ಕುಲಗೆಟ್ಟು ಹೋಗಿರುವ ಮೈತ್ರಿ ಸರ್ಕಾರ

ಹುಬ್ಬಳ್ಳಿ/ಧಾರವಾಡ: ರಾಜ್ಯದಲ್ಲಿ ಮೈತ್ರಿ ಸರ್ಕಾರ ಕುಲಗೆಟ್ಟು ಹೋಗಿದೆ. ಜನರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು.

ಹುಬ್ಬಳ್ಳಿ ತಾಲೂಕಿನ ಗಾಮನಗಟ್ಟಿ ಗ್ರಾಮ ಹಾಗೂ ಧಾರವಾಡ ತಾಲೂಕಿನ ಅಮ್ಮಿನಭಾವಿಯಲ್ಲಿ ಗುರುವಾರ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರ ಪ್ರಚಾರದ ಅಂಗವಾಗಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಮಾಧ್ಯಮದವರ ಮೇಲೆ ಹಲ್ಲೆಯಾದರೆ ಅದಕ್ಕೆ ನಾನು ಹೊಣೆಯಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಹಾಗಾದರೆ ಮಾಧ್ಯಮಗಳೇನು ನಿಮ್ಮ ಕೈಗೊಂಬೆಯಂತೆ ಕೆಲಸ ಮಾಡಬೇಕೆ? ಈ ರೀತಿ ಗೂಂಡಾಗಿರಿ ನಡೆಸಬೇಡಿ, ಮೊದಲು ರಾಜ್ಯದ ಜನರ ಕ್ಷಮೇ ಕೇಳಿ ಎಂದು ಯಡಿಯೂರಪ್ಪ ಒತ್ತಾಯಿಸಿದರು.

ಸಾಕಷ್ಟು ಯೋಜನೆ: ಮಹಿಳೆಯರಿಗೆ ಶೇ. 33 ಮೀಸಲಾತಿ ನೀಡಲು ಮೋದಿ ತೀರ್ವನಿಸಿದ್ದಾರೆ. ಈಗಾಗಲೇ ಮೇಲ್ವರ್ಗದ ಬಡವರಿಗೆ ಶೇ. 10 ಮೀಸಲಾತಿ ಕಲ್ಪಿಸಿದ್ದಾರೆ. 60 ವರ್ಷ ಮೀರಿದ ರೈತರಿಗೂ ಪಿಂಚಣಿ ಲಭ್ಯವಾಗಲಿದೆ. ನದಿ ಜೋಡಣೆ, ಗುಡಿಸಲು ರಹಿತ ಭಾರತ ನಿರ್ವಣ, ಬೆಳೆಗೆ ವೈಜ್ಞಾನಿಕ ಬೆಲೆ ಹೀಗೆ ಮೋದಿ ಅವರ ಬಳಿ ಸಾಕಷ್ಟು ಯೋಜನೆಗಳಿವೆ ಎಂದರು.

ಪ್ರಚಾರದ ಅಗತ್ಯವಿಲ್ಲ: ಪ್ರಲ್ಹಾದ ಜೋಶಿ ಅವರು ಕೇಂದ್ರದಿಂದ ಸಾಕಷ್ಟು ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿಯಲ್ಲಿ ಮಾದರಿಯಾಗಿಸಿದ್ದಾರೆ. ಅವರ ಪರ ಪ್ರಚಾರ ಮಾಡುವ ಅಗತ್ಯ ಇಲ್ಲ ಎಂದು ಭಾವಿಸಿದ್ದೇನೆ. ಈ ಬಾರಿ ಅವರು 2 ಲಕ್ಷ ಮತಗಳ ಅಂತರದಿಂದ ಗೆದ್ದು ಬರುತ್ತಾರೆ. ಅದಕ್ಕೆಲ್ಲ ನೀವು ಆಶೀರ್ವಾದ ಮಾಡಬೇಕು ಎಂದು ಹೇಳಿದರು.

ದೇಶದ ಸುರಕ್ಷತೆ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ಜೆಡಿಎಸ್ ಅಪ್ಪ ಮಕ್ಕಳ ಪಕ್ಷ ಅಲ್ಲ, ಮೊಮ್ಮಕ್ಕಳ ಪಕ್ಷ ಕೂಡ ಆಗಿದೆ. ದೇವೇಗೌಡ್ರು ಪತ್ನಿ ಚನ್ನಮ್ಮ ಅವರನ್ನೂ ರಾಜ್ಯಸಭೆ ಸದಸ್ಯರನ್ನಾಗಿ ಮಾಡಿ ಬಿಟ್ಟರೆ ಅವರ ಕುಟುಂಬ ಪರಿಪೂರ್ಣ ರಾಜಕೀಯ ಕುಟುಂಬ ಆಗುತ್ತದೆ ಎಂದು ವ್ಯಂಗ್ಯವಾಡಿದರು.

