ಕುಡಿಯುವ ನೀರಿಗೆ ಹಾಹಾಕಾರ

ನರಗುಂದ: ಪಟ್ಟಣದ ಕೆಂಪಕೆರೆ ಸಂಪೂರ್ಣ ಬತ್ತಿದ್ದರಿಂದ ಪಟ್ಟಣದ ಎನ್​ಎಚ್​ಟಿ ಮಿಲ್ ಕ್ವಾರ್ಟರ್ಸ್ ಹಾಗೂ ವಿವಿಧ ಬಡಾವಣೆಯ ನಿವಾಸಿಗಳು ಕುಡಿಯುವ ನೀರಿಗಾಗಿ ನಿತ್ಯ ಪರದಾಡುತ್ತಿದ್ದಾರೆ.

ನಗರ ನೀರು ಸರಬರಾಜು ಯೋಜನೆಯಡಿ ಪಟ್ಟಣಕ್ಕೆ 2019ರ ಮಾರ್ಚ್ 4ರಿಂದ ದಿನದ 24 ಗಂಟೆಗಳ ಕಾಲ ನೀರು ಪೂರೈಕೆ ಮಾಡಲಾಗುತ್ತಿದೆ ಎಂಬ ಕಾರಣದಿಂದ ಪುರಸಭೆ ಆಡಳಿತ ಮಂಡಳಿ ನರಗುಂದ ಪಟ್ಟಣಕ್ಕೆ ನೀರು ಪೊರೈಸುವುದನ್ನು ಸ್ಥಗಿತಗೊಳಿಸಿದೆ. ಆದರೆ, ವಾಸ್ತವಿಕವಾಗಿ ಪಟ್ಟಣದ 23 ವಾರ್ಡ್​ಗಳ ಪೈಕಿ ಕೇವಲ 16 ವಾರ್ಡ್​ಗಳಲ್ಲಿ ಮಾತ್ರ ನೀರು ಸರಬರಾಜು ಆಗುತ್ತಿದೆ. ಶೇ. 80ರಷ್ಟು ಕುಟುಂಬಗಳ ಮನೆಗಳಿಗೆ ನೀರಿನ ಪೈಪ್​ಲೈನ್ ಅಳವಡಿಸಲಾಗಿದ್ದು, ಇನ್ನುಳಿದ ಶೇ. 20 ರಷ್ಟು ಕುಟುಂಬಗಳಿಗೆ ಇನ್ನೂ ಪೈಪ್​ಲೈನ್ ಜೋಡಣೆಯೇ ಆಗಿಲ್ಲ. ಕೆಲವೊಂದು ಬಡಾವಣೆಗಳಲ್ಲಿ 247 ಯೋಜನೆಯ ಪೈಪ್​ಲೈನ್ ಜೋಡಿಸಿ ನಳಗಳ ಸಂಪರ್ಕ ನೀಡಿದ್ದಾರೆ. ಆದರೆ, ನಲ್ಲಿಗಳಲ್ಲಿ ಒಂದು ಹನಿ ನೀರು ಬಂದಿಲ್ಲ. ಹೀಗಾಗಿ, ಪಟ್ಟಣದ ಜನತೆ ಕುಡಿಯುವ ನೀರಿಗಾಗಿ ನಿತ್ಯ ಪರದಾಡುವಂತಾಗಿದೆ. 247 ಕುಟುಂಬಗಳಿರುವ ಎನ್​ಎಚ್​ಟಿ ಕ್ವಾರ್ಟರ್ಸ್ ಬಡಾವಣೆಯಲ್ಲಿ 1200ಕ್ಕೂ ಅಧಿಕ ಜನರಿದ್ದಾರೆ. ಕಳೆದ 30 ವರ್ಷಗಳಲ್ಲಿ ಪುರಸಭೆಯು ಕೇವಲ ಎರಡೇ ಎರಡು ಸಾರ್ವಜನಿಕ ನಲ್ಲಿಗಳನ್ನು ಇಲ್ಲಿ ಹಾಕಿದ್ದು, 10 ದಿನಗಳಿಗೊಮ್ಮೆ ಕುಡಿಯುವ ನೀರು ಪೊರೈಸುತ್ತಿದೆ. ಇದರಿಂದ ಮೂರು ತಿಂಗಳಿನಿಂದ ಜನತೆ ಹಗಲು-ರಾತ್ರಿ ಖಾಲಿ ಕೊಡ ಹಿಡಿದು ನಲ್ಲಿಯ ಮುಂದೆ ನಿಲ್ಲುವಂತಾಗಿದೆ.

