ಕುಮಾರಸ್ವಾಮಿಯವರೇ ಶಾಸಕರ ಹೆಸರು ಹೇಳಿ

ಸಾಗರ: ರಾಜ್ಯದಲ್ಲಿ ಯಾವ ಶಾಸಕರಿಗೆ ಬಿಜೆಪಿ 10 ಕೋಟಿ ರೂ. ಅಮಿಷವೊಡ್ಡಿದೆ ಎನ್ನುವುದನ್ನು ಸಿಎಂ ಎಚ್.ಡಿ. ಕುಮಾರಸ್ವಾಮಿ ಬಹಿರಂಗಪಡಿಸಲಿ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಕಿತ್ತಾಟದಲ್ಲೇ ಕಾಲ ಕಳೆಯುತ್ತಿದ್ದು, ಸುಸೂತ್ರವಾಗಿ ನಡೆಯುವುದು ಬೇಡವಾಗಿದೆ. ಬಿಜೆಪಿ ಯಾವುದೆ ಕಾರಣಕ್ಕೂ ಮೈತ್ರಿಕೂಟದ ಶಾಸಕರನ್ನು ಸೆಳೆಯಲು ಪ್ರಯತ್ನಿಸುವುದಿಲ್ಲ. ಐದು ವರ್ಷಗಳ ಕಾಲ ವಿರೋಧ ಪಕ್ಷದಲ್ಲೇ ಕುಳಿತು ಕೆಲಸ ಮಾಡುತ್ತೇವೆ ಎಂದು ಪದೇಪದೆ ಹೇಳುತ್ತಿದ್ದೇವೆ. ಆದರೂ ಮೈತ್ರಿ ನಾಯಕರು ಆಪರೇಷನ್ ಕಮಲದ ನಡೆದಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದರು.

ಸರ್ಕಾರ ಉಳಿಸಿಕೊಳ್ಳಲು ತರಾತುರಿಯಲ್ಲಿ ಇಬ್ಬರು ಪಕ್ಷೇತರ ಶಾಸಕರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಆದರೆ ಅವರಿಗೆ ಇನ್ನೂ ಖಾತೆ ಹಂಚಿಕೆ ಮಾಡಿಲ್ಲ. ಈ ಸರ್ಕಾರಕ್ಕೆ ಮಂತ್ರಿಗಳು, ಇಲಾಖೆ ಏಕೆ ಬೇಕು. ಅಧಿಕಾರಿಗಳೇ ಸರ್ಕಾರವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

ಅವರದೇ ಕಾರಣಕ್ಕೆ ಸರ್ಕಾರ ಪತನಗೊಳ್ಳಲಿದೆ. ಆದರೆ ಸರ್ಕಾರ ಬಿಜೆಪಿಯಿಂದ ಪತನವಾಯಿತು ಎಂದು ಗೂಬೆ ಕೂರಿಸಲು ಅವರು ಸಿದ್ಧರಾಗಿದ್ದಾರೆ. ಮೈತ್ರಿ ಪಕ್ಷಗಳು ಮಧ್ಯಂತರ ಚುನಾವಣೆಗೆ ಹೋದರೂ ಆಶ್ಚರ್ಯವಿಲ್ಲ ಎಂದರು. ಶಾಸಕ ಹರತಾಳು ಹಾಲಪ್ಪ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಡಿ.ಮೇಘರಾಜ್, ಚೇತನರಾಜ್ ಕಣ್ಣೂರು ಮತ್ತಿತರರು ಇದ್ದರು.

ಕಾಂಗ್ರೆಸ್ ಖಾಲಿ ಡಬ್ಬ:ಸಾಗರ ತಾಲೂಕಿನಲ್ಲಿ ಪಕ್ಷವನ್ನು ಅತ್ಯಂತ ಬಲಿಷ್ಠವಾಗಿ ಕಟ್ಟಲಾಗಿದೆ. ಈಗ ಇಲ್ಲಿ ಕಾಂಗ್ರೆಸ್ ಖಾಲಿ ಡಬ್ಬ. ಸಾಮಾನ್ಯವಾಗಿ ಖಾಲಿ ಡಬ್ಬದ ಶಬ್ದ ಜಾಸ್ತಿ. ಕೇಳಲು ಸಾಧ್ಯವಿಲ್ಲ. ಹಾಗಾಗಿದೆ ಸಾಗರ ತಾಲೂಕಿನಲ್ಲಿ ಕಾಂಗ್ರೆಸ್ ಪರಿಸ್ಥಿತಿ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು. ನಗರಸಭೆಗೆ ಆಯ್ಕೆಯಾದ ಬಿಜೆಪಿ ಸದಸ್ಯರನ್ನು ಅಭಿನಂದಿಸಿ ಮಾತನಾಡಿದ ಅವರು, ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಎಲ್ಲಿದ್ದಾರೆ ಎನ್ನುವುದು ಕಾಣುತ್ತಿಲ್ಲ. ಬಿ.ವೈ.ರಾಘವೇಂದ್ರ ಗೆದ್ದರೆ ರಾಜಕೀಯ ಸನ್ಯಾಸ ಪಡೆಯುವುದಾಗಿ ಹೇಳಿದ್ದ ಬೇಳೂರು ಈಗೇನು ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.

ನಗರಸಭೆ ಚುನಾವಣೆಯಲ್ಲಿ ಬಿಜೆಪಿ 16 ಅಭ್ಯರ್ಥಿಗಳು ಆಯ್ಕೆಯಾಗಿರುವುದು ನಗರವ್ಯಾಪ್ತಿಯ ಮತದಾರರು ಬಿಜೆಪಿ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಸಾಕ್ಷಿ. ಮುಂದಿನ ದಿನಗಳಲ್ಲಿ ಯಾವುದೆ ಚುನಾವಣೆ ಎದುರಾದರೂ ಎದುರಿಸಲು ಪಕ್ಷ ಸಿದ್ಧವಿದೆ.

Leave a Reply

Your email address will not be published. Required fields are marked *