ಕುಮಟಾ ರಸ್ತೆ ಹೊಂಡಗಳ ಆಗರ

ಶಿರಸಿ: ಶಿರಸಿ- ಕುಮಟಾ ರಸ್ತೆಯಲ್ಲಿ ಈಗ ಸಂಚರಿಸುವುದೇ ದುಸ್ತರವಾಗಿದೆ. ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾದ ಈ ರಸ್ತೆಯ ಎಲ್ಲೆಡೆ ಹೊಂಡಗಳೇ ತುಂಬಿದ್ದು, ರಿಪೇರಿ ಮಾಡುವವರೂ ಇಲ್ಲವಾಗಿದೆ.

ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿದ್ದ 60 ಕಿ. ಮೀ. ದೂರದ ಈ ರಾಜ್ಯ ಹೆದ್ದಾರಿ 69 ಅನ್ನು ಅಕ್ಟೋಬರ್ ತಿಂಗಳಿನಲ್ಲಿ ರಾಷ್ಟ್ರೀಯ ಹೆದ್ದಾರಿಯಾಗಿ ಮಾರ್ಪಡಿಸಲಾಗಿದೆ. ಜವಾಬ್ದಾರಿ ವಹಿಸಿಕೊಂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನವೆಂಬರ್ ತಿಂಗಳಿನಲ್ಲಿ ರಸ್ತೆ ಕಾಮಗಾರಿಯನ್ನು ಆರ್.ಎನ್. ಶೆಟ್ಟಿ ಕಂಪನಿಗೆ ಗುತ್ತಿಗೆ ನೀಡಿದೆ. ಗುತ್ತಿಗೆ ಪಡೆದ ಕಂಪನಿ ಮೂರು ತಿಂಗಳ ಕಾಲ ರಸ್ತೆ ಸರ್ವೆ ಕಾರ್ಯ ನಡೆಸಿದೆ. ಆದರೆ, ಅಷ್ಟರಲ್ಲಿ ಚುನಾವಣೆ ಬಂದ ಕಾರಣ ಎಲ್ಲ ಕಾರ್ಯಗಳೂ ಸ್ಥಗಿತಗೊಂಡಿವೆ.

ವಿಸ್ತರಣೆಯ ವೇಳೆ ಈಗಿರುವ ರಸ್ತೆಯ ಇಕ್ಕೆಲಗಳಲ್ಲಿ ಎಷ್ಟು ಜಾಗವನ್ನು ಹೆಚ್ಚುವರಿಯಾಗಿ ಬಳಸಿಕೊಳ್ಳಲಾಗುತ್ತದೆ ಎಂಬ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಹಿತಿ ನೀಡಿರಲಿಲ್ಲ. ಇದೇ ವೇಳೆ ಪರಿಸರ ಹೋರಾಟದ ಸಂಘಟನೆಗಳು ರಸ್ತೆ ವಿಸ್ತರಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದವು. ದೇವಿಮನೆ ಘಟ್ಟ ಪ್ರದೇಶದಲ್ಲಿ ದಟ್ಟಾರಣ್ಯವಿದೆ. ಇಲ್ಲಿ ರಸ್ತೆ ವಿಸ್ತರಿಸುವುದು, ತಿರುವುಗಳನ್ನು ತಿದ್ದುವುದರಿಂದಾಗಿ ವನ್ಯ ಜೀವಿಗಳಿಗೆ ತೊಂದರೆಯಾಗಲಿದೆ. ಮರಗಳನ್ನು ಕಡಿಯುವುದರಿಂದ ಇಲ್ಲಿಯ ಪರಿಸರ ವ್ಯವಸ್ಥೆಗೆ ಧಕ್ಕೆ ಆಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಇದರ ಜೊತೆಯಲ್ಲಿಯೇ ಕೇಂದ್ರ ಪರಿಸರ ಇಲಾಖೆಯು ರಸ್ತೆ ವಿಸ್ತರಣೆಗೆ ಅನುಮತಿ ನೀಡಲು ವಿಳಂಬ ನೀತಿ ಅನುಸರಿಸಿದ್ದು ಹಿನ್ನಡೆಗೆ ಕಾರಣವಾಗಿದೆ.

‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಾವು ಈಗಾಗಲೇ ರಸ್ತೆಯನ್ನು ಹಸ್ತಾಂತರಿಸಿ ಆಗಿದೆ. ಹೀಗಾಗಿ, ನಾವು ಅದನ್ನು ನಿರ್ವಹಣೆ ಮಾಡಲು ಸಾಧ್ಯವಿಲ್ಲ. ರಸ್ತೆ ಹಾಳಾಗಿರುವ ಬಗ್ಗೆ ಹೆದ್ದಾರಿ ಪ್ರಾಧಿಕಾರಕ್ಕೆ ನಾವು ಈಗಾಗಲೇ ತಿಳಿಸಿದ್ದೇವೆ’ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಆರ್. ಎಚ್. ಕುಲಕರ್ಣಿ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ರಸ್ತೆಯನ್ನು ವಹಿಸಿಕೊಂಡಿದೆಯಾದರೂ ಗುತ್ತಿಗೆ ಪಡೆದವರಿಗೆ ಸಂಪೂರ್ಣವಾಗಿ ಇನ್ನೂ ಜವಾಬ್ದಾರಿ ವಹಿಸಿಕೊಟ್ಟಿಲ್ಲ. ಇದರಿಂದಾಗಿ ಗುತ್ತಿಗೆದಾರರೂ ರಸ್ತೆ ರಿಪೇರಿಗೆ ಮುಂದಾಗಿಲ್ಲ.

ಲೋಕೋಪಯೋಗಿ ಇಲಾಖೆ ಪ್ರತಿ ವರ್ಷ ರಿಪೇರಿ ಕಾರ್ಯ ನಡೆಸುತ್ತಿದ್ದರೂ ಇಲ್ಲಿಯ ಜಡಿ ಮಳೆಗೆ ಮಳೆಗಾಲದ ಮೂರು ತಿಂಗಳು ಹೊಂಡಗಳು ಬಿದ್ದು ಸಂಚಾರ ಕಷ್ಟವಾಗುತ್ತಿತ್ತು. ಈ ವರ್ಷ ಬೇಸಿಗೆಯಲ್ಲಿಯೇ ಹೊಂಡಗಳು ಬಿದ್ದು ನಿರ್ವಹಣೆ ಇಲ್ಲದ ಕಾರಣ ಮಳೆಗಾಲದಲ್ಲಿ ರಸ್ತೆಯ ಸ್ಥಿತಿ ಏನು ಎಂಬ ಆತಂಕ ವಾಹನ ಸವಾರರಿಗೆ ಕಾಡಿದೆ. ಇಲಾಖೆಗಳ ನಡುವಿನ ಗೊಂದಲಗಳು ಬಗೆಹರಿದು ಕಾಮಗಾರಿ ಆರಂಭವಾಗುವವರೆಗೆ ರಾಜ್ಯ ಸರ್ಕಾರ ಈ ರಸ್ತೆಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಹಾಳಾದ ರಸ್ತೆಯನ್ನು ತಕ್ಷಣವೇ ರಿಪೇರಿ ಮಾಡಿ ಸಂಚಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಈಗಾಗಲೇ ಮಾತನಾಡಿ ರಸ್ತೆ ರಿಪೇರಿ ಕಾರ್ಯವನ್ನು ತಕ್ಷಣ ನಡೆಸುವಂತೆ ಸೂಚಿಸಿದ್ದೇನೆ. ಈ ಹಿಂದೆಯೂ ಹಾಳಾದಾಗ ಪ್ರಾಧಿಕಾರಕ್ಕೆ ಮಾತನಾಡಿದ್ದರಿಂದ ದುರಸ್ತಿಗೊಳಿಸಿದ್ದರು. ಮಳೆಗಾಲ ಆರಂಭಕ್ಕೂ ಮುನ್ನ ಪ್ರಾಧಿಕಾರ ರಸ್ತೆ ದುರಸ್ತಿಗೊಳಿಸುವ ನಿರೀಕ್ಷೆ ಇದೆ. | ವಿಶ್ವೇಶ್ವರ ಹೆಗಡೆ ಕಾಗೇರಿ ಶಾಸಕರು