ಸಂಡೂರು: ರೈತರು ಕೃಷಿ ಅವಲಂಬಿತ ಉಪ ಕಸುಬಾದ ಕುರಿ ಸಾಕಣೆ ಮಾಡಬೇಕು. ಇದರಿಂದ ಆದಾಯ ಬರುತ್ತದೆ ಮತ್ತು ಕೃಷಿ ಭೂಮಿಗೆ ಉತ್ತಮ ಗೊಬ್ಬರ ದೊರೆಯುತ್ತದೆ ಎಂದು ಜೆಎಸ್‌ಡಬ್ಲುೃ ಸ್ಟೀಲ್‌ನ ಹಿರಿಯ ಉಪಾಧ್ಯಕ್ಷ ಸುನಿಲ್ ರಾಲ್ಫ್ ಹೇಳಿದರು.

ಸಮಗ್ರ ಕೃಷಿ ಅಳವಡಿಸಿಕೊಂಡ ಆಯ್ದ ರೈತರಿಗೆ ತೋರಣಗಲ್ ಒಪಿಜೆ ಕೇಂದ್ರದಲ್ಲಿ ಜೆಎಸ್‌ಡಬ್ಲುೃ ಫೌಂಡೇಷನ್‌ನಿಂದ ಉಚಿತ ಕುರಿಗಳ ವಿತರಣೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
ಜೆಎಸ್‌ಡಬ್ಲುೃ ಫೌಂಡೇಷನ್ ಸಿಎಸ್‌ಆರ್ ಮುಖ್ಯಸ್ಥ ಪೆದ್ದಣ್ಣ ಬೀಡಲಾ ಮಾತನಾಡಿ, ಸಮಗ್ರ ಕೃಷಿಯ ಭಾಗವಾಗಿ 50 ರೈತರಿಗೆ ಜೆಎಸ್‌ಡಬ್ಲುೃ ಫೌಂಡೇಷನ್ ಬೆಂಬಲ ನೀಡುತ್ತಿದೆ. ಇದುವರೆಗೆ 25 ರೈತರಿಗೆ ಕೋಳಿ ವಿತರಣೆ ಮಾಡಿದ್ದೇವೆ. ಐದು ಕುಟುಂಬಗಳಿಗೆ ಪ್ರಾಯೋಗಿಕವಾಗಿ ಇದೀಗ 25 ಕುರಿಗಳನ್ನು ಉಚಿತವಾಗಿ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ 200ಕ್ಕೂ ಅಧಿಕ ರೈತರಿಗೆ ಕುರಿ, ಕೋಳಿ ಸಾಕಣೆಗೆ ಉತ್ತೇಜನ ನೀಡಲಿದ್ದೇವೆ ಎಂದು ತಿಳಿಸಿದರು.
ಹಗರಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಗೋವಿಂದಪ್ಪ ಮಾತನಾಡಿ, ಸ್ಥಳೀಯವಾಗಿ ಸಾಕಣೆ ಮಾಡುವ ಮತ್ತು ಬಳ್ಳಾರಿ ಭಾಗದ ವಾತಾವರಣಕ್ಕೆ ಒಗ್ಗುವ ಕೆಂಗುರಿ ತಳಿಯ ಕುರಿಗಳನ್ನು ರೈತರಿಗೆ ನೀಡಿದ್ದು, ರೈತರು ಅವುಗಳನ್ನು ಪೋಷಿಸಿ ಹೆಚ್ಚಿನ ಆದಾಯ ಗಳಿಸಬೇಕೆಂದು ಸಲಹೆ ನೀಡಿದರು. ಕೃಷಿ ವಿಭಾಗದ ಸಂಯೋಜಕ ನಾಗನಗೌಡ, ಕೃಷಿ ವಿಜ್ಞಾನಿಗಳಾದ ಡಾ.ರವಿ, ಡಾ.ರಮೇಶ್, ರೈತರು ಇದ್ದರು.