ಕುಡಿವ ನೀರು, ರಸ್ತೆ, ಸ್ವಚ್ಛತೆಗೆ ಆದ್ಯತೆ

ಹಿರಿಯೂರು: ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕ ಕುಡಿವ ನೀರು ಪೂರೈಕೆಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.

ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕುಡಿವ ನೀರಿನ ಸಮಸ್ಯೆ ಇರುವ ಹಳ್ಳಿಗಳಲ್ಲಿ ತುರ್ತು ಬೋರ್‌ವೆಲ್ ಕೊರೆಸಿ ನೀರಿನ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕುಡಿವ ನೀರಿಗೆ ಹಾಹಾಕಾರ ಇರುವೆಡೆ ಟ್ಯಾಂಕರ್ ಮೂಲಕ ಸರಬರಾಜು ಮಾಡಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಮಿತವಾಗಿ ಬಳಸಿ: ಮಳೆ ಕೊರತೆಯಿಂದ ವಿವಿ ಸಾಗರ ಮತ್ತು ಗಾಯತ್ರಿ ಜಲಾಶಯ ಬರಿದಾಗಿವೆ. ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳು ವಿಫಲವಾಗುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಹನಿ ನೀರಿಗೂ ಪರದಾಡುವಂತ ಪರಿಸ್ಥಿತಿ ಬರಲಿದೆ. ಕುಡಿವ ನೀರನ್ನು ಮಿತವಾಗಿ ಬಳಸಬೇಕು ಎಂದು ಮನವಿ ಮಾಡಿದರು.

ಭದ್ರಾ ನೀರು ಹರಿಸಿ: ವಿವಿ ಸಾಗರ ಜಲಾಶಯದ ನೀರು ಡೆಡ್ ಸ್ಟೋರೇಜ್ ತಲುಪಿದ್ದು, ತಾಲೂಕಿನ ಬಹುತೇಕ ಗ್ರಾಮಸ್ಥರು ಕುಡಿವ ನೀರಿಗಾಗಿ ಕೊಳವೆಬಾವಿ ಅವಲಂಬಿಸಿದ್ದಾರೆ. ಅಧಿಕಾರಿಗಳು ಕೂಡ ಜನರ ಅಪೇಕ್ಷೆಯಂತೆ ನೂರಾರು ಕೊಳವೆ ಬಾವಿ ಕೊರೆಸಿದ್ದಾರೆ. ಆದರೆ ಒಂದು ವಾರ, ಹದಿನೈದು ದಿನದಲ್ಲಿ ಅವು ವಿಫಲವಾಗುತ್ತಿರುವುದು ಅಧಿಕಾರಿಗಳಿಗೆ ದೊಡ್ಡ ಸಮಸ್ಯೆಯಾಗಿದೆ. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಂಡು ವಿವಿ ಸಾಗರ ಜಲಾಶಯಕ್ಕೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ವಿವಿ ಸಾಗರ ಜಲಾಶಯಕ್ಕೆ ಮಂಜೂರು ಮಾಡಿದ್ದ 5 ಟಿಂಎಂಸಿ ನೀರನ್ನು 2 ಟಿಎಂಸಿಗೆ ಕಡಿತಗೊಳಿಸಿ ಹಿರಿಯೂರು ತಾಲೂಕಿಗೆ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.

ನಗರಸಭೆ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಇಮ್ರಾನ್ ಬಾನು, ಸದಸ್ಯರಾದ ಜಿ. ಪ್ರೇಮ್‌ಕುಮಾರ್, ಚಿರಂಜೀವಿ, ವನಿತಾ, ಟಿ. ಚಂದ್ರಶೇಖರ್, ನಟರಾಜ್, ಮುಖಂಡರಾದ ಕೇಶವಮೂರ್ತಿ, ಕಬಡ್ಡಿ ಶ್ರಿನಿವಾಸ್, ಗಂಗಾಧರ್, ನಿರಂಜನ್ ಮೂರ್ತಿ, ಜಿಪಂ ಸದಸ್ಯೆ ರಾಜೇಶ್ವರಿ ಇತರರಿದ್ದರು.