ಅಭ್ಯರ್ಥಿ ಪ್ರಲ್ಹಾದ ಜೋಶಿ ಮಾತನಾಡಿ, ಬರೀ ತೋಳೇರಿಸುವುದರಿಂದ ಕ್ಷೇತ್ರದ ಅಭಿವೃದ್ಧಿ ಎಲ್ಲಿ ಆಗಿದೆ ಎನ್ನುವುದು ಕಾಣುವುದಿಲ್ಲ. ಬದಲಾಗಿ ಒಂದಿಷ್ಟು ಓದುವುದನ್ನು ಕಲಿಯಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ನಾಲ್ಕನೇ ಬಾರಿ ಸಂಸತ್ತಿಗೆ ಆಯ್ಕೆ ಬಯಸಿರುವ ಪ್ರಲ್ಹಾದ ಜೋಶಿ ಅವರು ಅಭಿವೃದ್ಧಿಯ ಹರಿಕಾರರು. ಸಜ್ಜನ ರಾಜಕಾರಣಿಯಾದ ಅವರನ್ನು ಪುನಃ ಆಯ್ಕೆ ಮಾಡುವ ಮೂಲಕ ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡಬೇಕೆಂದು ಕೋರಿದರು.

ಶಾಸಕ ಅಮೃತ ದೇಸಾಯಿ ಮಾತನಾಡಿ, 10 ವರ್ಷ ಆಳಿದ ಯುಪಿಎ ಸರ್ಕಾರ ಏನೂ ಮಾಡಿಲ್ಲ. ಇದೀಗ ರಾಹುಲ್ ಬಾಬಾ ಪ್ರಧಾನಿಯಾಗುವ ಹಗಲು ಕನಸು ಕಾಣುತ್ತಿದ್ದಾರೆ. ಮೋದಿ-ಜೋಶಿ ಮಾಡಿದ್ದೇನು ಎಂದು ಏಕವಚನದಲ್ಲಿ ಕೈ ಅಭ್ಯರ್ಥಿ ಮಾತನಾಡುವುದು ಸರಿಯಲ್ಲ. ಅವರು ದೇಶದ ಜನತೆಯ ಸೇವೆ ಮಾಡಿದ್ದಾರೆ ಎಂದರು.

ಮಾಜಿ ಶಾಸಕಿ ಸೀಮಾ ಮಸೂತಿ ಮಾತನಾಡಿ, ಐದು ವರ್ಷದಲ್ಲಿ ಮೋದಿ ಅವರು ಮಾಡಿದ ಆರ್ಥಿಕ ನೀತಿಗೆ ಇಡಿ ಜಗತ್ತೇ ಮೆಚ್ಚುಗೆ ವ್ಯಕ್ತಪಡಿಸಿದೆ. ಮೋದಿ ಅವರು ಬಹಳ ಯೋಚನೆ ಮಾಡಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಹೀಗಾಗಿ ಮತ್ತೊಮ್ಮೆ ಮೋದಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕರಾದ ಎಸ್.ಐ. ಚಿಕ್ಕನಗೌಡರ, ವೀರಭದ್ರಪ್ಪ ಹಾಲಹರವಿ, ಅಶೋಕ ಕಾಟವೆ, ಹಿರಿಯರಾದ ಮುದಕಪ್ಪ ಗುರಣ್ಣವರ, ಶಿವಪ್ಪ ಮಾಳಗಿ, ಎಲ್ಲಪ್ಪ ಹಳಿಯಾಳ, ಮುಕ್ತುಂಹುಸೇನ್ ಸಾವಂತನವರ, ಬಿ.ವಿ. ಸೋಗಿ, ಶಂಕ್ರಣ್ಣ ಮುನವಳ್ಳಿ, ಮುಖಂಡರಾದ ತವನಪ್ಪ ಅಷ್ಟಗಿ, ಈರೇಶ ಅಂಚಟಗೇರಿ, ಈಶ್ವರಚಂದ್ರ ಹೊಸಮನಿ, ಸವಿತಾ ಅಮರಶೆಟ್ಟಿ, ಗುರುನಾಥಗೌಡ ಗೌಡರ, ಈರಣ್ಣ ಜಡಿ, ವಿಜಯಾನಂದ ಹೊಸಕೋಟಿ, ಅಜ್ಜಪ್ಪ ಹೊರಕೇರಿ, ಮಲ್ಲಿಕಾರ್ಜುನ ಹೊರಕೇರಿ, ಶಾಂತಪ್ಪ ದೇವಕ್ಕಿ, ಮಂಜುಳಾ ಅಕ್ಕೂರ, ಮಾಜಿ ಉಪಮಹಾಪೌರ ಚಂದ್ರಶೇಖರ ಮನಗುಂಡಿ, ಸ್ವಾಮಿ ಮಹಾಜನ ಶೆಟ್ಟರ್ ಇತರರು ಇದ್ದರು.

ಸೇರ್ಪಡೆ: ಗಾಮನಗಟ್ಟಿಯಲ್ಲಿ ನಡೆದ ಸಭೆಯಲ್ಲಿ ನೂರಾರು ಯುವಕರು ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸೇರಿದರು.