ಕುತೂಹಲ ಮೂಡಿಸಿದ ಸುಧಾಕರ್ ನಡೆ

ಚಿಕ್ಕಬಳ್ಳಾಪುರ:  ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಅತೃಪ್ತ ಶಾಸಕರಲ್ಲೊಬ್ಬರಾದ ಡಾ.ಕೆ.ಸುಧಾಕರ್ ರಾಜಕೀಯ ನಡೆಯು ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಕೈ ಪಾಳಯದಲ್ಲಿ ಗೊಂದಲ ಮೂಡಿಸಿದೆ.

ನಿರಂತರವಾಗಿ ಸಮ್ಮಿಶ್ರ ಸರ್ಕಾರಕ್ಕೆ ಕೈ ಕೊಡುವ ಮಾತನ್ನು ಹೇಳಿ ರಾಜ್ಯ ರಾಜಕೀಯದಲ್ಲಿ ಆಗಾಗ ತಲ್ಲಣ ಮೂಡಿಸುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದ ಅತೃಪ್ತ ಶಾಸಕರ ತಂಡದಲ್ಲಿ ಸುಧಾಕರ್ ಸಹ ಇದ್ದಾರೆ. ಹಿಂದೆ ಹಲವು ಬಾರಿ ಆಪರೇಷನ್ ಕಮಲ ಚಟುವಟಿಕೆ ಗರಿಗೆದರಿ ವಿಫಲವಾಗುತ್ತಿದ್ದಂತೆ ಶಾಸಕರು ಕಾಂಗ್ರೆಸ್​ನಲ್ಲೇ ಉಳಿಯುವ ಮಾತು ಹೇಳುತ್ತಿದ್ದರು. ಹಾಗೆಯೇ ಸರ್ಕಾರ ಮತ್ತು ಪಕ್ಷದ ಹೈಕಮಾಂಡ್ ನಿರ್ಧಾರದ ಕುರಿತು ಬಹಿರಂಗವಾಗಿ ಟೀಕಿಸುತ್ತಿದ್ದರು. ಕೊನೆಗೆ ವಿವಾದ ಸೃಷ್ಟಿಯಾಗುತ್ತಿದ್ದಂತೆ ಅಡ್ಡಗೋಡೆ ಮೇಲೆ ದೀಪವನ್ನಿಡುವ ರೀತಿಯಲ್ಲಿ ಪಕ್ಷದ ಪರ ಹೇಳಿಕೆಗಳನ್ನು ನೀಡಿ ನುಣುಚಿಕೊಳ್ಳುತ್ತಿದ್ದರು.

ಇದೀಗ ಭಾನುವಾರ ರಮೇಶ್ ಜಾರಕಿಹೊಳಿ ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿವಾಸಕ್ಕೆ ಹೋಗಿರುವುದು ಮತ್ತು ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಗೃಹ ಸಚಿವ ಆರ್.ಅಶೋಕ್ ಅವರೊಂದಿಗೆ ರ್ಚಚಿಸಿರುವುದು ಹೊಸ ರಾಜಕೀಯ ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತದೆಯೇ? ಎಂಬ ಕುತೂಹಲ ಮೂಡಿಸಿದೆ.

ಇದೆಲ್ಲದರ ನಡುವೆ ರಮೇಶ್ ಜಾರಕಿಹೊಳಿ ತಮ್ಮೊಂದಿಗೆ ಕಾಂಗ್ರೆಸ್ ಬಿಡುವ 10ಕ್ಕೂ ಹೆಚ್ಚು ಮಂದಿಯನ್ನೊಳಗೊಂಡ ಶಾಸಕರ ತಂಡ ಇದೆ ಎಂದಿದ್ದಾರೆ. ಇದರಿಂದ ಶಾಸಕರು ಬಿಜೆಪಿಗೆ ಹೋಗುತ್ತಾರಾ? ಇಲ್ಲವೇ ಕಾಂಗ್ರೆಸ್​ನಲ್ಲೇ ಉಳಿಯುತ್ತಾರಾ? ಎಂಬ ಪ್ರಶ್ನೆಯು ಜನರ ಜತೆಗೆ ಸ್ವತಃ ಶಾಸಕರ ಬೆಂಬಲಿಗರನ್ನೂ ಕಾಡುತ್ತಿದೆ.

ಪಕ್ಷಾಂತರಕ್ಕೆ ಸಿದ್ಧ?:  ಸುಧಾಕರ್ ಸಚಿವ ಸ್ಥಾನದ ಆಕಾಂಕ್ಷಿ. ಇದಕ್ಕೆ ಡೆಲ್ಲಿ ವರಿಷ್ಠರ ಹಂತದವರೆಗೂ ಹಲವು ಬಾರಿ ಲಾಬಿ ನಡೆಸಿದ್ದಾರೆ. ಇದರ ನಡುವೆ ಪಕ್ಷದ ರಾಜ್ಯ ಮುಖಂಡರೇ ಆಕ್ಷೇಪ ವ್ಯಕ್ತಪಡಿಸಿ ಸಿಕ್ಕಿದ್ದ ಅವಕಾಶ ತಪ್ಪಿಸಿದರು ಎನ್ನುವುದು ಮುನಿಸಿಗೆ ಕಾರಣವಾಗಿದೆ.

