ಕುದೂರು ಗ್ರಾಪಂ ಅಧ್ಯಕ್ಷರ ಮೇಲೆ ಹಲ್ಲೆ

ಕುದೂರು: ಮಾಗಡಿ ತಾಲೂಕು ಕುದೂರ ಗ್ರಾಮ ಪಂಚಾಯಿತಿ ಅಧ್ಯಕ್ಷರ ಮೇಲೆ ಶನಿವಾರ ಹಲ್ಲೆ ನಡೆದು ಗ್ರಾಮದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಗಿತ್ತು.

ಗ್ರಾಪಂ ಆವರಣದಲ್ಲಿ ಗ್ರಾಪಂ ಅಧ್ಯಕ್ಷ ಕೆ.ಟಿ. ವೆಂಕಟೇಶ್ ನೇತೃತ್ವದಲ್ಲಿ ಶನಿವಾರ ನಡೆದ ಸಭೆಯಲ್ಲಿ 2018-19ನೇ ಸಾಲಿನ ಲೆಕ್ಕ ತಪಾಸಣೆ ಮತ್ತು ದಾಖಲೆಗಳನ್ನು ಸಾರ್ವಜನಿಕರ ಸಮ್ಮುಖದಲ್ಲಿ ಪರಿಶೀಲಿಸಿದ ಜಿಪಂ ಉಪಕಾರ್ಯದರ್ಶಿ ಎನ್.ಆರ್. ಉಮೇಶ್ ಮಾತನಾಡುತ್ತಿದ್ದರು. ಈ ವೇಳೆ ಗ್ರಾಪಂಗೆ ಸೇರಿದ ಮಳಿಗೆಗಳ ಬಾಡಿಗೆ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿರುವ ಬಾಡಿಗೆದಾರರು ಸಭೆಗೆ ಆಗಮಿಸಿದರು. ಈ ಸಂದರ್ಭದಲ್ಲಿ ಬಾಡಿಗೆ ಬಾಕಿ 15 ಲಕ್ಷ ರೂ. ಕಟ್ಟಿ, ಇಲ್ಲವಾದಲ್ಲಿ ಮಳಿಗೆಗಳನ್ನು ಮರು ಹರಾಜು ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಾನೂನು ಸಲಹೆ: ಬಾಡಿಗೆದಾರರಿಗೆ ಸಲಹೆ ನೀಡುತ್ತಿದ್ದ ವೇಳೆಯಲ್ಲಿ ಬಾಡಿಗೆದಾರ ಹೇಮಂತ್ ಕುಮಾರ್ ಎಂಬುವರು ಜಿಪಂ ಉಪಕಾರ್ಯದರ್ಶಿಗೆ ಇಂಗ್ಲಿಷ್‌ನಲ್ಲಿ ಕಾನೂನು ಸಲಹೆ ನೀಡಲು ಮುಂದಾಗಿದ್ದು ಕೋಲಾಹಲಕ್ಕೆ ಕಾರಣವಾಯಿತು.ಗ್ರಾಪಂ ಅಧ್ಯಕ್ಷ ಕೆ.ಟಿ. ವೆಂಕಟೇಶ್ ಮಾತನಾಡಿ, ಸಭೆಯಲ್ಲಿ ಗೌರವದಿಂದ ನಡೆದುಕೊಳ್ಳುವಂತೆ ಹೇಮಂತ್ ಕುಮಾರ್‌ಗೆ ಸೂಚಿಸಿದರು. ಈ ವೇಳೆ ಮತ್ತೊಬ್ಬ ಬಾಡಿಗೆದಾರ ಕೆ.ಎನ್. ಶಿವಾನಂದ ಎಂಬುವರ ಸಭೆಗೆ ಅಡ್ಡಪಡಿಸಿದ್ದಲ್ಲದೆ, ಜಿಪಂ ಉಪ ಕಾರ್ಯದರ್ಶಿ ಉಮೇಶ್ ಹಾಗೂ ಗ್ರಾಪಂ ಸದಸ್ಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅಧಿಕಾರಿಗಳನ್ನು ತಳ್ಳಾಡಿ, ಸಭೆಯಲ್ಲಿದ್ದ ದಾಖಲೆ ಪತ್ರಗಳನ್ನು ಹರಿದುಹಾಕಿ ಗ್ರಾಪಂ ಅಧ್ಯಕ್ಷ ಕೆ.ಟಿ.ವೆಂಕಟೇಶ್ ಕೆನ್ನೆಗೆ ಹೊಡೆದು ಹಲ್ಲೆ ಮಾಡಿದರು. ಈ ಸಂದರ್ಭದಲ್ಲಿ ಎರಡೂ ಗುಂಪಿನವರ ನಡುವೆ ಹೊಯ್‌ಕೈ ವಾತಾವರಣ ಉಂಟಾಯಿತು. ನಂತರ ಗ್ರಾಪಂ ಸಿಬ್ಬಂದಿ, ಸದಸ್ಯರು, ಗ್ರಾಮಸ್ಥರು ಕೆ.ಎನ್. ಶಿವಾನಂದ ವಿರುದ್ಧ ಕುದೂರು ಠಾಣೆಯಲ್ಲಿ ದೂರು ನೀಡಿದರು.

ಪ್ರಕರಣ ದಾಖಲಾದ ನಂತರ ಗ್ರಾಮಸ್ಥರು ಮತ್ತು ಗ್ರಾಪಂ ಸದಸ್ಯರು ಸೇರಿ ಹಲ್ಲೆ ಮಾಡಿದ್ದ ಮಳಿಗೆ ಬಾಡಿಗೆದಾರ ಶಿವಾನಂದ ಅವರ ಅಂಗಡಿಗೆ ಮತ್ತು ಗಲಭೆಗೆ ಪ್ರಚೋದನೆ ನೀಡಿದ ಮತ್ತೊಬ್ಬ ಬಾಡಿಗೆದಾರ ವಿರೂಪಾಕ್ಷ ಎಂಬುವರ ಅಂಗಡಿಗೆ ಬೀಗ ಜಡಿದರು. ಈ ಸಂದರ್ಭದಲ್ಲಿ ನೂರಾರು ಮಂದಿ ಜಮಾಯಿಸಿದ್ದರು .

ಹಲ್ಲೆ ನಡೆಸಿದ ಶಿವಾನಂದ ಪರಾರಿಯಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಮಾಗಡಿ ವೃತ್ತ ನಿರೀಕ್ಷಕ ರವಿಕುಮಾರ್ ಭೇಟಿ ನೀಡಿ ಕೆ.ಟಿ.ವೆಂಕಟೇಶ್‌ರಿಂದ ಮಾಹಿತಿ ಪಡೆದರು. ಗ್ರಾಪಂ ಸದಸ್ಯರು, ಪಿಡಿಒ ಕುಮಾರ್, ಕಾರ್ಯದರ್ಶಿ ವೆಂಕಟೇಶ್ ಮಾಜಿ ಅಧ್ಯಕ್ಷ ಕೆ.ಬಿ.ಬಾಲರಾಜು, ಗ್ರಾಪಂ ಮಾಜಿ ಅಧ್ಯಕ್ಷ ಕೆ.ಎಂ.ರಾಘವೇಂದ್ರ, ಗ್ರಾಮಸ್ಥರಾದ ಚಂದ್ರಶೇಖರ್, ಪದ್ಮನಾಭ, ಗೋವಿಂದರಾಜು ಮತ್ತಿತರಿದ್ದರು .

Leave a Reply

Your email address will not be published. Required fields are marked *