್ದ ನೂರಾರು ಜನರ ಕಣ್ಣಲ್ಲಿ ನೀರೂರಿಸಿತು. ಬಾಲಕ ತಂದೆ, ತಾಯಿ, ಒಡಹುಟ್ಟಿದವರನ್ನೆಲ್ಲ ಕಳೆದುಕೊಂಡು ಅನಾಥನಾಗಿದ್ದಾನೆ. ತಂದೆ ಮುಳುಗುತ್ತಿರುವ ದೃಶ್ಯವನ್ನು ಕಣ್ಣಿನಲ್ಲೇ ನೋಡಿದ ಆತನ ಮನದಲ್ಲಿ ಆಘಾತವಾಗಿದೆ. ಪರಶುರಾಮ ಅವರ ತಮ್ಮ ಸೊಮಪ್ಪ ಅವರ ಪತ್ನಿ ಮಂಜುಳಾ ಹಾಗೂ ಮೂವರು ಮಕ್ಕಳೂ ನೀರು ಪಾಲಾಗಿದ್ದು, ಮಂಗಳವಾರ ಆಸ್ಪತ್ರೆಗೆ ಆಗಮಿಸಿದ ಅವರ ಸಂಕಟ ಮನಕಲುಕಿತು.

ಓದಿನ ವೆಚ್ಚದ ಭರವಸೆ: ಬಾಲಕನ ಓದಿಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಸಚಿವ ಆರ್.ವಿ. ದೇಶಪಾಂಡೆ ಸೂಚಿಸಿದ್ದಾರೆ. ಶಾಸಕಿ ರೂಪಾಲಿ ನಾಯ್ಕ ತಾವು ಬಾಲಕನ ಓದಿಗೆ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.

ಮೃತಪಟ್ಟವರು: ಕಡವಾಡದ ಗಣಪತಿ ಕೊಠಾರಕರ್ (67), ಅವರ ಪತ್ನಿ ಮೀನಾಕ್ಷಿ ಕೊಠಾರಕರ್ (55), ನಾದಿನಿ ರಜನಿ ತಳೇಕರ್(50), ಮುಂಬೈನ ನೀಲೇಶ ಪೆಡ್ನೇಕರ್ (38), ಕೊಪ್ಪಳ ಜಿಲ್ಲೆ ಕುಷ್ಟಗಿಯ ಅಣ್ಣಕ್ಕ ಇಂಗಳದಳ(54), ಹಾವೇರಿ ಶಿಗ್ಗಾಂವಿಯ ಭಾರತಿ ಪರಶುರಾಮ ಬೆಳವಲಕೊಪ್ಪ (33), ಮಂಜುಳಾ ಸೋಮಪ್ಪ ಬೆಳವಲಕೊಪ್ಪ(30), ಅರುಣ (1.5 ವರ್ಷ)ಅವರ ಶವಗಳು ಸೋಮವಾರ ಪತ್ತೆಯಾಗಿದ್ದವು. ಮಂಗಳವಾರ ಅಂಕೋಲಾ ರಾಮನಗುಳಿಯ ಗೀತಾ ಹುಲಸ್ವಾರ (23), ಕಾರವಾರ ಸುಂಕೇರಿಯ ಶ್ರೇಯಸ್ ಪಾವಸ್ಕರ್ (28), ಹಾವೇರಿಯ ಪರಶುರಾಮ ಬೆಳವಲಕೊಪ್ಪ(35), ಕಿರಣ್ (4), ಸಂಜೀವಿನಿ (14), ಸೌಜನ್ಯ (12) ಅವರ ಶವಗಳು ಮಂಗಳವಾರ ಪತ್ತೆಯಾಗಿವೆ. ಪರಶುರಾಮ ಕುಟುಂಬದವರಾದ ಕೀರ್ತಿ ಬೆಳವಲಕೊಪ್ಪ(7), ಹಾಗೂ ಸಂದೀಪ ಬೆಳವಲಕೊಪ್ಪ (10) ಅವರಿಗಾಗಿ ಹುಡುಕಾಟ ನಡೆಸಲಾಗಿದೆ.

