ಕುಡಿಯುವ ನೀರಿನ ಸಮಸ್ಯೆ ಉಂಟಾದರೆ ಕ್ರಮ

ಹಿರೇಕೆರೂರ: ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾಗುವ ಮುನ್ನವೇ ಅಧಿಕಾರಿಗಳು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಬಿ.ಸಿ. ಪಾಟೀಲ ಎಚ್ಚರಿಸಿದರು.

ಪಟ್ಟಣದ ತಾಪಂನಲ್ಲಿ ಶನಿವಾರ ಜರುಗಿದ ತಾಪಂ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜಿಪಂ ಇಲಾಖೆಯ ಪ್ರಗತಿ ವರದಿ ಮಂಡಿಸುವ ಸಂದರ್ಭದಲ್ಲಿ ಅವರು ಮಾತನಾಡಿದರು.

ಅಲ್ಲಲ್ಲಿ ಕುಡಿಯುವ ನೀರಿನ ಬವಣೆ ಹೆಚ್ಚಾಗುತ್ತಿದೆ. ಜನತೆಗೆ ತೊಂದರೆಯಾಗದಂತೆ ಪರಿಹಾರ ಒದಗಿಸಬೇಕು. ನೀರು ಸಿಗದಿದ್ದರೆ 800 ಅಡಿವರೆಗೆ ಕೊಳವೆಬಾವಿ ಕೊರೆಸಬೇಕು. ವಿಫಲವಾದರೆ ಖಾಸಗಿ ಬೋರ್ ಅಥವಾ ಟ್ಯಾಂಕರ್​ಗಳ ಮೂಲಕ ನೀರು ಪೂರೈಸುವಂತೆ ಸೂಚಿಸಿದರು.

ಹೆಸ್ಕಾಂ ಅಧಿಕಾರಿಗಳು ವರದಿ ಮಂಡಿಸುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಜಿಪಂ ಸದಸ್ಯ ಶಿವರಾಜ ಹರಿಜನ, ತಾಲೂಕಿನಲ್ಲಿ ವಿದ್ಯುತ್ ಕಂಬಗಳು ಬೀಳುವ ಸ್ಥಿತಿಯಲ್ಲಿದ್ದು, ಕೂಡಲೇ ಸರಿಪಡಿಸಬೇಕು. ಗಂಗಾ ಕಲ್ಯಾಣ ಯೋಜನೆಯಡಿ ಕೊರೆಸಿದ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಧ್ವನಿಗೂಡಿಸಿದ ಶಾಸಕ ಬಿ.ಸಿ. ಪಾಟೀಲ, ವಾರದೊಳಗೆ ಸಂಪರ್ಕ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ತಾಲೂಕಿನ ಅಂಗನವಾಡಿಯಲ್ಲಿ ಮಾತೃಪೂರ್ಣ ಯೊಜನೆಯಡಿ ಗರ್ಭಿಣಿ, ಬಾಣಂತಿಯರಿಗೆ ಸಮರ್ಪಕ ಆಹಾರ ದೊರಕುತ್ತಿಲ್ಲ ಎಂದು ಜಿಪಂ ಸದಸ್ಯೆ ಸುಮಿತ್ರಾ ಪಾಟೀಲ ಆರೋಪಿಸಿದರು.

ಸಿಡಿಪಿಒ ಶ್ರೀನಿವಾಸ ಆಲದಾರ್ತಿ ಮಾತನಾಡಿ, ಅಂಗನವಾಡಿಗೆ ಬಾರದ ಸ್ಥಿತಿಯಲ್ಲಿರುವ ತಾಯಂದಿರಿಗೆ ಕ್ಯಾರಿಯರ್ ಮೂಲಕ ಅವರ ಮನೆಗೆ ಊಟ ಕಳುಹಿಸಲಾಗುತ್ತಿದೆ. ಆದರೂ, ಶೇ. 40ರಷ್ಟು ತಾಯಂದಿರು ಊಟ ಮಾಡಲು ಅಥವಾ ತೆಗೆದುಕೊಂಡು ಹೋಗಲು ಬರುತ್ತಿಲ್ಲ ಎಂದರು.

ತಾಪಂ ಉಪಾಧ್ಯಕ್ಷೆ, ಕ್ಯಾರಿಯರ್​ನಲ್ಲಿ ಊಟ ತುಂಬಲು, ಫಲಾನುಭವಿಗಳ ಮನೆಗೆ ತಲುಪಿಸಲು ಅಂಗನವಾಡಿ ಸಹಾಯಕಿಯರು, ಕಾರ್ಯಕರ್ತೆಯರಿಗೆ ಹೆಚ್ಚಿನ ಹೊರೆಯಾಗುತ್ತಿದೆ. ಸರ್ಕಾರ ಹೆಚ್ಚುವರಿ ಸಿಬ್ಬಂದಿ ನೇಮಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಸಮ್ಮತಿಸಿದ ಶಾಸಕರು, ಸದನದಲ್ಲಿ ಈ ಕುರಿತು ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.

ತಾಪಂ ಅಧ್ಯಕ್ಷ ಹೇಮಪ್ಪ ಮುದಿರೆಡ್ಡೇರ, ಉಪಾಧ್ಯಕ್ಷೆ ಕವಿತಾ ಬಿದರಿ, ಜಿಪಂ ಸದಸ್ಯರಾದ ಸುಮಿತ್ರಾ ಪಾಟೀಲ, ಶಿವರಾಜ ಹರಿಜನ, ಮಹದೇವಕ್ಕ ಗೋಪಕ್ಕಳಿ, ನಾಮನಿರ್ದೇಶನ ಸದಸ್ಯರಾದ ಪುಟ್ಟನಗೌಡ ಗೌಡರ, ಜಗದೀಶ ದಂಡಗೀಹಳ್ಳಿ, ಸುಮಂಗಲಾ ಮುದಿಗೌಡ್ರ, ಮಂಜುನಾಥ ತಳವಾರ, ಸಣ್ಣಗೌಡ ಪಾಟೀಲ, ತಾಪಂ ಇಒ ಸಂತೋಷಕುಮಾರ ತಳಕಲ್, ತಹಸೀಲ್ದಾರ್ ರಿಯಾಜುದ್ದಿನ್ ಭಾಗವಾನ್, ರಟ್ಟಿಹಳ್ಳಿ ತಹಸೀಲ್ದಾರ್ ಆರ್.ಜಿ. ಚಂದ್ರಶೇಖರ, ವಿವಿಧ ಇಲಾಖೆ ಮೇಲಧಿಕಾರಿಗಳು ಇದ್ದರು.

ಗೈರಾದವರ ಮೇಲೆ ಕ್ರಮ

ಸಭೆಗೆ 37 ಇಲಾಖೆಗಳ ಪೈಕಿ ಗೈರಾದ 10 ಇಲಾಖೆಗಳ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ವಿಶೇಷ ಪತ್ರ ಬರೆಯಲಾಗುವುದು. ಕಠಿಣ ಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ತಾಪಂ ಇಒ ಸೂಚಿಸಬೇಕು ಎಂದು ಠರಾವು ಬರೆಸಲಾಯಿತು.