ಕಾರವಾರ/ಕುಮಟಾ: ಇದುವರೆಗೆ ಜಿಲ್ಲೆಯ ಭಟ್ಕಳಕ್ಕೆ ಮಾತ್ರ ಸೀಮಿತವಾಗಿದ್ದ ಕರೊನಾ ಈಗ ಕುಮಟಾಕ್ಕೂ ಕಾಲಿರಿಸಿದೆ. ಸಮಾಧಾನದ ಸಂಗತಿ ಎಂದರೆ, ಹಿರೇಗುತ್ತಿ ಚೆಕ್ ಪೋಸ್ಟ್ ಸಿಬ್ಬಂದಿಯ ದಕ್ಷ ಕಾರ್ಯನಿರ್ವಹಣೆಯಿಂದಾಗಿ ಕುಮಟಾದ ಜನ ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.
ಬುಧವಾರ ಜಿಲ್ಲೆಯಲ್ಲಿ ಹೊಸ ಎರಡು ಪ್ರಕರಣಗಳು ಪತ್ತೆಯಾಗಿವೆ. ಕುಮಟಾದಲ್ಲಿ ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದ 26 ವರ್ಷದ ವ್ಯಕ್ತಿ (ಪಿ946), ಹಾಗೂ ಭಟ್ಕಳದ ಎರಡು ತಿಂಗಳನ ಹೆಣ್ಣು ಮಗುವಿಗೆ (ಪಿ 929) ರೋಗ ಇರುವ ಬಗ್ಗೆ ಆರೋಗ್ಯ ಇಲಾಖೆ ವರದಿ ನೀಡಿದೆ. ಈ ಮೂಲಕ ಜಿಲ್ಲೆಯ ಒಟ್ಟಾರೆ ಕೋವಿಡ್ ಸಕ್ರಿಯರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಸೋಂಕಿತರಿಬ್ಬರನ್ನು ಕಾರವಾರ ಕ್ರಿಮ್್ಸ ಕರೊನಾ ವಾರ್ಡ್ಗೆ ಸಾಗಿಸಲಾಗಿದೆ.
ಕಳ್ಳದಾರಿಯಲ್ಲಿ ಕರೊನಾ ತಂದ: ಮಹಾರಾಷ್ಟ್ರ ರಾಜ್ಯದ ರತ್ನಾಗಿರಿಯಲ್ಲಿ 30 ಜನರ ಜತೆ ಮೀನುಗಾರಿಕೆ ನಡೆಸುತ್ತಿದ್ದ ಕುಮಟಾ ತಾಲೂಕಿನ ಗ್ರಾಮೀಣ ಭಾಗದ ವ್ಯಕ್ತಿ ಮೇ 5ರಂದು ಯಾವುದೇ ಪಾಸ್ ಪಡೆಯದೆ ಮೀನು ಲಾರಿಯ ಕ್ಲೀನರ್ ಎಂದು ಹೇಳಿಕೊಂಡು ಬಂದಿದ್ದ. ಹಿರೇಗುತ್ತಿ ತನಿಖಾ ಠಾಣೆಯ ಸಿಬ್ಬಂದಿ ಈತನನ್ನು ತಡೆದು ಸೀಲ್ ಹಾಕಿ ಶಾಲೆಯೊಂದರಲ್ಲಿ ಕ್ವಾರಂಟೈನ್ಗೆ ಒಳಪಡಿಸಿದ್ದರು. ಈತ ಹಾಗೂ ಈತನ ಜತೆ ಇರುವ ಚಾಲಕನಲ್ಲಿ ಯಾವುದೇ ರೋಗ ಲಕ್ಷಣ ಇರಲಿಲ್ಲ. ಗಂಟಲ ದ್ರವದ ಮಾದರಿ ಪರೀಕ್ಷೆ ಮಾಡಿದಾಗ ಈತನಲ್ಲಿ ಸೋಂಕು ಇರುವುದು ಖಚಿತವಾಗಿದೆ.
ಈತ ಮನೆಗೆ ತೆರಳಿ ಓಡಾಟ ನಡೆಸಿದ್ದರೆ, ಸಾಕಷ್ಟು ಜನರಿಗೆ ರೋಗ ಹರಡುವ ಸಾಧ್ಯತೆಗಳಿದ್ದವು. ಆದರೆ, ಚೆಕ್ ಪೋಸ್ಟ್ನಲ್ಲೇ ಸಿಬ್ಬಂದಿ ತಡೆದಿದ್ದರಿಂದ ಈತ ಯಾರ ಸಂಪರ್ಕಕ್ಕೂ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಸ್ಪಷ್ಟಪಡಿಸಿದ್ದಾರೆ.