ಅಧಿಕಾರಿಗಳು ತರಾಟೆಗೆ: ಕಾರ್ಯಾಚರಣೆಗೆ ಅಧಿಕಾರಿಗಳು ವಿಳಂಬವಾಗಿ ಬಂದ ಬಗೆಗೆ ಹಾಗೂ ಕೂರ್ಮಗಡಕ್ಕೆ ತೆರಳಲು ಸೂಕ್ತ ಸುರಕ್ಷಾ ಕ್ರಮಗಳನ್ನು ವಹಿಸದ ಬಗೆಗೆ ಶಾಸಕಿ ರೂಪಾಲಿ ನಾಯ್ಕ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಹಾಗೂ ಎಸ್​ಪಿ ವಿನಾಯಕ ಪಾಟೀಲ ಅವರನ್ನು ತರಾಟೆಗೆ ತೆಗೆದುಕೊಂಡರು.

ಮದುವೆ ನಿಶ್ಚಯವಾಗಿತ್ತು: ಕಾರವಾರ ನಗರದ ಸುಂಕೇರಿಯ ಅಕ್ಕಸಾಲಿಗ ವೃತ್ತಿಯ ಯುವಕ ಶ್ರೇಯಸ್ ಪಾವಸ್ಕರ್(28) ಮದುವೆ ನಿಶ್ಚಯವಾಗಿತ್ತು. ಇಬ್ಬರು ಭಾವಂದಿರ ಜೊತೆಗೆ ಸೋಮವಾರ ಅವರು ಕೂರ್ಮಗಡಕ್ಕೆ ತೆರಳಿದ್ದರು. ದೋಣಿ ದುರಂತದಲ್ಲಿ ಭಾವಂದಿರು ಬದುಕಿ ಬಂದಿದ್ದಾರೆ. ಆದರೆ ಶ್ರೇಯಸ್ ಮಂಗಳವಾರ ಶವವಾಗಿ ಪತ್ತೆಯಾಗಿದ್ದಾರೆ. ಶ್ರೇಯಸ್​ಗೆ ಮೂವರು ಸಹೋದರಿಯರು, ತಂದೆ ಇದ್ದಾರೆ. ಸೋಮವಾರ ಸಮುದ್ರ ಪಾಲಾಗಿರುವ ರಾಮನಗುಳಿಯ ಸಂಗೀತಾ ಹುಲಸ್ವಾರ (23).ಅವರ ಮದುವೆಗೆ ನಿಶ್ಚಿತಾರ್ಥವಾಗಿತ್ತು. ಚಿಕ್ಕಮ್ಮ ಹಾಗೂ ಡೋಂಗ್ರಿ ಗ್ರಾಪಂ ಸದಸ್ಯೆಯಾಗಿರುವ ರಾಧಾ ಅವರ ಜೊತೆಗೆ ಜಾತ್ರೆಗೆ ಆಗಮಿಸಿದ್ದರು. ಆದರೆ, ಸಂಗೀತಾ ವಾಪಸಾಗಿಲ್ಲ. ಗ್ರಾಪಂ ಸದಸ್ಯೆ ರಾಧಾ ಅವರನ್ನು ರಕ್ಷಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಮುಂಬೈನಿಂದ ಬಂದಿದ್ದರು: ರಾಮನಗುಳಿಯ ನೀಲೇಶ ಪೆಡ್ನೇಕರ್ ಹಾಗೂ ಪತ್ನಿ ನೇಹಾ ಮುಂಬೈನಲ್ಲಿರುತ್ತಾರೆ. ಜಾತ್ರೆಯ ಸಲುವಾಗಿಯೇ ಅವರು ಮುಂಬೈನಿಂದ ಆಗಮಿಸಿದ್ದರು. ದೋಣಿ ದುರಂತದಲ್ಲಿ ನೀಲೇಶ ಕೊನೆಯುಸಿರೆಳೆದಿದ್ದಾರೆ. ನೇಹಾ ಸುರಕ್ಷಿತವಾಗಿದ್ದು, ಮಂಗಳವಾರ ಪತಿಯ ಮೃತ ದೇಹದ ಜೊತೆಗೆ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ.

