Kumata, Cement, Coating, Not, Safe, Prevent, Crash,ಕುಸಿತ ತಡೆಗೆ ಸಿಮೆಂಟ್ ಲೇಪನ ಸುರಕ್ಷಿತವಲ್ಲ

ಕುಸಿತ ತಡೆಗೆ ಸಿಮೆಂಟ್ ಲೇಪನ ಸುರಕ್ಷಿತವಲ್ಲ

ಕುಮಟಾ: ರಾಷ್ಟ್ರೀಯ ಹೆದ್ದಾರಿ 66 (17)ರ ಚತುಷ್ಪಥ ಕಾಮಗಾರಿಯಿಂದ ಬವಣೆ ಎದುರಿಸುತ್ತಿರುವ ತಾಲೂಕಿನ ತಂಡ್ರಕುಳಿ ಗ್ರಾಮಕ್ಕೆ ಭಾನುವಾರ ಶಾಸಕ ದಿನಕರ ಶೆಟ್ಟಿ ಭೇಟ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಈ ವೇಳೆ ಅವರು ಗ್ರಾಮಸ್ಥರೊಂದಿಗೆ ಘಟನೆಯ ಸಂಪೂರ್ಣ ಮಾಹಿತಿ ಪಡೆದರು. ಬಳಿಕ ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು ‘ಘಟನೆ ನಡೆದ ದಿನ ನಾನು ಬೆಂಗಳೂರಿನಲ್ಲಿದ್ದೆ. ಹೀಗಾಗಿ ಈಗ ಬಂದು ನೋಡಿದಾಗ ತೀರಾ ಬೇಸರವಾಗಿದೆ. ಜನ ಸಂಪೂರ್ಣ ಸಹಕಾರ ಮಾಡಿದ್ದಾರೆ. ಆದರೆ, ರಸ್ತೆಯ ಮೇಲ್ಭಾಗದಲ್ಲಿ ಗುಡ್ಡ ಕುಸಿಯದಂತೆ ತಡೆಯಲು ಮಾಡಿರುವ ಕಾಮಗಾರಿ ಅವೈಜ್ಞಾನಿಕವಾಗಿದೆ. ಅಲ್ಲದೆ, ಅದರ ಕೆಳಭಾಗದಲ್ಲಿ ಬಂಡೆ ಸ್ಪೋಟಿಸುವ ಕೆಲಸ ಸರಿಯಾದದ್ದಲ್ಲ. ಸ್ಪೋಟದ ಸಂದರ್ಭದಲ್ಲಿ ನೂರಾರು ಮೀಟರ್ ದೂರದವರೆಗೆ ಭೂಮಿ ಕಂಪಿಸುತ್ತದೆ. ಹೀಗಿರುವಾಗ ಮಣ್ಣಿನ ಗುಡ್ಡಕ್ಕೆ ಸಿಮೆಂಟ್ ಲೇಪನ ಖಂಡಿತವಾಗಿಯೂ ಸುರಕ್ಷಿತವಾಗಿ ಉಳಿಯುವುದಿಲ್ಲ. ಮತ್ತೆ ಇಲ್ಲಿ ಕುಸಿತವಾಗುವುದು ಖಚಿತ. ತಾಲೂಕಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆದಾರರು, ಅಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸಬೇಕು. ಅದರ ನಂತರವೇ ಇಲ್ಲಿ ಕೆಲಸ ಮಾಡಲು ಅವಕಾಶ ಕೊಡುತ್ತೇವೆ’ ಎಂದು ತಿಳಿಸಿದರು.

‘ತಂಡ್ರಕುಳಿ ಗ್ರಾಮಸ್ಥರಿಗೆ ಹಿಂದೆ ಆದ ಹಾನಿಗೆ ಪರಿಹಾರವೂ ಕೊಟ್ಟಿಲ್ಲ. ಉಪವಿಭಾಗಾಧಿಕಾರಿಗಳು ಐಆರ್​ಬಿಗೆ ನೋಟಿಸ್ ಕೊಟ್ಟರೆ ಪ್ರಯೋಜನವಿಲ್ಲ. ಈಗ ಆಗಿರುವ ಹಾನಿಗೆ ಪರಿಹಾರ ಕೊಡುವವರು ಯಾರು? ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು’ ಎಂದು ಹೇಳಿದರು.

ಗಣೇಶ ಅಂಬಿಗ ಮಾತನಾಡಿ, ‘ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಅಧಿಕಾರಿಗಳೊಂದಿಗೆ ತಂಡ್ರಕುಳಿ ಸಮಸ್ಯೆ ಬಗ್ಗೆ ಸಭೆ ನಡೆಸುವವರೆಗೆ ಇಲ್ಲಿ ಚತುಷ್ಪಥ ಕಾಮಗಾರಿ ಬಂದ್ ಮಾಡಲಾಗುವುದಾಗಿ ತಹಸೀಲ್ದಾರ್ ಭರವಸೆ ಕೊಟ್ಟಿದ್ದರು. ಆದರೆ ಐಆರ್​ಬಿಯವರು ಬಂದು ಮತ್ತೆ ಕೆಲಸ ಆರಂಭಿಸಿದ್ದರು. ನಾವು ಪ್ರತಿಭಟಿಸಿ ಹಿಂದೆ ಕಳಿಸಿದ್ದೇವೆ’ ಎಂದರು.

ಜಿಪಂ ಸದಸ್ಯ ಗಜು ಪೈ, ಗಣಪಯ್ಯ ಅಂಬಿಗ, ಜಗ್ಗು ಭಟ್, ಹೇಮಂತಕುಮಾರ ಗಾಂವಕರ, ಇತರದ್ದರು.

Leave a Reply

Your email address will not be published. Required fields are marked *