ಕುಸ್ತಿಯಲ್ಲಿ ಬೀರೇಶ, ಪ್ರೇಮಾಗೆ ಬೆಳ್ಳಿಗದೆ

ಶಿರಹಟ್ಟಿ: ಶ್ರೀವೀರಭದ್ರೇಶ್ವರ ಹಾಗೂ ಮಾರುತಿ ದೇವರ ಜಾತ್ರೆ ನಿಮಿತ್ತ ವೀರಭದ್ರೇಶ್ವರ ಟ್ರಸ್ಟ್ ಕಮಿಟಿಯಿಂದ ತಾಲೂಕಿನ ಸುಗ್ನಳ್ಳಿ ಗ್ರಾಮದಲ್ಲಿ ಗುರುವಾರ ರಾಷ್ಟ್ರಮಟ್ಟದ ಪುರುಷ ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿ ಜರುಗಿತು.

ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸವರಾಜ ಹೊಂಬಾಳಿಮಠ ಪುರುಷರ ಪಂದ್ಯಾವಳಿಗೆ ಚಾಲನೆ ನೀಡಿದರೆ, ಯುಪಿಎಸ್​ಸಿ ಪರೀಕ್ಷೆಯಲ್ಲಿ ಕರ್ನಾಟಕಕ್ಕೆ ಮೊದಲ ರ್ಯಾಂಕ್ ಪಡೆದ ರಾಹುಲ್ ಸಂಕನೂರ ಅವರ ತಾಯಿ ಸವಿತಾ ಸಂಕನೂರ ಮಹಿಳಾ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು.

ಪುರುಷರ ಪಂದ್ಯಾವಳಿ: ಪುರುಷರ ಕುಸ್ತಿ ಪಂದ್ಯಾವಳಿಯಲ್ಲಿ ಅಥಣಿಯ ಬೀರೇಶ ಅವರು ಕರಡಿಕೊಪ್ಪದ ಫಕೀರಪ್ಪ ಅವರನ್ನು ಮಣಿಸುವ ಮೂಲಕ ಜಯದ ನಗೆ ಬೀರಿದರು. ಬೀರೇಶಗೆ ಗಂಗಾಧರ ಅಭಿಮಾನಿ ಬಳಗ ಕೊಡಮಾಡಿದ ಬೆಳ್ಳಿಯ ಗದೆ ಹಾಗೂ ಪಾರಿತೋಷಕ ವಿತರಿಸಲಾಯಿತು. ಕರಡಿಕೊಪ್ಪದ ಫಕೀರಪ್ಪಗೆ 10 ಸಾವಿರ ರೂ. ಬಹುಮಾನ ನೀಡಲಾಯಿತು. 30 ಜೋಡಿ ಪೈಲ್ವಾನರು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.

ಗಮನ ಸೆಳೆದ ಮಹಿಳಾ ಕುಸ್ತಿಪಂದ್ಯ: ಅಂತಾರಾಷ್ಟ್ರೀಯ ಕುಸ್ತಿ ಪಟು ಪ್ರೇಮಾ ಹುಚ್ಚಣ್ಣವರ ತಮ್ಮ ಪ್ರತಿಸ್ಪರ್ಧಿ ಶಾಹೀರಾ ಅವರನ್ನು ಸುಲಭವಾಗಿ ಸೋಲಿಸುವ ಮೂಲಕ ಬೆಳ್ಳಿ ಗದೆ ಮತ್ತು ಪಾರಿತೋಷಕವನ್ನು ತಮ್ಮದಾಗಿಸಿಕೊಂಡರು. ಶಾಹೀರಾ ಅವರಿಗೆ 5 ಸಾವಿರ ರೂ. ಸಮಾಧಾನಕರ ಬಹುಮಾನ ನೀಡಲಾಯಿತು. ಕೇವಲ 3 ಜೋಡಿ ಮಹಿಳಾ ಕುಸ್ತಿಪಟುಗಳು ಪಾಲ್ಗೊಂಡಿದ್ದರು.

ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಯುಪಿಎಸ್​ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದ ರಾಹುಲ್ ಸಂಕನೂರ, ಸತತ ಪರಿಶ್ರಮ, ಉತ್ತಮ ಗುರುವಿನ ಮಾರ್ಗದರ್ಶನ, ಹೆತ್ತವರ ಆಶೀರ್ವಾದ ಹಾಗೂ ಛಲ ಇದ್ದಾಗ ಮಾತ್ರ ಯಾವುದೇ ರಂಗದಲ್ಲೂ ಸಾಧನೆ ಮಾಡಬಹುದು ಎಂದರು.

ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸವರಾಜ ಹೊಂಬಾಳಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಹುಲ್ ಅವರ ತಂದೆ ಶರಣಪ್ಪ ಹಾಗೂ ತಾಯಿ ಸವಿತಾ ಸಂಕನೂರ, ಸಿ.ಎಸ್.ಮಾಗಳಮಠ, ಗಂಗಾಧರ ಹೊಂಬಾಳಿಮಠ, ಮಲ್ಲನಗೌಡ ಪಾಟೀಲ, ಕುಸ್ತಿ ತರಬೇತುದಾರ ಎಸ್.ಜಿ. ಬೇಲೇರಿ, ರಮೇಶ ಭಾವಿ, ಬಿ.ಸಿ. ನಾವ್ಹಿ ಇತರರು ಇದ್ದರು. ಶಿವಲಿಂಗಪ್ಪ ಜಕ್ಕಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎಸ್. ಗೋಪಾಳಿ ಸ್ವಾಗತಿಸಿದರು. ಹಾಲೇಶ ಜಕ್ಕಲಿ ನಿರೂಪಿಸಿದರು.

Leave a Reply

Your email address will not be published. Required fields are marked *