10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆಗ್ರಹ: ದೋಣಿ ದುರಂತದಲ್ಲಿ ಮೃತಪಟ್ಟವರಿಗೆ ಸರ್ಕಾರ ತಲಾ 2 ಲಕ್ಷ ರೂ. ಪರಿಹಾರ ಘೊಷಿಸಿದ್ದು, ಅದನ್ನು 10 ಲಕ್ಷಕ್ಕೆ ಏರಿಸುವಂತೆ ಜಿಲ್ಲಾ ಆಸ್ಪತ್ರೆಯ ಎದುರು ಕೆಲವರು ಪ್ರತಿಭಟನೆ ನಡೆಸಿದರು. ಮೃತ ಪರಶುರಾಮ ಅವರ ಸಂಬಂಧಿಕರು ಮತ್ತು ಸ್ಥಳೀಯ ಮುಖಂಡ ರಾಘು ನಾಯ್ಕ ಹಾಗೂ ಇತರರು ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದ ಶಾಸಕಿ ರೂಪಾಲಿ ನಾಯ್ಕ ಹಾಗೂ ರಾಘು ಹಾಗೂ ಇತರರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಹಾರದ ಮೊತ್ತ ಹೆಚ್ಚಿಸುವಂತೆ ಈಗಾಗಲೇ ಮುಖ್ಯಮಂತ್ರಿಗಳ ಜೊತೆಗೆ ಮಾತನಾಡಿದ್ದೇನೆ. ಆದರೆ, ನೀವು ಸಾವಿನ ಮನೆಯಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಕೆಂಡಾಮಂಡಲರಾದರು. ಪೊಲೀಸರು ಬಂದು ಧರಣಿ ಕುಳಿತವರನ್ನು ಬೇರೆಡೆ ಕರೆದೊಯ್ದು ಪರಿಸ್ಥಿತಿ ತಿಳಿಗೊಳಿಸಿದರು. ಶಾಸಕಿ ರೂಪಾಲಿ ತಮ್ಮನ್ನು ಅವಾಚ್ಯವಾಗಿ ನಿಂದಿಸಿದ್ದು, ಅವರು ಕ್ಷಮೆ ಕೇಳಬೇಕು ಎಂದು ಮುಖಂಡ ರಾಘು ನಾಯ್ಕ ಒತ್ತಾಯಿಸಿದ್ದಾರೆ.

ನಿರಂತರ ಕಾರ್ಯಾಚರಣೆ: ಮಂಗಳವಾರ ನೌಕಾಸೇನೆಯ ಹಡಗು ಐಎನ್​ಎಸ್ ತಿಲ್ಲಾಂಚಾಂಗ್, 2 ಹೆಲಿಕಾಪ್ಟರ್​ಗಳು, ಡೋರ್ನಿಯರ್ ವಿಮಾನ, ಭಾರತೀಯ ತಟರಕ್ಷಕ ದಳದ ಅಮರ್ತ್ಯ ಎಂಬ ಸಣ್ಣ ಹಡಗು, ಸಿ-155, ಸಿ-420, ಸಿ-123 ಬೋಟ್​ಗಳು, ಕರಾವಳಿ ಕಾವಲುಪಡೆಯ ಎರಡು ಬೋಟ್​ಗಳು, ಜಿಲ್ಲಾಡಳಿತದ ಲೈಫ್​ಗಾರ್ಡ್ ಸೇರಿ 50 ಕ್ಕೂ ಹೆಚ್ಚು ಸಿಬ್ಬಂದಿ ಬೆಳಗ್ಗೆ 6 ಗಂಟೆಯಿಂದ ಸಂಜೆ 5 ರವರೆಗೂ ನಿರಂತರ ಕಾರ್ಯಾಚರಣೆ ನಡೆಸಿದ್ದರು. ಕರಾವಳಿ ಕಾವಲುಪಡೆ ಎಸ್​ಪಿ ಎನ್.ಟಿ. ಪ್ರಮೋದರಾವ್, ಜಿಲ್ಲಾ ಎಸ್.ಪಿ. ವಿನಾಯಕ ಪಾಟೀಲ ಹಾಗೂ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಸ್ವತಃ ಬೋಟ್​ನಲ್ಲಿ ತೆರಳಿ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿದ್ದರು. ಮಧ್ಯಾಹ್ನದ ನಂತರ ಒಂದೊಂದೇ ಮೃತ ದೇಹಗಳು ಘಟನೆ ನಡೆದ ಸ್ಥಳದಿಂದ ನಾಲ್ಕೈದು ಕಿಮೀ ದೂರದಲ್ಲಿ ಪತ್ತೆಯಾದವು. ಕೆಲವು ದೇಹಗಳನ್ನು ಹೆಲಿಕಾಪ್ಟರ್​ನಲ್ಲಿದ್ದ ಸಿಬ್ಬಂದಿಯೇ ಇಳಿದು ತೆಗೆದರು. ಜಿಲ್ಲಾ ಆಸ್ಪತ್ರೆ ಬಳಿ ಮಂಗಳವಾರ ಜನಸಾಗರವೇ ನೆರೆದಿತ್ತು. ಪ್ರತಿ ಆಂಬುಲೆನ್ಸ್​ನಲ್ಲಿ ಮೃತ ದೇಹ ಕರೆತಂದಾಗಲೂ ಜನರು ತುಂಬಿಕೊಳ್ಳುತ್ತಿದ್ದರು.