ಸೋಂಕಿತ ಉಳಿದಿದ್ದ ಬ್ಲಾಕ್ನಲ್ಲಿದ್ದ ಇತರರನ್ನು ಪುನಃ ತಪಾಸಣೆಗೊಳಪಡಿಸಲಾಗವುದು. ಬ್ಲಾಕ್ ತೆರವುಗೊಳಿಸಿ ಶುದ್ಧೀಕರಿಸಲಾಗುವುದು ಮತ್ತು ಕಂಟೈನ್ಮೆಂಟ್ ಜೋನ್ ಎಂದು ಘೊಷಿಸಿ ತಹಸೀಲ್ದಾರ್ ಸುಪರ್ದಿಗೆ ನೀಡಲಾಗುವುದು. ಸಾಕಷ್ಟು ಸುರಕ್ಷತಾ ಮುಂಜಾಗ್ರತೆ ಇರುವುದರಿಂದ ಕುಮಟಾದ ಜನ ಆತಂಕಿತರಾಗಬೇಕಿಲ್ಲ. ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು ಎಂದರು.
ನಮ್ಮ ಚೆಕ್ಪೋಸ್ಟಗಳಲ್ಲಿ ತೀವ್ರ ನಿಗಾ ಇರಿಸಿದ್ದರಿಂದ ಸೋಂಕಿತ ಪಿ 946 ವ್ಯಕ್ತಿಯನ್ನು ನೇರ ಕ್ವಾರಂಟೈನ್ಗೆ ಕಳುಹಿಸಲು ಸಾಧ್ಯವಾಗಿದೆ. ಕುಮಟಾ ತಾಲೂಕು ಹಾಗೂ ಪೊಲೀಸರ ಕ್ರಮಗಳು ಶ್ಲಾಘನೀಯವಾಗಿದೆ ಎಂದರು.
2 ತಿಂಗಳಿನ ಮಗುವಿಗೆ ಸೋಂಕು: ಭಟ್ಕಳದ ಎರಡು ತಿಂಗಳಿನ ಹೆಣ್ಣು ಮಗು ಪಿ-929 ಈಕೆಗೆ ಪಿ786 ಸಂಪರ್ಕದಿಂದ ಸೋಂಕು ಹರಡಿದೆ. ಸೋಂಕು ತಗಲಿದ ಭಟ್ಕಳ ಮೂಲದ ಮೂರು ಕುಟುಂಬಗಳ 28 ಜನರು ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಸಂಪರ್ಕಕ್ಕೆ ಬಂದ ಹಲವರ ಗಂಟಲ ದ್ರವದ ಮಾದರಿ ಪರೀಕ್ಷೆ ಮಾಡಲಾಗಿದ್ದು, ನೆಗೆಟಿವ್ ಬಂದಿದೆ. ಇನ್ನೂ ಕೆಲದಿನ ಬಿಟ್ಟು ಎಲ್ಲರ ಗಂಟಲ ದ್ರವವನ್ನು ಮತ್ತೊಮ್ಮೆ ಪರೀಕ್ಷೆ ಮಾಡಲಾಗುವುದು. ನಂತರ ಸಮುದಾಯದಲ್ಲಿ ಆಯ್ದ ಕೆಲವರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ.
ವಿದೇಶದಿಂದ ಬಂದ ಐವರು ಕುಮಟಾದಲ್ಲಿ: ಕುಮಟಾದಲ್ಲಿ ವಿದೇಶದಿಂದ ಐದು ಜನರು ಆಗಮಿಸಿದ್ದು, ಅವರನ್ನು ಲಾಜ್ ಒಂದರಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಅವರು ಕ್ವಾರಂಟೈನ್ ಖರ್ಚು ವೆಚ್ಚ ಭರಿಸಬೇಕಾಗುತ್ತದೆ. 14 ದಿನದ ನಂತರ ಕಡ್ಡಾಯವಾಗಿ ಕರೊನಾ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ಬಂದರೆ ಕುಟುಂಬವನ್ನು ಸೇರಿಕೊಳ್ಳಬಹುದಾಗಿದೆ. ಯಾರಾದರೂ ಹೊರ ರಾಜ್ಯದಿಂದ ಬಂದವರು ಲಾಜ್ಗಳಲ್ಲಿ ಇರಬಯಸಿದರೆ ಮಾಲಿಕರು ಅದಕ್ಕೆ ಅವಕಾಶ ಮಾಡಿಕೊಡಬೇಕು. ನಷ್ಟದಲ್ಲಿರುವ ಹೋಟೆಲ್, ಲಾಜ್ ಉದ್ಯಮಕ್ಕೂ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ.
ಅತಿ ಅಗತ್ಯ ಇದ್ದರೆ ಮಾತ್ರ ಬನ್ನ
ಹೊರ ಊರಿನವರು ಅತಿ ಅವಶ್ಯಕತೆ ಇದ್ದರೆ ಮಾತ್ರ ಊರಿಗೆ ಬನ್ನಿ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಮನವಿ ಮಾಡಿದ್ದಾರೆ. ಕುಮಟಾದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಮೇಲೆ ಮುಂದೆ 15 ದಿನಗಳ ಸವಾಲು ದೊಡ್ಡದು. ಹೊರಗಿನಿಂದ ಬರುವವರು ತೀರ ಅಗತ್ಯ ಇಲ್ಲದಿದ್ದರೆ ಸ್ವಲ್ಪ ದಿನ ಕಾಯಿರಿ. ಒಂದೊಮ್ಮೆ ನಿಮಗೆ ಸೋಂಕು ಇದ್ದರೆ ಇಲ್ಲಿನ ಸಮುದಾಯಕ್ಕೆ ಅನ್ಯಾಯ ಮಾಡಿದಂತಾಗುತ್ತದೆ ಎಂದರು.
