More

  ಕೂರಮೇರು ಸರ್ಕಾರಿ ಶಾಲೆಗೆ ಬೀಗ, ವಿದ್ಯಾರ್ಥಿಗಳ ದಾಖಲಾತಿ ಶೂನ್ಯ, ಇದ್ದ ಮೂವರೂ ವರ್ಗಾವಣೆ

  ಶ್ರವಣ್ ಕುಮಾರ್ ನಾಳ
  ಪುತ್ತೂರು ಶೈಕ್ಷಣಿಕ ವಲಯಕ್ಕೆ ಒಳಪಟ್ಟಿರುವ ಕೂರಮೇರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ದಾಖಲಾಗಲು ವಿದ್ಯಾರ್ಥಿಗಳೇ ಇಲ್ಲದೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಶೂನ್ಯ ದಾಖಲಾತಿಯ ಕೊರಗಿನೊಂದಿಗೆ ಈ ಸರ್ಕಾರಿ ಶಾಲೆಗೆ ಬೀಗ ಜಡಿಯಲಾಗಿದೆ.
  1984ರಲ್ಲಿ ಪ್ರಾರಂಭಗೊಂಡ ಈ ಶಾಲೆಯಲ್ಲಿ 1ರಿಂದ 5ನೇ ತನಕ ಕಲಿಸಲಾಗುತ್ತಿತ್ತು. ಏಳೆಂಟು ವರ್ಷಗಳಿಂದ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಾಣುತ್ತಲೇ ಇತ್ತು. ಇಚ್ಲಂಪಾಡಿಯಲ್ಲಿ ಸರ್ಕಾರಿ ಶಾಲೆ ಇರುವ ಕಾರಣ ಕೂರಮೇರು ಪರಿಸರದ ಮಕ್ಕಳು ಮಾತ್ರ ಇಲ್ಲಿಗೆ ಬಂದು ಕಲಿಯುತ್ತಿದ್ದರು. ಈ ಮಧ್ಯೆ ಸಮೀಪದ ಬೇರೆ-ಬೇರೆ ಕಡೆ ಖಾಸಗಿ ಶಾಲೆಗಳು ಆರಂಭವಾಗಿದ್ದು ಕೂರಮೇರು ಶಾಲೆಗೆ ಬರುವ ಮಕ್ಕಳ ಸಂಖ್ಯೆ ಕುಸಿಯುತ್ತ ಪ್ರಸ್ತುತ ವರ್ಷ ಶೂನ್ಯಕ್ಕೆ ಇಳಿದೇ ಬಿಟ್ಟಿತು. ಪರಿಣಾಮ ಈ ಶೈಕ್ಷಣಿಕ ಸಾಲಿನಲ್ಲಿ ಬೀಗ ಜಡಿದ ಅವಿಭಜಿತ ಪುತ್ತೂರು ತಾಲೂಕಿನ ಪ್ರಥಮ ಸರ್ಕಾರಿ ಶಾಲೆ ಎಂಬ ಹಣೆಪಟ್ಟಿಯೊಂದಿಗೆ ಶೂನ್ಯ ಮಕ್ಕಳ ಶಾಲೆ ಎಂದು ಗುರುತಿಸಿಕೊಂಡಿದೆ.
  ಕಳೆದ ಶೈಕ್ಷಣಿಕ ಅವಧಿಯಲ್ಲಿ ಇಲ್ಲಿ ಮೂವರು ಮಕ್ಕಳು, ಓರ್ವ ಶಿಕ್ಷಕರಿದ್ದರು. ಎರಡನೇ ತರಗತಿಯಲ್ಲಿ ಒಬ್ಬ, ಐದನೇ ತರಗತಿಯಲ್ಲಿ ಇಬ್ಬರು ವಿದ್ಯಾರ್ಥಿಗಳಿದ್ದು, ಅವರು ಬೇರೆ ಶಾಲೆಗೆ ವರ್ಗಾವಣೆ ತೆಗೆದುಕೊಂಡಿದ್ದಾರೆ. ಈ ಶೈಕ್ಷಣಿಕ ಅವಧಿಯಲ್ಲಿ ಮಕ್ಕಳ ದಾಖಲಾತಿ ಆಗಿಲ್ಲ. ಜೂನ್ 30ರ ತನಕ ದಾಖಲಾತಿ ಆಂದೋಲನ ನಡೆಯುತ್ತಿದ್ದರೂ ಇಲ್ಲಿ ಸೇರ್ಪಡೆಗೆ ಮಕ್ಕಳೇ ಇಲ್ಲ. ಹೀಗಾಗಿ ಶಿಕ್ಷಕರನ್ನು ಸಿಆರ್‌ಪಿ ಆಗಿ ನಿಯೋಜಿಸಿ, ಶೂನ್ಯ ದಾಖಲಾತಿ ಕಾರಣ ನೀಡಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ.