ಪಲ್ಲಕ್ಕಿಗೆ ತೋರಣಗಳೇ ಇರಲಿಲ್ಲ: 1983ರಲ್ಲಿ ಕೂರ್ಮಗಡ ಜಾತ್ರೆಯ ಸಂದರ್ಭದಲ್ಲಿ ಕಾಳಿ ಅಳಿವೆಯಲ್ಲಿ ದೋಣಿ ಅವಘಡ ಸಂಭವಿಸಿತ್ತು. ಆಗ ಮೂವರು ಮೃತಪಟ್ಟಿದ್ದರು. ನಂತರದ ವರ್ಷಗಳಲ್ಲೂ ಎರಡು ಬಾರಿ ದೋಣಿ ಮಗುಚಿದ್ದರೂ ಯಾರೂ ಮೃತಪಟ್ಟಿರಲಿಲ್ಲ. ಆದರೆ, ಇದು ಮಾತ್ರ ದೊಡ್ಡ ದುರಂತ ಎಂದು ಸ್ಥಳೀಯ ರತನ್ ದುರ್ಗೆಕರ್ ಹಿಂದಿನ ಘಟನೆ ನೆನಪಿಸುತ್ತಾರೆ. ಈ ದುರಂತದಿಂದ ಕಾರವಾರ ಜನ ದಿಗಮೆಗೊಂಡಿದ್ದಾರೆ. ಮಂಗಳವಾರ ಕೂರ್ಮಗಡ ದೇವಸ್ಥಾನದಿಂದ ಜಾತ್ರೆ ಮುಗಿಸಿ ದೋಣಿಯಲ್ಲಿ ಆಗಮಿಸಿದ ಕಡವಾಡದ ನರಸಿಂಹ ದೇವರನ್ನು ಸ್ವಾಗತಿಸಲು ಹೆಚ್ಚಿನ ಜನರಿರಲಿಲ್ಲ. ಪ್ರತಿ ವರ್ಷ ದಾರಿ ಮಧ್ಯೆ ನೂರಾರು ತೋರಣ ಹಾಕಲಾಗುತ್ತಿತ್ತು. ಈ ಬಾರಿ ತೋರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಮುಖವಾಗಿತ್ತು.

ತನಿಖೆ ಪ್ರಗತಿಯಲ್ಲಿ: ಕೋಡಿಬಾಗದಿಂದ 16 ಬೋಟ್​ಗಳಲ್ಲಿ ಪ್ರಯಾಣಿಕರನ್ನು ಕೊಂಡೊಯ್ಯಲು ಬಂದರು ಇಲಾಖೆ ಪರವಾನಗಿ ನೀಡಿತ್ತು. ದೇವಬಾಗದ ದಯಾನಂದ ರಾಮ ಜಾದವ್ ದೇವಬಾಗ ಅಡ್ವೆಂಚರ್ ಬೋಟಿಂಗ್ ಸೆಂಟರ್​ನ ಹೆಸರಿನ ಬೋಟ್ ತಂದು ಪರವಾಗಿ ಇಲ್ಲದೇ ಜನರನ್ನು ಹೊಡೆಯಲು ಪ್ರಾರಂಭಿಸಿದ್ದರು. ಇದರಿಂದ ದಯಾನಂದ ಹಾಗೂ ಬೋಟ್​ನಲ್ಲಿದ್ದ ಇನ್ನೊಬ್ಬ ರಘುನಾಥ ಚೋಪ್ಡೇಕರ್ ಎಂಬಾತನನ್ನು ಬಂಧಿಸಿ ವಿಚಾರಣೆ ಕೈಗೊಳ್ಳಲಾಗಿದೆ. ಬೋಟ್​ನಲ್ಲಿದ್ದ ಇನ್ನಿಬ್ಬರು ಸಿಬ್ಬಂದಿ ನಾಪತ್ತೆಯಾಗಿದ್ದಾರೆ. 24 ಸೀಟ್​ಗಳ ಬೋಟ್ ಇದಾಗಿದ್ದು, 24 ಲೈಫ್ ಜಾಕೆಟ್​ಗಳು ಬೋಟ್​ನಲ್ಲಿದ್ದರೂ ಅದನ್ನು ಪ್ರಯಾಣಿಕರಿಗೆ ಹಾಕಿರಲಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಈ ಕುರಿತು ತನಿಖೆಗೆ ಆದೇಶಿಸಿದ್ದು, ತನಿಖೆ ಪ್ರಗತಿಯಲ್ಲಿದೆ. ಸರ್ಕಾರಕ್ಕೆ ಪ್ರಾಥಮಿಕ ವರದಿ ನೀಡಲಾಗಿದೆ ಎಂದು ಎಸ್​ಪಿ ವಿನಾಯಕ ಪಾಟೀಲ ಮಾಹಿತಿ ನೀಡಿದರು.

