ಕುಮಾರಣ್ಣ ನಮ್ಮೂರ್ಗೆ ಯಾವಾಗಣ್ಣ?

ಕಾರವಾರ: ರಾಜ್ಯದಲ್ಲಿ ಸಿಎಂ ಗ್ರಾಮ ವಾಸ್ತವ್ಯದ ಕುರಿತು ವ್ಯಾಪಕ ಚರ್ಚೆ ನಡೆದಿದೆ.

‘ಮುಖ್ಯಮಂತ್ರಿಗಳೇ ನೀವು ಕೊಟ್ಟ ಮಾತು ಮುರಿಯಬೇಡಿ… ನಮ್ಮೂರಲ್ಲೊಮ್ಮೆ ಗ್ರಾಮ ವಾಸ್ತವ್ಯ ಮಾಡಿ’ ಎಂದು ಕುಮಟಾ ತಾಲೂಕಿನ ಮೇದಿನಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಇದಕ್ಕೆ ಕಾರಣವೂ ಇದೆ. ಕಳೆದ ಬಾರಿ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಬಂದು ಗೋಕರ್ಣದಲ್ಲಿ ತಂಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮೇದಿನಿ ಗ್ರಾಮಸ್ಥರು ಭೇಟಿ ಮಾಡಿದ್ದರು. ತಮ್ಮ ಊರಿನ ಸಮಸ್ಯೆ ಹೇಳಿಕೊಂಡಿದ್ದರು. ಆಗ ಕುಮಾರಸ್ವಾಮಿ ಅವರು ‘ನಾನೇ ಊರಿಗೆ ಬಂದು ಗ್ರಾಮ ವಾಸ್ತವ್ಯ ಮಾಡುತ್ತೇನೆ. ಊರಿಗೆ ರಸ್ತೆ ಹಾಗೂ ಇತರ ಸೌಲಭ್ಯ ಕಲ್ಪಿಸಿಕೊಡುತ್ತೇನೆ‘ ಎಂದು ಭರವಸೆ ನೀಡಿದ್ದರು. ಈಗ ಸಿಎಂ ಗ್ರಾಮ ವಾಸ್ತವ್ಯದ 11 ಗ್ರಾಮಗಳ ಪಟ್ಟಿ ಬಿಡುಗಡೆಯಾಗಿದೆ. ಆದರೆ, ಅದರಲ್ಲಿ ತಮ್ಮ ಊರಿನ ಹೆಸರೇ ಇಲ್ಲ. ತಮಗೆ ಸಿಎಂ ಕೊಟ್ಟ ಭರವಸೆ ಹುಸಿಯೇ ಎಂದು ಇಲ್ಲಿನ ಮುಗ್ಧ ಜನರು ಯೋಚಿಸುತ್ತಿದ್ದಾರೆ.

ರಸ್ತೆ ಮಾಡಿಕೊಡಿ: ಕುಮಟಾ-ಸಿದ್ದಾಪುರ ಮುಖ್ಯರಸ್ತೆ ಯಿಂದ 8 ಕಿಮೀ ದಟ್ಟ ಕಾನನದಲ್ಲಿ ಮೇದಿನಿ ಗ್ರಾಮವಿದೆ. 53 ಮನೆಗಳಿದ್ದು, 400ರಷ್ಟು ಜನರಿದ್ದಾರೆ. ಗ್ರಾಮಸ್ಥರೇ ಕೂಡಿಕೊಂಡು ಹಣ ಹಾಕಿ, ಶ್ರಮದಾನ ಮೂಲಕ ಕಚ್ಚಾ ರಸ್ತೆ ಮಾಡಿಕೊಂಡಿದ್ದಾರೆ. ಬೇಸಿಗೆಯಲ್ಲಿ ಬೈಕ್ ಹಾಗೂ ಜೀಪ್ ಸಂಚರಿಸಬಹುದು. ಆದರೆ, ಮಳೆಗಾಲ ಬಂತು ಎಂದರೆ ಗ್ರಾಮ ಹೊರ ಜಗತ್ತಿನ ಸಂಪರ್ಕ ಕಳೆದುಕೊಳ್ಳುತ್ತದೆ. ಕಳೆದ ಮೂರು ವರ್ಷದ ಹಿಂದೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆಯಾದರೂ ಮಳೆಗಾಲ ದಲ್ಲಿ ದೀಪಗಳು ಬೆಳಗುವುದು ಕಷ್ಟ. ಕಾಡಿನಲ್ಲಿ ತಂತಿ ಹಾದು ಹೋಗಿದ್ದರಿಂದ ಒಂದಲ್ಲ ಒಂದು ಕಡೆ ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತವಾಗುತ್ತದೆ. ಗ್ರಾಮದಲ್ಲಿ ಬೆಳೆಯುವ ಸುವಾಸನೆಭರಿತ ಸಣ್ಣಕ್ಕಿ ಪ್ರಸಿದ್ಧ. ಉಪ್ಪಾಗೆ, ಜೇನು, ಕಾಳು ಮೆಣಸು, ರಾಮಪತ್ರೆ ಮುಂತಾದ ಕಾಡಿನ ಉತ್ಪನ್ನಗಳು ಇಲ್ಲಿ ಲಭ್ಯವಿವೆ. ಆದರೆ, ರಸ್ತೆಯ ಸಮಸ್ಯೆಯಿಂದ ಅವುಗಳಿಗೆ ಸರಿಯಾದ ಬೆಲೆಯೇ ಬರುತ್ತಿಲ್ಲ. ಸರ್ಕಾರದಿಂದ 4 ಕಿಮೀ ರಸ್ತೆ ಮಾಡಿಕೊಟ್ಟರೆ ತಮ್ಮ ಊರಿಗೆ ಮಳೆಗಾಲದಲ್ಲೂ ವಾಹನ ಬರಬಹುದು ಎಂಬುದು ಗ್ರಾಮಸ್ಥರ ಅಭಿಪ್ರಾಯ.

