ಯಲ್ಲಾಪುರ :ಕಳೆದ ಒಂದು ತಿಂಗಳಿನಿಂದ ತಾಲೂಕಿನಲ್ಲಿ ಬಾರ್ಗಳು ಮುಚ್ಚಿ, ಸಾರಾಯಿ ಮಾರಾಟ ನಿಂತಿರುವುದರಿಂದ ಮದ್ಯವ್ಯಸನಿಗಳು ತೀರಾ ಪರದಾಡುವಂತಾಗಿದೆ. ಹೇಗಾದರೂ ಮಾಡಿ ಕುಡಿಯಲೇಬೇಕೆಂಬ ಹಠಕ್ಕೆ ಬಿದ್ದು ಗ್ರಾಮೀಣ ಭಾಗದ ಕೆಲವೆಡೆ ಸಿದ್ಧವಾಗುವ ಕಳ್ಳಬಟ್ಟಿ ಸಾರಾಯಿಯ ಮೊರೆ ಹೋಗುತ್ತಿದ್ದಾರೆ.
ತಾಲೂಕಿನ ಕಣ್ಣಿಗೇರಿ, ಕಿರವತ್ತಿ, ಮದನೂರು ಗ್ರಾ.ಪಂ ವ್ಯಾಪ್ತಿಯ ವಿವಿಧೆಡೆ ಕಬ್ಬು ಬೆಳೆಯುತ್ತಿದ್ದು, ಕಳೆದ 2-3 ತಿಂಗಳುಗಳಿಂದ ಆಲೆಮನೆಯಲ್ಲಿ ಕಬ್ಬಿನ ಹಾಲಿನಿಂದ ಬೆಲ್ಲ ತಯಾರಿಸುವ ಕಾರ್ಯ ನಡೆದಿದೆ. ಬೆಲ್ಲ ಸಿದ್ಧಪಡಿಸುವಾಗ ಸಿಗುವ ಕಾಕಂಬಿ, ಕೊಳೆಯಿಂದ ಸಾರಾಯಿ ಸಿದ್ಧಪಡಿಸಲಾಗುತ್ತದೆ. ಹಾಗಾಗಿ ಕಾಕಂಬಿ ಹಾಗೂ ಕೊಳೆಗೆ ಭಾರಿ ಬೇಡಿಕೆ ಇದ್ದು, ಅದರಿಂದ ಸಾರಾಯಿ ಸಿದ್ಧಪಡಿಸಿ ಮಾರಾಟ ಜೋರಾಗಿ ನಡೆಯುತ್ತಿದೆ. ಬೇಸಿಗೆಯ ಸಮಯವಾಗಿರುವುದರಿಂದ ಗೇರುಹಣ್ಣು ಬೆಳೆಯುತ್ತಿದ್ದು, ಅದರಿಂದಲೂ ಸಾರಾಯಿ ಸಿದ್ಧಪಡಿಸಲಾಗುತ್ತಿದೆ.
ಈ ಭಾಗದಲ್ಲಿ ತಯಾರಾಗುವ ಕಳ್ಳಬಟ್ಟಿ ಕುಡಿಯಲು ಗ್ರಾಮೀಣ ಭಾಗದವರಷ್ಟಲ್ಲದೇ ಪಟ್ಟಣದಿಂದಲೂ ಜನತೆ ಹೋಗುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಲಾಕ್ಡೌನ್ ಹಿನ್ನೆಲೆಯಲ್ಲಿ ಹೊರಗಿನವರು ಊರಿಗೆ ಬಾರದಂತೆ ತಡೆಯುವ ಚೆಕ್ ಪೋಸ್ಟ್ಗಳಲ್ಲಿ ಅವರನ್ನು ತಡೆದರೆ ಸಿಬ್ಬಂದಿ ಜತೆಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಶುಕ್ರವಾರ ಕಣ್ಣಿಗೇರಿ ಗ್ರಾಪಂ ವ್ಯಾಪ್ತಿಯ ತಿಮ್ಮಾಪುರ ಚೆಕ್ಪೋಸ್ಟ್ ಬಳಿ ಕಾಳಮ್ಮನಗರದ ಯುವಕರು ಸಿಕ್ಕಿ ಬಿದ್ದಿದ್ದು, ತಮ್ಮ ಕುರಿತಾಗಿ ಸರಿಯಾದ ಮಾಹಿತಿಯನ್ನೂ ನೀಡಿಲ್ಲ. ಕೊನೆಗೆ ವಿಚಾರಿಸಿದಾಗ ಗ್ರಾಮೀಣ ಭಾಗದ ಕಳ್ಳಬಟ್ಟಿ ಸಾರಾಯಿ ಕುಡಿಯಲು ಹೋಗುತ್ತಿದ್ದವರೆಂದು ತಿಳಿದು ಬಂದಿದೆ.