ಹೊಸೂರಲ್ಲಿ ಸ್ಮಶಾನ ಮೌನ: ಶಿಗ್ಗಾಂವಿ: ಕಾರವಾರದ ಕೂರ್ಮಗಡ ಜಾತ್ರೆ ಮುಗಿಸಿ ಸ್ವಗ್ರಾಮಕ್ಕೆ ಆಗಮಿಸಬೇಕಿದ್ದವರನ್ನು ವಿಧಿ ಜಲದ ಅಟ್ಟಹಾಸದ ಮೂಲಕ ಮಸಣಕ್ಕೆ ಅಟ್ಟಿದೆ. ಸಹೋದರರಿಬ್ಬರ ಕುಟುಂಬ ವಿಧಿಯಾಟಕ್ಕೆ ಬಲಿಯಾಗಿದೆ. ತಾಲೂಕಿನ ಹೊಸೂರಿನ ಬೆಳವಲಕೊಪ್ಪ ಗ್ರಾಮದಲ್ಲಿ ಸೋಮವಾರ ರಾತ್ರಿಯಿಂದ ಸ್ಮಶಾನ ಮೌನ ಆವರಿಸಿದೆ. ‘ಎಪ್ಪಾ.. ಎನ್.. ತಂದ್ಯೋ.. ದೇವರ ನಮ್ಮನ್ನು ಯಾಕ ಕರಕೋಲಿಲ್ಲ..? ಎಲ್ಲಾರನೂ ಕಳಿಸಿ ನಾಯೇನ್ ಮಾಡಲಿ ಇಲ್ಲಿ. ದೇವರಿಗೆ ಹೊಂಟಾರ ಎಂದು ಹರಸಿ ಕಳಿಸಿದ್ದೆ. ಆದರೆ, ಆ ದೇವರು ಅವರನ್ನು ತನ್ನತ್ತ ಕರೆಸಿಕೊಂಡ. ಇಡೀ ಕುಟುಂಬ ಒಂದೇ ಸಲ ದೇವರ ಪಾದ ಸೇರಿದಂಗಾತು. ಮುಂದೆ ನನ್ನ ಗತಿ ಹೆಂಗ್. ಹೋದವರು ಹೊಳ್ಳಿ ಬರ್ತಾರ, ಪ್ರಸಾದ ತರ್ತಾರ ಅಂದುಕೊಂಡಿದ್ದೆ ಹೆಣ ತರಕತ್ತೀರಲ್ಲೋ ಯಪ್ಪಾ..’ ಎಂಬ ಮನೆಯ ಹಿರಿ ತಾಯಿ ಸೋಮಕ್ಕನ ಮಾತು ಸೇರಿದ್ದ ಜನರ ಮನಕಲಕಿತು. ಗ್ರಾಮಸ್ಥರು ನೀರು ಕುಡಿಸಿ, ಅವರನ್ನು ಸಂತೈಸಿದರು. ಮಾವ ಶೇಖಪ್ಪ, ಸೊಸೆಯಂದಿರಾದ ರತ್ನವ್ವ, ರೇಣವ್ವ ಅವರಷ್ಟೇ ಮನೆಯಲ್ಲಿದ್ದರು. ಆದರೆ, ಈ ಸುದ್ದಿ ಬರುತ್ತಿದ್ದಂತೆ ದಿಕ್ಕು ತೋಚದಂತಾಗಿ ಮನೆ ಮುಂದೆ ಜಮಾಯಿಸುತ್ತಿರುವ ಜನ, ಪೊಲೀಸರನ್ನು ಕಂಡು ದಿಗಮೆಗೊಂಡರು. ‘ಯಾರಿಗೆ ಏನಾಗೇತಿ ಹೇಳ್ರೀ ಸಾಹೇಬರ’ ಎಂದು ಅವರು ಪರಿತಪಿಸುತ್ತಿದ್ದ ದೃಶ್ಯ ನೆರೆದವರ ಕಣ್ಣಲ್ಲಿ ನೀರು ತರಿಸಿತು.

Stay connected

278,741FansLike
587FollowersFollow
622,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...