ಕುದುರೆಗಳೊಂದಿಗೆ ಎನ್​ಎಸ್​ಯುುಐ ಪ್ರತಿಭಟನೆ

ಶಿವಮೊಗ್ಗ: ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ ಹಾಗೂ ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಎನ್​ಎಸ್​ಯುುಐ ಕಾರ್ಯಕರ್ತರು ಬುಧವಾರ ಕುದುರೆಗಳೊಂದಿಗೆ ಶಿವಪ್ಪನಾಯಕ ವೃತ್ತದಲ್ಲಿ ಪ್ರತಿಭಟಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ಜನತೆ ಬಿಜೆಪಿಯನ್ನು ತಿರಸ್ಕರಿಸಿದ್ದರೂ ಪದೇ ಪದೆ ಸರ್ಕಾರ ರಚಿಸಲು ಯತ್ನಿಸುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಪೂರ್ಣ ಬಹುಮತವಿದೆ. ಆದರೆ ಬಿಜೆಪಿ ಮುಖಂಡರು ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಖರೀದಿಸಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿರುವ ಸಮಸ್ಯೆಗಳನ್ನು ವಿರೋಧ ಪಕ್ಷವಾಗಿ ರಾಜ್ಯ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುವುದನ್ನು ಬಿಟ್ಟು ಅಧಿಕಾರದ ಕನಸು ಕಾಣುತ್ತಿದ್ದಾರೆ. ಕೇಂದ್ರ ಸರ್ಕಾರದ ನೆರವು ಹಾಗೂ ಯೋಜನೆಗಳನ್ನು ತರುವ ಪ್ರಯತ್ನ ಮಾಡಬೇಕು. ಆದರೆ ಕಾಂಗ್ರೆಸ್ ಶಾಸಕರನ್ನು ಕೂಡಿಟ್ಟುಕೊಂಡು ರಾಜಿನಾಮೆ ಕೊಡಿಸುವ ಯತ್ನ ನಡೆಸಿದ್ದಾರೆ ಎಂದು ಖಂಡಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಪ್ರಯತ್ನಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ಶಾಸಕರ ಸದಸ್ಯತ್ವ ರದ್ದುಗೊಳಿಸಲು ರಾಷ್ಟ್ರಪತಿಗಳು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಎನ್​ಎಸ್​ಯುುಐ ರಾಜ್ಯ ಉಪಾಧ್ಯಕ್ಷ ಕೆ.ಚೇತನ್, ಜಿಲ್ಲಾಧ್ಯಕ್ಷ ಎಚ್.ಎಸ್.ಬಾಲಾಜಿ, ನಗರಾಧ್ಯಕ್ಷ ವಿಜಯ್, ಗ್ರಾಮಾಂತರ ಅಧ್ಯಕ್ಷ ರವಿಕುಮಾರ್, ಮಧುಸೂದನ್, ವಿಕಾಸ್, ಶಿವು, ಗಿರೀಶ್, ಅರ್ಜುನ್, ರಘು, ವಿನಯ್ ಇದ್ದರು.