ಹೊರ ರಾಜ್ಯದಿಂದ ಬರುವವರು ಅನುಮತಿ ಪಡೆದು ನ್ಯಾಯ ಮಾರ್ಗದಲ್ಲಿ ಬರಬೇಕು. ಇಲ್ಲಿ ಬಂದ ಮೇಲೆಯೂ ನಿಯಮಾವಳಿಯಂತೆ ಸ್ವಯಂ ಪ್ರೇರಣೆಯಿಂದ ಸಾಂಸ್ಥಿಕ ಕ್ವಾರಂಟೈನ್ಗೆ ಸೇರಿಕೊಳ್ಳಬೇಕು ಎಂದು ವಿನಂತಿಸಿದರು.
ನಮ್ಮ ಸಾಂಸ್ಥಿಕ ಕ್ವಾರಂಟೈನ್ ಬಗ್ಗೆ ಕೆಲವರಿಗೆ ಅಸಮಾಧಾನವಿದೆ. ಬೇರೆ ರಾಜ್ಯದಿಂದ ಬಂದ ಶಂಕಿತರನ್ನು ಹೋಂ ಕ್ವಾರಂಟೈನ್ನಲ್ಲಿಟ್ಟರೆ ಸತ್ಯ ಹೇಳುವುದಿಲ್ಲ. ಊರೆಲ್ಲಾ ಸುತ್ತಬಹುದು. ಸದ್ಯ ಹೊರ ರಾಜ್ಯದಿಂದ ಬಂದವರನ್ನು ಮಾತ್ರ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತಿದೆ. ರಾಜ್ಯದ ಒಳಗಿನವರನ್ನು ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ.
ಹೊರಗಿನಿಂದ ಬಂದವರೆಲ್ಲರೂ ಸೋಂಕಿತರಲ್ಲ. ಎಂಬುದನನು ಜನರೂ ಅರ್ಥ ಮಾಡಿಕೊಳ್ಳಬೇಕು. ಪೂಲ್ ಕರೊನಾ ಟೆಸ್ಟಿಂಗ್ ಮೂಲಕ 25 ಜನರಿಗೆ ಒಂದೇ ಬಾರಿಗೆ ತಪಾಸಣೆ ನಡೆಸಿ ಪಾಸಿಟಿವ್ ಬಂದರೆ ಒಬ್ಬೊಬ್ಬರದೇ ಪ್ರತ್ಯೇಕ ತಪಾಸಣೆ ಮಾಡಲಾಗುವುದು ಎಂದರು. ಉಪವಿಭಾಗಾಧಿಕಾರಿ ಅಜಿತ್ ಎಂ.ರೈ, ತಾಪಂ ಇಒ ಸಿ.ಟಿ.ನಾಯ್ಕ, ತಹಸೀಲ್ದಾರ್ ಮೇಘರಾಜ ನಾಯ್ಕ ಇದ್ದರು.
ಮುಂದಿನ ದಿನದಲ್ಲಿ ಲಾಕ್ಡೌನ್ ಸಡಿಲಿಕೆ ಬಳಿಕ ಜನ ಇನ್ನೂ ಹೆಚ್ಚು ಜಾಗ್ರತೆ ವಹಿಸಬೇಕಾಗುತ್ತದೆ. ಪರಸ್ಪರ ಮೂರಡಿ ಅಂತರ ಹಾಗೂ ಮಾಸ್ಕ್ ಧಾರಣೆ ಕಡ್ಡಾಯ. ಜನ ಸ್ವಯಂ ಪ್ರಜ್ಞೆಯಿಂದ ಜವಾಬ್ದಾರಿ ನಿಭಾಯಿಸಬೇಕು. ಕರೊನಾ ತಡೆ ಹೋರಾಟದಲ್ಲಿ ಸಾರ್ವಜನಿಕರು ನಮ್ಮ ಪ್ರಯತ್ನಕ್ಕೆ ಮುಂದೆಯೂ ಕೈಜೋಡಿಸುವ ಬಗ್ಗೆ ಸಂಪೂರ್ಣ ವಿಶ್ವಾಸವಿದೆ.
ಡಾ.ಹರೀಶ ಕುಮಾರ ಕೆ.
ಜಿಲ್ಲಾಧಿಕಾರಿ
ಅಂಕಿ ಅಂಶ:
ಒಟ್ಟು ಕರೊನಾ ಶಂಕಿತರು -61
ಒಟ್ಟು ಕರೊನಾ ಪ್ರಕರಣಗಳು-41
ಗುಣಮುಖರಾದವರು-11
ಸಕ್ರಿಯ ಪ್ರಕರಣಗಳು-30
ಕರೊನಾ ಸಕ್ರಿಯ ಮಕ್ಕಳು-7
ಕರೊನಾ ಸಕ್ರಿಯ ವೃದ್ಧರು-5