ಕುಲಸಚಿವ ಹುದ್ದೆಯಿಂದ ಹೊಸಮನಿ ಹೊರಗೆ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಮಾನ ಮತ್ತೊಮ್ಮೆ ಹರಾಜಾಗಿದೆ. ರಾಷ್ಟ್ರ ಮಟ್ಟದ ಶ್ರೇಷ್ಠ ವಿಶ್ವವಿದ್ಯಾಲಯಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಒಳಜಗಳ, ತಿಕ್ಕಾಟ ಬಯಲಿಗೆ ಬಂದಿದ್ದು, ಕುಲಸಚಿವ (ಆಡಳಿತ) ಪ್ರೊ. ಕಲ್ಲಪ್ಪ ಹೊಸಮನಿ ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಗಿದೆ.

ಕವಿವಿ ರಾಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಕಲ್ಲಪ್ಪ ಹೊಸಮನಿ ಅವರು 2018ರ ಸೆಪ್ಟೆಂಬರ್​ನಲ್ಲಿ ಕುಲಸಚಿವರಾಗಿ ಸರ್ಕಾರದಿಂದ ನಿಯುಕ್ತಿಗೊಂಡಿದ್ದರು. ಅಂದಿನಿಂದ ಕುಲಸಚಿವ ಹೊಸಮನಿ ಮತ್ತು ಕುಲಪತಿ ಪ್ರೊ. ಪ್ರಮೋದ ಗಾಯಿ ಮಧ್ಯೆ ತಿಕ್ಕಾಟ ನಡೆಯುತ್ತಲೇ ಇತ್ತು. ಇಬ್ಬರ ನಡುವಿನ ಆಡಳಿತಾತ್ಮಕ ಪ್ರತಿಷ್ಠೆಯ ಮೇಲಾಟಕ್ಕೆ ಅಂತೂ ಪ್ರೊ. ಹೊಸಮನಿ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಇದಕ್ಕೆ ಕಾರಣ ಪ್ರೊ. ಹೊಸಮನಿ ಅವರ ವಿರುದ್ಧ ಈ ಮೊದಲು ಕೇಳಿಬಂದಿದ್ದ ಆರೋಪಗಳು.

2011ರಲ್ಲಿ ಪ್ರೊ. ಹೊಸಮನಿ ಕವಿವಿ ರಾಸಾಯನಶಾಸ್ತ್ರ ವಿಭಾಗದಲ್ಲಿದ್ದಾಗ ಅವರ ವಿರುದ್ಧ ಪಿ.ಎಚ್​ಡಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿತ್ತು. ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ. ಅಲ್ಲದೆ 2009ರಲ್ಲಿ ಪ್ರಕಟಿಸಿದ ಯುರೋಪಿಯನ್ ಜಿ.ಎಂಇಡಿ ಕೆಂ44 ಎಂಬ ಸಂಶೋಧನಾ ಲೇಖನವು ಕೃತಿಚೌರ್ಯವಾಗಿದೆ ಎಂಬ ಆರೋಪವೂ ಇತ್ತು. ಈ ಎರಡೂ ಪ್ರಕರಣಗಳನ್ನಿಟ್ಟುಕೊಂಡು ಕರ್ನಾಟಕ ಸತ್ಯಶೋಧನಾ ಹೋರಾಟ ವೇದಿಕೆಯ ಪದಾಧಿಕಾರಿಗಳು ಹೋರಾಟ ನಡೆಸಿದ್ದರು. ಆರೋಪಗಳ ಕುರಿತು ಕುಲಪತಿ ಪ್ರೊ. ಪ್ರಮೋದ ಗಾಯಿ ಅವರು ಜ. 2ರಂದು ಉನ್ನತ ಶಿಕ್ಷಣ ಇಲಾಖೆಗೆ ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರೊ. ಹೊಸಮನಿ ಅವರನ್ನು ಕುಲಸಚಿವ ನೇಮಕಾತಿ ಆದೇಶ ಹಿಂಪಡೆದಿರುವ ಉನ್ನತ ಶಿಕ್ಷಣ ಇಲಾಖೆ, ಮೂಲ ಹುದ್ದೆಗೆ ಕಳುಹಿಸಿ ಇಲಾಖಾ ತನಿಖೆ ನಡೆಸುವಂತೆ ಫೆ. 1ರಂದು ಆದೇಶದಲ್ಲಿ ತಿಳಿಸಿದೆ. ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಕೆ.ಎಲ್. ಸುಬ್ರಮಣ್ಯ ಅವರ ಆದೇಶದ ಪ್ರತಿ ತಲುಪುತ್ತಿದ್ದಂತೆ, ಸಮಾಜ ವಿಜ್ಞಾನ ನಿಖಾಯದ ಡೀನ್ ಹಾಗೂ ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮೀ ಅಮ್ಮಿನಭಾವಿ ಅವರು ಶನಿವಾರ ಹುದ್ದೆ ಅಲಂಕರಿಸಿದ್ದಾರೆ.

