ಕುಸಿದು ಬಿದ್ದ ಹೋಟೆಲ್ ಗೋಡೆ, ಆರು ಜನರಿಗೆ ಗಾಯ

ವಿಜಯವಾಣಿ ಸುದ್ದಿಜಾಲ ಶಿರಸಿ: ನಗರದ ಶಿವಾಜಿಚೌಕದ ತೃಪ್ತಿ ಹೋಟೆಲ್​ನ ಗೋಡೆ ಗುರುವಾರ ಮಧ್ಯಾಹ್ನ ಕುಸಿದು ಬಿದ್ದಿದ್ದು, ಊಟಕ್ಕೆ ಕುಳಿತ 6 ಜನ ಗಾಯಗೊಂಡಿದ್ದಾರೆ. ಈ ಹೋಟೆಲ್ ಕಟ್ಟಡ ಶಿಥಿಲ ಗೊಂಡಿತ್ತು.

ತೃಪ್ತಿ ಹೋಟೆಲ್​ಗೆ ತಾಗಿಯೇ ಇರುವ ಕರಾವಳಿ ಹೋಟೆಲ್​ನಲ್ಲಿ ಊಟ ಮಾಡುತ್ತಿದ್ದ 7 ಜನರ ಮೈಮೇಲೆ ಗೋಡೆ ಕುಸಿದಿದೆ. ಕೆಂಪು ಕಲ್ಲಿನಿಂದ ನಿರ್ವಿುಸಲಾಗಿದ್ದ 15 ಅಡಿಗಳಷ್ಟು ಎತ್ತರದ ಈ ಗೋಡೆ ಕಳೆದ ಕೆಲ ದಿನಗಳ ಮಳೆಯಿಂದಾಗಿ ಶಿಥಿಲಗೊಂಡಿತ್ತು. ಗೋಡೆ ಬಿದ್ದಾಗ ಸಿಲುಕಿಕೊಂಡ 6 ಜನರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆದರೆ, ಇನ್ನೊಬ್ಬ ಗ್ರಾಹಕ ಕಲ್ಲುಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗುತ್ತಿದ್ದಂತೆ ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ, ಸಿಪಿಐ ಗಿರೀಶ ಹಾಗೂ ಪಿಎಸ್​ಐ ಮಾದೇಶ, ಜೆ.ಜಿ. ಸೀತಾರಾಮ ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳದ ಸಿಬ್ಬಂದಿ, ನಗರಸಭೆ ಸಿಬ್ಬಂದಿ ಮತ್ತು ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿದರು. ಆದರೆ, ಯಾರೂ ಸಿಕ್ಕಿ ಹಾಕಿಕೊಳ್ಳದಿರುವುದು ದೃಢಪಟ್ಟಿದ್ದು, ಗಾಯಗೊಳ್ಳದ ವ್ಯಕ್ತಿ ಸ್ಥಳದಿಂದ ತೆರಳಿರಬಹುದು ಎನ್ನಲಾಗಿದೆ.

ದೇವನಳ್ಳಿಯ ಜ್ಯೋತಿ ಕೃಷ್ಣ ನಾಯ್ಕ, ಕಸ್ತೂರಬಾನಗರದ ನಾಗೇಶ ನಾಯ್ಕ, ಸಿದ್ದಾಪುರ ತಾಲೂಕಿನ ಓಣಿಗದ್ದೆಯ ಪರಮೇಶ್ವರ ಗೌಡ ಅವರಿಗೆ ಗಂಭೀರ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಹೋಟೆಲ್ ತ್ಯಾಜ್ಯದ ನೀರನ್ನು ಈ ಗೋಡೆ ಅಂಚಿನಲ್ಲಿ ಹರಿಯಲು ಬಿಟ್ಟಿದ್ದರಿಂದ ಬುಡ ಸಡಿಲಗೊಂಡಿತ್ತು. ಗುರುವಾರ ಸುರಿದ ಭಾರಿ ಮಳೆಯಿಂದಾಗಿ ಈ ಕಾಲುವೆಯಲ್ಲಿ ಬೃಹತ್ ಪ್ರಮಾಣದ ನೀರು ಹರಿದು ಗೋಡೆ ಬಿದ್ದಿದೆ. ನಗರದ ಬಿಡ್ಕಿಬೈಲ್ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಜಾಗ ಇಕ್ಕಟ್ಟಾಗಿದ್ದು, ಸುರಕ್ಷಿತವಲ್ಲದ ಕಟ್ಟಡಗಳ ಸಂಖ್ಯೆ ಅಧಿಕವಾಗಿದೆ. ಇಲ್ಲಿಯ ಹಲವು ಹೋಟೆಲ್​ಗಳನ್ನು ಹಳೆಯ ಕಟ್ಟಡಗಳಲ್ಲಿ ನಡೆಸಲಾಗುತ್ತಿದೆ. ತಕ್ಷಣವೇ ನಗರಸಭೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.

ತೃಪ್ತಿ ಹೋಟೆಲ್ ಗೋಡೆ ಬಿದ್ದ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ನಗರದ ಎಲ್ಲೆಡೆ ಶಿಥಿಲ ಸ್ಥಿತಿಯಲ್ಲಿರುವ ಕಟ್ಟಡ ಮತ್ತು ಗೋಡೆ ಗುರುತಿಸಿ ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇವೆ. | ಗೋಪಾಲಕೃಷ್ಣ ನಾಯಕ ಡಿವೈಎಸ್​ಪಿ ಶಿರಸಿ

Leave a Reply

Your email address will not be published. Required fields are marked *