ಕುಶಾಲನಗರ: ಕುಶಾಲನಗರ ಪುರಸಭೆ 2025-26ನೇ ಸಾಲಿನ ಆಯ ವ್ಯಯ ಪೂರ್ವಭಾವಿ ಸಭೆ ಅಧ್ಯಕ್ಷೆ ಜಯಲಕ್ಷ್ಮೀ ಚಂದ್ರು ಅಧ್ಯಕ್ಷತೆಯಲ್ಲಿ ಪುರಸಭೆ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಸಾರ್ವಜನಿಕರಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದು, ಪಟ್ಟಣದ ಸಮಗ್ರ ಅಭಿವೃದ್ಧಿ ಸಲುವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಂಪನ್ಮೂಲ ಕ್ರೋಡೀಕರಿಸಿ ಹಂಚಿಕೆ ಮಾಡುವುದು ಹಾಗೂ ಮಾರ್ಚ್‌ನಿಂದ ಕಾವೇರಿ ನದಿಯಲ್ಲಿ ನೀರು ಕಡಿಮೆಯಾಗುವ ಲಕ್ಷಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗಾಗಿ ನದಿಯಲ್ಲಿ ಮರಳಿನ ಚೀಲ ಉಪಯೋಗಿಸಿ ಕಟ್ಟೆ ಕಟ್ಟುವುದು, ಮನೆ ಮನೆಗೆ ಬೋರ್‌ವೆಲ್‌ಗಳಿಂದ ನೀರು ಸಂಗ್ರಹಿಸಿ ಟ್ಯಾಂಕರ್ ಮೂಲಕ ಸರಬರಾಜು ಮಾಡುವುದು, ಪುರಸಭೆ ವ್ಯಾಪ್ತಿಯಲ್ಲಿ ಬರುವ ಪಾರ್ಕ್ ಅಭಿವೃದ್ಧಿ, ಪುರಸಭೆಯ ಕೆಲವು ವಾರ್ಡ್‌ಗಳಲ್ಲಿ ಅಂಗನವಾಡಿ ತೆರೆಯುವುದು, ಸಮುದಾಯ ಭವನ ಮತ್ತು ಅಂಗನವಾಡಿ ಕಾಮಗಾರಿ, ರಸ್ತೆ, ಪಾದಚಾರಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ, ಸಾರ್ವಜನಿಕ ಶೌಚಗೃಹ ಕಟ್ಟಡಗಳ ನಿರ್ಮಾಣ, ಸ್ಮಶಾನ ಅಭಿವೃದ್ಧಿ ಮತ್ತು ವಿದ್ಯುತ್ ಚಿತಾಗಾರ ಕಾಮಗಾರಿ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
2025-26ನೇ ಸಾಲಿನ ಆಯ ವ್ಯಯ ಅಂದಾಜನ್ನು ತಯಾರಿಸುವ ಸಲುವಾಗಿ ಸಭೆಯಲ್ಲಿ ಅಧ್ಯಕ್ಷೆ ಜಯಲಕ್ಷ್ಮೀ ಚಂದ್ರು, ಉಪಾಧ್ಯಕ್ಷೆ ಪುಟ್ಟ ಲಕ್ಷ್ಮಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್ ಹಾಗೂ ಪುರಸಭೆ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು ಸಭೆಯಲ್ಲಿ ಹಲವು ಸಲಹೆ ಮತ್ತು ಸೂಚನೆಗಳನ್ನು ನೀಡಿದರು.
ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಇದ್ದರು.