ಘಟಿಕೋತ್ಸವಕ್ಕೆ ಈ ಬಾರಿಯೂ ರಾಜ್ಯಪಾಲರು ಗೈರು: ಧಾರವಾಡ: ಕರ್ನಾಟಕ ವಿಶ್ವ ವಿದ್ಯಾಲಯದ ಗಾಂಧಿ ಭವನದಲ್ಲಿ ಫೆ. 4ರಂದು ನಡೆಯಲಿರುವ ಕವಿವಿ 69ನೇ ಘಟಿಕೋತ್ಸವ ಈ ಬಾರಿಯೂ ರಾಜ್ಯಪಾಲ ವಜುಭಾಯ್ ರೂಢಾಭಾಯ್ ವಾಲಾ ಅನುಪಸ್ಥಿತಿಯಲ್ಲೇ ನಡೆಯುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ. ಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಸಹ ಭಾಗಿಯಾಗುವುದು ಖಚಿತವಾಗಿಲ್ಲ. ಹೀಗಾಗಿ, ರಾಜ್ಯಪಾಲರು ಹಾಗೂ ಉನ್ನತ ಶಿಕ್ಷಣ ಸಚಿವರಿಂದ ಚಿನ್ನದ ಪದಕ ಪಡೆಯುತ್ತೇವೆ ಎಂಬ ಉತ್ಸಾಹದಲ್ಲಿರುವ ವಿದ್ಯಾರ್ಥಿಗಳಿಗೆ ನಿರಾಸೆಯಾಗುವ ಸಾಧ್ಯತೆ ಇದೆ.

ರಾಜ್ಯಶಾಸ್ತ್ರ ವಿಭಾಗದ ನಿರ್ಮಲಾಗೆ 9 ಚಿನ್ನದ ಪದಕ: ಈ ಬಾರಿಯ ಘಟಿಕೋತ್ಸವದಲ್ಲಿ ಎಂಎ ರಾಜ್ಯಶಾಸ್ತ್ರ ವಿಭಾಗದ ನಿರ್ಮಲಾ ತಿಮ್ಮಣ್ಣ ಹೆಗಡೆ ಅತೀ ಹೆಚ್ಚು (9) ಚಿನ್ನದ ಪಡೆದಿದ್ದರೆ, ಎಂ.ಎಸ್​ಸಿ ಗಣಿತ ವಿಭಾಗದ ಮನಿಷಾ ಗಂಗವಾಲ್ಕರ, ಎಂ.ಎಸ್​ಇ ಜೀವರಸಾಯನ ಶಾಸ್ತ್ರ ವಿಭಾಗದ ಪ್ರವೀಣ ಹುಯಿಲಗೋಳ ತಲಾ 8, ಎಂಎ ಕನ್ನಡ ವಿಭಾಗದ ಸುಜಾತಾ ಭೋಸಲೆ, ಎಂಎ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಕೃಷ್ಣ ಇರಾಗರ್, ಎಂ.ಎಸ್​ಸಿ ಪ್ರಾಣಿಶಾಸ್ತ್ರ ವಿಭಾಗದ ರಾಜೇಶ್ವರಿ ಹರ್ವಾಡೇಕರ್ ಹಾಗೂ ಎಂಎಲ್ ಮಾಹಿತಿ ವಿಜ್ಞಾನದಲ್ಲಿ ರಾಧಾ ಹೊನಕೇರಿ ತಲಾ 7, ಎಂಎ ತತ್ವಶಾಸ್ತ್ರ ವಿಭಾಗದಲ್ಲಿ ಹಿರೇಮಠ ಮಡಿವಾಳಯ್ಯ ಅಣ್ಣಯ್ಯ 6, ಎಂಎ ಇಂಗ್ಲಿಷ್ ವಿಭಾಗದಲ್ಲಿ ಅನುಪಮಾ ಹೊಸುರಿ ಮತ್ತು ಎಂಬಿಎ ವಿಭಾಗದಲ್ಲಿ ಸೌಮ್ಯ ಜಹಗೀರದಾರ ತಲಾ 5 ಚಿನ್ನದ ಪದಕಗಳನ್ನು ಪಡೆದಿದ್ದಾರೆ

ಇನ್ನೂ ನಿರ್ಧಾರವಾಗಿಲ್ಲ ‘ಗೌರವ ಡಾಕ್ಟರೇಟ್’ : ಘಟಿಕೋತ್ಸವ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಲು ಕವಿವಿ ವತಿಯಿಂದ ಡಿಸೆಂಬರ್​ನಲ್ಲೇ 15 ಜನರ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಇದೀಗ ಆಯ್ಕೆ ಸಮಿತಿ ಮೂವರ ಹೆಸರನ್ನು ರಾಜ್ಯಪಾಲರ ಕಚೇರಿಗೆ ಕಳುಹಿಸಿದೆ. ಶನಿವಾರ ಸಂಜೆ ಸಭೆ ನಡೆದಿದ್ದು, ರಾಜ್ಯಪಾಲರ ಅಂಕಿತ ಬಿದ್ದ ನಂತರವೇ ಎಷ್ಟು ಜನರಿಗೆ ಮತ್ತು ಯಾರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು ಎಂಬ ಮಾಹಿತಿ ಹೊರ ಬೀಳಲಿದೆ ಎಂದು ಪ್ರಮೋದ ಗಾಯಿ ತಿಳಿಸಿದರು.