ಹಿಂದೆ ಸ್ವಪಕ್ಷೀಯರು ತಂದೆ ಪಿ.ಎನ್.ಕೇಶವರೆಡ್ಡಿ ಅವರನ್ನು ಜಿಪಂ ಅಧ್ಯಕ್ಷ ಗಾದಿಯಿಂದ ಇಳಿಸಿದಾಗ ಕಿಡಿಕಾರಿ ಕಾಂಗ್ರೆಸ್ ತೊರೆಯಲು ಮುಂದಾಗಿದ್ದರು. ಕೊನೆಗೆ ನಿರ್ಧಾರ ಬದಲಾಯಿಸಿದ್ದರು. ಇನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಹೆಸರು ಘೊಷಿಸಿ ತಾಂತ್ರಿಕ ಕಾರಣದಿಂದ ಹಿಂದೆ ಸರಿದ ವರಿಷ್ಠರ ಧೋರಣೆಗೆ ಆಕ್ರೋಶಗೊಂಡಿದ್ದು, ಈಗಾಗಲೇ ಮಾನಸಿಕವಾಗಿ ಪಕ್ಷಾಂತರಕ್ಕೆ ಸಿದ್ಧವಾಗಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಕ್ಷೇತ್ರದಲ್ಲಿನ ಬೆಂಬಲಿಗರು ಶಾಸಕರ ಯಾವುದೇ ನಿರ್ಧಾರಕ್ಕೂ ಸೈ ಎನ್ನುತ್ತಿದ್ದಾರೆ.

ಕಾರ್ಯಕರ್ತರಲ್ಲಿ ಗೊಂದಲ: ಕ್ಷೇತ್ರದಲ್ಲಿ ಶಾಸಕರ ಪಕ್ಷಾಂತರದ ಬಗ್ಗೆಯೇ ಚರ್ಚೆಯಾಗುತ್ತಿದೆ. ಸ್ವಪಕ್ಷೀಯ ಮುಖಂಡರಲ್ಲೇ ಕೆಲವರು ಶಾಸಕರ ನಿರ್ಗಮನಕ್ಕೆ ಎದುರು ನೋಡುತ್ತಿದ್ದಾರೆ. 2013ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ವಿರೋಧದ ನಡುವೆಯೂ ವರಿಷ್ಠರ ಮೇಲೆ ಒತ್ತಡ ಹೇರಿ ಟಿಕೆಟ್ ಗಿಟ್ಟಿಸಿಕೊಂಡು ಬಂದು ಶಾಸಕರಾಗಿ ಆಯ್ಕೆಯಾಗಿದ್ದು ಅಲ್ಲಿಂದ ಕ್ಷೇತ್ರವನ್ನು ಬಹುತೇಕ ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಕೆಲವರನ್ನು ಪಕ್ಷದಲ್ಲಿ ಆಟಕ್ಕುಂಟು ಲೆಕ್ಕ ಇಲ್ಲ ಎನ್ನುವಂತೆ ಮಾಡಿದ್ದಾರೆ. ಇದರಿಂದ ರೋಸಿರುವ ಸ್ವಪಕ್ಷಿಯ ವಿರೋಧಿಗಳು ಶಾಸಕರ ಪಕ್ಷಾಂತರದ ಬಳಿಕ ಮತ್ತೆ ಪಕ್ಷದಲ್ಲಿ ಮೇಲುಗೈ ಸಾಧಿಸಲು ಬಯಸಿದ್ದಾರೆ. ಆದರೆ, ಶಾಸಕರ ಅಸ್ಪಷ್ಟ ಧೋರಣೆಯಿಂದ ಗೊಂದಲಕ್ಕೀಡಾಗುತ್ತಿದ್ದಾರೆ.

ಆಪರೇಷನ್ ಕಮಲದ ಚರ್ಚೆಯ ನಡುವೆ ಶಾಸಕ ಡಾ.ಕೆ.ಸುಧಾಕರ್, ಮಾಜಿ ಸಚಿವ ರಮೇಶ್ ಜಾರಕಿಹೊಳಿಯೊಂದಿಗೆ ಎಸ್.ಕೃಷ್ಣ ನಿವಾಸಕ್ಕೆ ಭೇಟಿ ನೀಡಿದ್ದು ಬಿಜೆಪಿ ನಾಯಕರೊಂದಿಗೆ ರ್ಚಚಿಸಿರುವುದು ಸಮಂಜಸವಲ್ಲ.

| ಎಸ್.ಪಿ.ಶ್ರೀನಿವಾಸ್, ಕೆಪಿಸಿಸಿ ಸದಸ್ಯ, ಚಿಕ್ಕಬಳ್ಳಾಪುರ

ನನ್ನ ಸ್ಪಷ್ಟ ತೀರ್ಮಾನ ಏನೆಂಬುದನ್ನು ತಿಳಿಯಲು ಕಾಯಿರಿ, ನಿಧಾನವಾಗಿ ನಿಮಗೆ ಎಲ್ಲವೂ ಗೊತ್ತಾಗುತ್ತದೆ.

| ಡಾ.ಕೆ.ಸುಧಾಕರ್, ಶಾಸಕ, ಚಿಕ್ಕಬಳ್ಳಾಪುರ

Leave a Reply

Your email address will not be published. Required fields are marked *