ಕಿರವತ್ತಿ, ಮದನೂರು ಗ್ರಾ.ಪಂ ವ್ಯಾಪ್ತಿಯ ಗ್ರಾಮೀಣ ಭಾಗಗಳಲ್ಲೂ ಕಳ್ಳಬಟ್ಟಿ ಸಾರಾಯಿ ಮಾರಾಟ ಎಗ್ಗಿಲ್ಲದೇ ಸಾಗಿದ್ದು, ಬಾರ್ ಬಂದ್ ಆಗಿರುವುದರಿಂದ ಕುಡುಕರು ಹೆಚ್ಚಿನ ದರ ನೀಡಿಯಾದರೂ ಕುಡಿಯುತ್ತಿದ್ದಾರೆ. ಕಿರವತ್ತಿ, ಕಣ್ಣಿಗೇರಿ, ಮದನೂರು ಗ್ರಾ.ಪಂ ವ್ಯಾಪ್ತಿಯ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ವರ್ಷವಿಡೀ ಅಕ್ರಮ ಸಾರಾಯಿ ತಯಾರಿಕೆ, ಮಾರಾಟ ನಡೆಯುತ್ತಲೇ ಇರುತ್ತದೆ. ಅದಕ್ಕೆ ಕಡಿವಾಣ ಹಾಕುವ ಕಾರ್ಯ ಆಗುತ್ತಿಲ್ಲ ಎಂಬ ಅಸಮಾಧಾನ ಸಭ್ಯ ಗ್ರಾಮಸ್ಥರದಾಗಿದೆ.
ಲಾಕ್ಡೌನ್ನಂತಹ ತುರ್ತು ಸಂದರ್ಭಗಳಲ್ಲಿ ಅಕ್ರಮ ಸಾರಾಯಿ ತಯಾರಿಕೆ, ಮಾರಾಟಗಳು ನಡೆಯುವುದು ಹೆಚ್ಚು. ಅಂತಹ ಚಟುವಟಿಕೆಗಳು ನಡೆಯುತ್ತಿರುವ ಮಾಹಿತಿ ಬಂದಲ್ಲಿ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗುತ್ತಿದೆ. ಅಕ್ರಮಗಳಿಗೆ ಯಾವುದೇ ರೀತಿಯ ಅವಕಾಶ ಕೊಡದೇ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.
| ವೈ.ಆರ್.ಮೋಹನ ಅಬಕಾರಿ ಡಿಸಿ
ಗ್ರಾಮೀಣ ಭಾಗದಲ್ಲಿ ಈ ಹಿಂದಿನಿಂದಲೂ ಕಳ್ಳಬಟ್ಟಿ ತಯಾರಿಕೆ, ಮಾರಾಟ ಜೋರಾಗಿಯೇ ಇದೆ. ನಿತ್ಯವೂ ಪಟ್ಟಣಕ್ಕೆ ಹೋಗಲಾಗದ ಜನ ಅಲ್ಲಿಯೇ ಮದ್ಯ ಖರೀದಿಸಿ, ಕುಡಿಯುತ್ತಾರೆ. ಲಾಕ್ಡೌನ್ ಇರುವುದರಿಂದ ಈಗ ಮದ್ಯಪ್ರಿಯರಿಗೆ ಲೋಕಲ್ ಸಾರಾಯಿಯೇ ಗತಿಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಿಳಿದೂ ಸುಮ್ಮನಿದ್ದಾರೋ ಅಥವಾ ಅವರಿಗೆ ವಿಷಯ ತಿಳಿದಿಲ್ಲವೋ ಗೊತ್ತಿಲ್ಲ.
| ಹೆಸರು ಹೇಳಲಿಚ್ಛಿಸದ ಹುಲಗೋಡ ಗ್ರಾಮದ ಮಹಿಳೆ