ಕಂಕಣ ಭಾಗ್ಯವಿಲ್ಲ

ಗ್ರಾಮದ ರಸ್ತೆ ಸಮಸ್ಯೆಯಿಂದ ಇಲ್ಲಿನ ಯುವಕ ಯುವತಿಯರಿಗೆ ಮದುವೆಯಾಗುತ್ತಿಲ್ಲ. ಒಂದಲ್ಲ, ಎರಡಲ್ಲ ಬರೋಬ್ಬರಿ 30ರಷ್ಟು ಪ್ರಾಪ್ತ ಯುವಕ, ಯುವತಿಯರು ಸಂಸಾರದ ಕನಸು ನನಸು ಮಾಡಿಕೊಳ್ಳಲು ಕಾಯುತ್ತಿದ್ದಾರೆ. ಹೊರ ಊರಿನವರು ಇಲ್ಲಿಗೆ ಬಂದರೂ ಇಷ್ಟು ದೂರ ಹೆಣ್ಣು ಕೊಟ್ಟರೆ ಅಥವಾ ಇಲ್ಲಿಯ ಯುವತಿಯರನ್ನು ಮದುವೆಯಾದರೆ ಓಡಾಟ ಕಷ್ಟ ಎಂಬ ಒಂದೇ ಕಾರಣದಿಂದ ಮದುವೆಗಳು ರದ್ದಾಗುತ್ತಿವೆ.

ಶಾಲೆ ಇದ್ರೂ ಸಂಬಂಧಿಕರ ಮನೆಯಲ್ಲಿ ಮಕ್ಕಳು

ಗ್ರಾಮದಲ್ಲಿ ಒಂದು ಶಾಲೆ ಇದೆ. ಆದರೆ, ಮೌಲ್ಯಯುತ ಶಿಕ್ಷಣ ದೊರೆಯದು ಎಂಬ ಕಾರಣಕ್ಕೆ ಹೆಚ್ಚಿನ ಪಾಲಕರು ಮಕ್ಕಳನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಓದಿಸುತ್ತಾರೆ.

ಚುನಾವಣೆ ಬಂದಾಗ ಬರುವ ಜನಪ್ರತಿನಿಧಿಗಳು ರಸ್ತೆ ನಿರ್ವಣದ ಭರವಸೆ ಕೊಟ್ಟು ಹೋಗುತ್ತಾರೆ. ಆದರೆ, ನಂತರ ಏನೂ ಮಾಡಿಕೊಡುವುದಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರೂ ಕೂಡ ಕೊಟ್ಟ ಭರವಸೆಯಂತೆ ಇಲ್ಲಿ ಬಂದು ವಾಸ್ತವ್ಯ ಮಾಡುತ್ತಾರೆ ಎಂದು ನಂಬಿದ್ದೆವು. ಮುಂದಿನ ದಿನದಲ್ಲಾದರೂ ಗಮನ ಹರಿಸಿ.

| ಶಿವರಾಮ ಗೌಡ ಗ್ರಾಮಸ್ಥ

ಗ್ರಾಮದ ಸಮಸ್ಯೆ ಗಮನಕ್ಕಿದೆ. ಆದರೆ, ಅಲ್ಲಿ ರಸ್ತೆ ಮಾಡಲು ಅರಣ್ಯ ಇಲಾಖೆ ಬಿಡದಿರುವುದು ಸಮಸ್ಯೆಗೆ ಕಾರಣವಾಗಿದೆ. ಹಲವು ಬಾರಿ ಅರಣ್ಯಾಧಿಕಾರಿಗಳೊಂದಿಗೆ ರ್ಚಚಿಸಿದ್ದೇನೆ.

| ದಿನಕರ ಶೆಟ್ಟಿ ಶಾಸಕ

Leave a Reply

Your email address will not be published. Required fields are marked *