  ಇತಿಹಾಸದ ಪುಟ ಸೇರಲಿದೆ ವಿದ್ಯಾದೇಗುಲ: ಸರ್ಕಾರವು ತಾಲೂಕಿಗೆ ಒಂದು ಮಾದರಿ ಶಾಲೆ ರೂಪಿಸುವ ಯೋಜನೆ ಪ್ರಕಟಿಸಿದೆ. ಅದರಂತೆ ಪುತ್ತೂರು ಶೈಕ್ಷಣಿಕ ವಲಯದಲ್ಲಿ ಇಚ್ಲಂಪಾಡಿ ಶಾಲೆ ಮಾದರಿ ಶಾಲೆಯಾಗಿ ರೂಪುಗೊಳ್ಳಲಿದ್ದು, ಸನಿಹದಲ್ಲೇ ಇರುವ ಕೂರಮೇರು ಶಾಲೆಯನ್ನು ಇದರ ಜತೆ ವಿಲೀನಗೊಳಿಸುವ ಉದ್ದೇಶ ಹೊಂದಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೂ ಮೂರು ವರ್ಷದೊಳಗೆ ದಾಖಲಾತಿ ಇದ್ದಲ್ಲಿ ಪುನಃ ಶಾಲೆ ತೆರೆಯಲು ಅವಕಾಶ ಇದೆ. ಆದರೆ ಕೂರಮೇರು ಅಂಗನವಾಡಿಯಲ್ಲೂ ಮಕ್ಕಳಿಲ್ಲದ ಕಾರಣ ಭವಿಷ್ಯದಲ್ಲಿ ದಾಖಲಾತಿ ಕಷ್ಟವೇ. ಒಂದೆರೆಡು ಮಕ್ಕಳಿರುವುದರಿಂದ ಕಲಿಕೆಗೆ ಉತ್ತಮ ವಾತಾವರಣ ಸಿಗದು ಎಂಬ ಕಾರಣಕ್ಕೆ ಪಾಲಕರೂ ಮಕ್ಕಳ ಸೇರ್ಪಡೆಗೆ ಒಪ್ಪುತ್ತಿಲ್ಲ. ಹೀಗಾಗಿ ಶಾಲೆ ಮುಚ್ಚಿ ಇತಿಹಾಸದ ಪುಟ ಸೇರುಲಿರುವುದು ಬಹುತೇಕ ನಿಶ್ಚಿತ.

  See also  ಜಂಗಲ್ ಕಟ್ಟಿಂಗ್‌ಗೆ ಅನುಮೋದನೆ- ಪುತ್ತೂರು ನಗರಸಭಾ ವ್ಯಾಪ್ತಿಗೆ 13 ಲಕ್ಷ ರೂ. ಅನುದಾನ


  ಮಾದರಿ ಶಾಲೆ ರೂಪಿಸುವ ಉದ್ದೇಶ ಇರುವುದರಿಂದ ಪುತ್ತೂರು ಶೈಕ್ಷಣಿಕ ವಲಯದಲ್ಲಿ ಇಚ್ಲಂಪಾಡಿ ಶಾಲೆಯನ್ನು ಗುರುತಿಸಲಾಗಿದೆ. ಹಾಗಾಗಿ ಸನಿಹದಲ್ಲೇ ಇರುವ ಕೂರಮೇರು ಶಾಲೆಯನ್ನು ಇಚ್ಲಂಪಾಡಿ ಶಾಲೆ ವಿಲೀನಗೊಳಿಸುವ ಉದ್ದೇಶ ಹೊಂದಲಾಗಿದೆ.
  ಎಸ್ ಅಂಗಾರ , ಸಚಿವ


  Array

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts