ಕುಸಿಯುವ ಸ್ಥಿತಿಯಲ್ಲಿ ಕುಂಬ್ರಹಳ್ಳಿ ಶಾಲೆ

ಸಕಲೇಶಪುರ: ತಾಲೂಕಿನ ಕುಂಬ್ರಹಳ್ಳಿ ಸರ್ಕಾರಿ ಶಾಲಾ ಕಟ್ಟಡ ಬೀಳುವ ಹಂತ ತಲುಪಿದ್ದರೂ ಸಂಬಂಧಪಟ್ಟವರು ಇತ್ತ ಗಮನಹರಿಸದ ಪರಿಣಾಮ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆ ಆರಂಭವಾಗುವುದೇ ಅನುಮಾನವಾಗಿದೆ.


ಯಸಳೂರು ಹೋಬಳಿಯಲ್ಲಿ ಅತಿಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಎರಡನೇ ಶಾಲೆ ಎಂಬ ಹೆಗ್ಗಳಿಕೆ ಹೊಂದಿರುವ ಕುಂಬ್ರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ 48 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆ ಏಳು ಕೊಠಡಿಗಳನ್ನು ಹೊಂದಿದೆ.

ಬಹುತೇಕ ತೋಟದ ಕಾರ್ಮಿಕರು ಹಾಗೂ ಬಡ, ಮಧ್ಯಮ ವರ್ಗದವರೇ ವಾಸಿಸುವ ಕುಂಬ್ರಹಳ್ಳಿ, ಹೊವಿನಹಳ್ಳಿ, ಕೋಡ್ರಳ್ಳಿ, ಕೊತ್ತನಹಳ್ಳಿ, ಚಿಕ್ಕಲ್ಲೂರು ಗ್ರಾಮಗಳಿಂದ ಈ ಶಾಲೆಗೆ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಆದರೆ, ಕಳೆದ ಬಾರಿಯ ಅತಿವೃಷ್ಟಿಯಿಂದ ನಲುಗಿರುವ ಹಳೆಯ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ.


ಶಾಲೆಯ ಏಳು ಕೊಠಡಿಗಳು ಸಂಪೂರ್ಣ ದುಸ್ಥಿತಿಗೆ ತಲುಪಿದ್ದು ಯಾವ ಕ್ಷಣದಲ್ಲಾದರೂ ಗೋಡೆ, ಛಾವಣಿ ಕಳಚಿ ಬೀಳಬಹುದು ಎಂಬ ಕಾರಣಕ್ಕೆ ಕಳೆದ ವರ್ಷ ಇದ್ದದ್ದರಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ಒಂದು ಕೊಠಡಿಯಲ್ಲೇ ಶಾಲೆಯ ಎಲ್ಲ ತರಗತಿಗಳನ್ನು ನಡೆಸಲಾಗಿತ್ತು. ಆದರೆ, ಪ್ರಸಕ್ತ ವರ್ಷ ಈ ಕೊಠಡಿಯಲ್ಲಿ ಶಾಲೆ ನಡೆಸುವುದು ಅಸಾಧ್ಯ ಎಂಬ ಸ್ಥಿತಿಗೆ ಕೊಠಡಿ ತಲುಪಿರುವುದರಿಂದ ಈ ವರ್ಷ ಶಾಲೆ ಆರಂಭಿಸುವುದು ಹೇಗೆ ಎಂಬ ಪ್ರಶ್ನೆ ಶಿಕ್ಷಕರನ್ನು ಕಾಡುತ್ತಿದ್ದರೆ, ಇತ್ತ ಪಾಲಕರು ಮಕ್ಕಳ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಶಿಕ್ಷಣ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.


ಎರಡು ವರ್ಷಗಳ ಹಿಂದೆ ಮಕ್ಕಳ ಕೊರತೆ ಕಾರಣ ನೀಡಿ ಚಿಕ್ಕಲ್ಲೂರು ಗ್ರಾಮದ ಶಾಲೆಯನ್ನು ಮುಚ್ಚಲಾಗಿದ್ದು, ಪ್ರಸಕ್ತ ವರ್ಷ ಈ ಶಾಲೆಯೂ ಆರಂಭವಾಗದಿದ್ದರೆ ಸುತ್ತಮುತ್ತಲಿನ 5 ಕಿ.ಮೀ. ವ್ಯಾಪ್ತಿಯ ಗ್ರಾಮಗಳ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಶಿಕ್ಷಣ ಗಗನ ಕುಸುಮವಾಗಲಿದೆ.ಕುಂಬ್ರಹಳ್ಳಿ ಶಾಲೆಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ, ಇದುವರೆಗೆ ಯಾವುದೇ ಉತ್ತರ ಲಭ್ಯವಾಗಿಲ್ಲ.
ಶಿವಾನಂದ್, ಕ್ಷೇತ್ರ ಶಿಕ್ಷಣಾಧಿಕಾರಿ

Leave a Reply

Your email address will not be published. Required fields are marked *