ಬತ್ತಿದ ಬೋರ್​ವೆಲ್

ಪಟ್ಟಣದಲ್ಲಿರುವ 30 ಸಾವಿರಕ್ಕೂ ಅಧಿಕ ಜನರ ಕುಡಿಯುವ ನೀರಿನ ದಾಹ ತಣಿಸಲು ಈ ಹಿಂದೆ ಪುರಸಭೆಯಿಂದ 50 ಬೋರ್​ವೆಲ್ ಕೊರೆಸಲಾಗಿತ್ತು. ಅದರಲ್ಲಿ 23 ಬೋರ್​ವೆಲ್​ಗಳು ಚಾಲ್ತಿಯಲ್ಲಿವೆ. ಪಟ್ಟಣದ ವಿವಿಧ ಬಡಾವಣೆಯ 8 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 3 ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ಎಲ್ಲರಿಗೂ ಸಮರ್ಪಕ ನೀರು ದೊರೆಯುತ್ತಿಲ್ಲ.

ಪ್ರತಿಭಟನೆ ಎಚ್ಚರಿಕೆ

ಪುರಸಭೆ ಅಧಿಕಾರಿಗಳು ಸರಿಯಾಗಿ ನೀರು ಪೊರೈಸದಿದ್ದರೆ ಪುರಸಭೆ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಾರ್ವಜನಿಕರಾದ ಫಕೀರಪ್ಪ ಮಾಚಕನೂರ, ಭಾರತಿ ದೊಡಮನಿ, ಸುಶೀಲವ್ವ ಅಂಬಿಗೇರ, ಮಂಜುಳಾ ಘಾಟಗೆ, ಶಾರದಾ ಬಣಗಾರ, ಚೈತ್ರಾ ಕಟ್ಟಿಮನಿ, ಕಮಲವ್ವ ಹರಣಶಿಕಾರಿ ಎಚ್ಚರಿಕೆ ನೀಡಿದ್ದಾರೆ.

ನರಗುಂದದ ಕುಡಿಯುವ ನೀರಿನ ಕೆಂಪಕೆರೆಗೆ ಮಲಪ್ರಭಾ ಕಾಲುವೆಯಿಂದ ನೀರು ಹರಿಸುವಂತೆ ಪುರಸಭೆಯ ಅಧಿಕಾರಿಗಳು ನಮ್ಮ ಇಲಾಖೆಗೆ ಮನವಿ ನೀಡಿಲ್ಲ. ನವಿಲು ತೀರ್ಥ ಡ್ಯಾಂನಿಂದ ಈಗಾಗಲೇ ನಗರ ನೀರು ಸರಬರಾಜು ಇಲಾಖೆಯಿಂದ ನಿತ್ಯ ನೀರು ಸರಬರಾಜು ಮಾಡುತ್ತಿರುವುದರಿಂದ ಆ ಸಮಸ್ಯೆಯೇ ಉದ್ಭವಿಸುವುದಿಲ್ಲ. ಆದರೂ ಪುರಸಭೆಯಿಂದ ಮನವಿ ನೀಡಿದರೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.

| ಸುಧಾಕರ ಶೆಟ್ಟಿ

ನೀರಾವರಿ ನಿಗಮದ ಸಹಾಯಕ ಇಂಜಿನಿಯರ್

ನರಗುಂದ ಪಟ್ಟಣದ ನಗರ ಕುಡಿಯುವ ನೀರಿನ ಯೋಜನೆ ಪೈಪ್​ಲೈನ್ ಜೋಡಣೆ ಕಾಮಗಾರಿ ಶೇ. 80ರಷ್ಟು ಪೂರ್ಣಗೊಂಡಿದೆ. ಪಟ್ಟಣದ ವಿವಿಧ ಬಡಾವಣೆಗಳ 1500 ಮನೆಗಳಿಗೆ ಅಂದಾಜು 6 ಕಿ.ಮೀ. ನೀರಿನ ಪೈಪ್​ಲೈನ್ ಅಳವಡಿಸುವ ಕಾಮಗಾರಿ ಬಾಕಿ ಉಳಿದಿದ್ದು, ಇದಕ್ಕೆ 6 ಕೋಟಿ ರೂ. ವೆಚ್ಚದ ಹೆಚ್ಚುವರಿ ಅನುದಾನ ಬೇಕಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಶಾಸಕರ ಜತೆಗೆ ರ್ಚಚಿಸಲಾಗಿದ್ದು, ಹೆಚ್ಚುವರಿ ಅನುದಾನಕ್ಕೆ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕಿದೆ. ಒಂದು ತಿಂಗಳ ಅವಧಿಯಲ್ಲಿ 247 ಯೋಜನೆಯ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು.

| ಎಂ. ಕರಿಸಿದ್ದಪ್ಪ

ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಜಿಲ್ಲಾ ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿ.

Leave a Reply

Your email address will not be published. Required fields are marked *