ಕುವೆಂಪು ಕಂಡ ಮಲೆನಾಡು ಸ್ಥಿತ್ಯಂತರ

ಕೊಪ್ಪ: ಮಲೆನಾಡು ಅನೇಕ ಜ್ವಲಂತ ಸಮಸ್ಯೆಳಿಂದ ಸೊರಗುತ್ತಿದೆ. ಕುವೆಂಪು ಕಂಡ ಮಲೆನಾಡು ಸ್ಥಿತ್ಯಂತರವಾಗುತ್ತಿದೆ. ಮಲೆನಾಡಿನ ಕೃಷಿ ಸಂರಕ್ಷಿಸುವ ಕಾರ್ಯ ಸರ್ಕಾರದ ಜವಾಬ್ದಾರಿ ಎಂದು 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಶಂ.ನ.ಶೇಷಗಿರಿ ತಿಳಿಸಿದರು.

ಶನಿವಾರ ಕಮ್ಮರಡಿಯ ನೇತಾಜಿ ಸುಭಾಷ್​ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಲೆನಾಡನ್ನು ಸಾಕಿ ಸಲಹಿದ್ದ ಅಡಕೆ ಹಳದಿ ಎಲೆ ರೋಗಕ್ಕೆ ಬಲಿಯಾಗುತ್ತಿದೆ. ಭತ್ತದ ಗದ್ದೆಗಳು ಅಕೇಶಿಯಾ ತೋಟಗಳಾಗುತ್ತಿವೆ. ಇಲ್ಲಿನ ಜಮೀನುಗಳು ಪರರಾಜ್ಯದವರ ಪಾಲಾಗುತ್ತಿರುವುದಲ್ಲದೆ, ಆರ್ಥಿಕ ತಲ್ಲಣದ ಭಯ ಹುಟ್ಟಿಸಿದೆ ಎಂದರು.

ರಾಜ್ಯದಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಆಂಗ್ಲ ಮಾಧ್ಯಮ ತರಬೇಕೆಂಬ ಸ್ಥಿತಿ ನಿರ್ವಣವಾಗಿದೆ. ಒಂದೇ ದಶಕದಲ್ಲಿ ಕನ್ನಡ ಶಾಲೆಗಳಿಗಾದ ಪರಿಸ್ಥಿತಿ ಇನ್ನು ಕೆಲವೇ ವರ್ಷಗಳಲ್ಲಿ ಕನ್ನಡ ಭಾಷೆಗೂ ಬರಬಹುದೇನೋ ಎಂದು ಆತಂಕ ವ್ಯಕ್ತಪಡಿಸಿದರು.

ಭಾಷೆ ಎಂದರೆ ಬದುಕು. ಯಾವುದೇ ಭಾಷೆಯನ್ನು ನಾಶ ಪಡಿಸಿದರೆ ದೇಶವನ್ನು ನಾಶ ಮಾಡಿದ ಹಾಗೆ. ಭಾಷೆ ಉಳಿಯಬೇಕಾದರೆ ಆ ಭಾಷೆಯನ್ನಾಡುವ ಜನರ ಬದುಕು ಸಮೃದ್ಧವಾಗಿರಬೇಕು ಎಂದರು.

ಗ್ರಾಮೀಣ ಭಾಗದಲ್ಲಿ ಅದ್ದೂರಿ ನುಡಿ ಹಬ್ಬ: ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಗ್ರಾಮೀಣ ಭಾಗದಲ್ಲಿ ಜಾತ್ರೆಯಾಯಿತು. ಬೆಳಗ್ಗೆ 9.30ಕ್ಕೆ ಸುಭಾಷ್​ಚಂದ್ರ ಕ್ರೀಡಾಂಗಣದಲ್ಲಿ ಶಾಸಕ ಟಿ.ಡಿ.ರಾಜೇಗೌಡ ರಾಷ್ಟ್ರಧ್ವಜಾರೋಹಣ ನೆರವೇರಿಸುವುದರೊಂದಿಗೆ ಸಮ್ಮೇಳನಕ್ಕೆ ಚಾಲನೆ ನೀಡಿದರು. ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಎಚ್.ಎಸ್.ಇನೇಶ್ ನಾಡಧ್ವಜಾರೋಹಣ ನೆರವೇರಿಸಿದರೆ, ತಹಸೀಲ್ದಾರ್ ತನುಜಾ ಟಿ. ಸವದತ್ತಿ ಪರಿಷತ್ ಧ್ವಜಾರೋಹಣ ನೆರವೇರಿಸಿದರು.

ನಂತರ ಕಮ್ಮರಡಿ ಪಟ್ಟಣದ ಪ್ರವೇಶ ದ್ವ್ವಾರದಿಂದ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಗಣಪತಿ ಚಾಲನೆ ನೀಡಿದರು. ಸಾಲಂಕೃತ ವಾಹನದಲ್ಲಿ ಶಂ.ನ.ಶೇಷಗಿರಿ ದಂಪತಿಯನ್ನು ಕೂರಿಸಿ ಮೆರವಣಿಗೆಯಲ್ಲಿ ಸಮ್ಮೇಳನದ ಸ್ಥಳಕ್ಕೆ ಕರೆತರಲಾಯಿತು.

ಮೆರವಣಿಗೆ ಮುಖ್ಯರಸ್ತೆಯಲ್ಲಿ 1.5 ಕಿ.ಮೀ. ದೂರ ಸಾಗಿ ಬಂತು. ವಿವಿಧ ಕಲಾತಂಡಗಳು, ಶಾಲಾ ವಿದ್ಯಾರ್ಥಿಗಳ ವೇಷಭೂಷಣ ಮೆರವಣಿಗೆಗೆ ಮೆರುಗು ನೀಡಿದವು. ಕೊರಗರ ನೃತ್ಯ, ಪೂಜಾ ಕುಣಿತ, ಹುಲಿ ವೇಷ, ಯಕ್ಷಗಾನದ ವೇಷ, ಅಂಟಿಗೆ ಪಿಂಟಿಗೆ, ನಾಸಿಕ್ ಬ್ಯಾಂಡ್, ಬಣ್ಣದ ಛತ್ರಿ ಹೊತ್ತ ಬಾಲಕಿಯರು, ಕನ್ನಡ ನಾಡಿನ ಸಾಧಕರ ವೇಷ ಭೂಷಣ, ಪೂರ್ಣ ಕುಂಭ ಹೊತ್ತ ಮಹಿಳೆಯರು, ಸಮವಸ್ತ್ರ ಧರಿಸಿದ ಶಾಲಾ ವಿದ್ಯಾರ್ಥಿಗಳು, ಮಂಗಳವಾಧ್ಯ ಸೇರಿದಂತೆ 20ಕ್ಕೂ ಹೆಚ್ಚು ಕಲಾತಂಡಗಳು ಮೆರವಣಿಗೆಯಲ್ಲಿದ್ದವು. ಮೆರವಣಿಗೆ ಬಂದ ರಸ್ತೆಯ ಇಕ್ಕೆಲಗಳಲ್ಲಿ ಜನ ನಿಂತು ವೀಕ್ಷಿಸಿದರು.

Leave a Reply

Your email address will not be published. Required fields are marked *