ಕುಡಿಯುವ ನೀರಿಗೆ ಬರ, ಜನಜೀವನ ತತ್ತರ!

ಬ್ಯಾಡಗಿ: ಮೂರು ವರ್ಷಗಳಿಂದ ಸತತ ಬರಗಾಲ, ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳು ಬತ್ತಿವೆ. ಇದರಿಂದ ತಾಲೂಕಿನಾದ್ಯಂತ ನೀರಿನ ಅಭಾವ ತೀವ್ರಗೊಂಡಿದ್ದು, ಗ್ರಾಮಸ್ಥರು ಅನಿವಾರ್ಯವಾಗಿ ಟ್ಯಾಂಕರ್ ನೀರಿಗೆ ಮೊರೆ ಹೋಗಿದ್ದಾರೆ.

ತಾಲೂಕಿನಲ್ಲಿ 25ಕ್ಕೂ ಹೆಚ್ಚು ಗ್ರಾಮಗಳಲ್ಲಿ ತೀವ್ರ ನೀರಿನ ಬರವಿದ್ದರೂ ಗ್ರಾ.ಪಂ. ಅಧಿಕಾರಿಗಳು ತಾಲೂಕಾಡಳಿತಕ್ಕೆ ಸಮರ್ಪಕವಾಗಿ ಮಾಹಿತಿಯನ್ನೇ ನೀಡಿಲ್ಲ. ಇದರಿಂದಾಗಿ ಟಾಸ್ಕ್ ಫೋರ್ಸ್ ಸಮಿತಿಯು ನಾಲ್ಕಾರು ಗ್ರಾಮಗಳನ್ನು ಹೊರತುಪಡಿಸಿ ಎಲ್ಲಿಯೂ ನೀರಿನ ಕೊರತೆಯಿಲ್ಲ ಎಂದು ಹೇಳುತ್ತಿದೆ. ಆದರೆ, ವಾಸ್ತವವೇ ಬೇರೆಯಾಗಿದೆ. ಗ್ರಾಮದಲ್ಲಿ ಮೂರು ಕೊಳವೆ ಬಾವಿಗಳಿಂದ 2 ಇಂಚು ನೀರು ಸಿಗುತ್ತಿಲ್ಲ. ವಿಪರೀತ ತಾಪಮಾನದ ಕಾರಣ ಜನ- ಜಾನುವಾರುಗಳಿಗೆ ಹೆಚ್ಚಿನ ನೀರಿನ ಅಗತ್ಯತೆ ಇದೆ.

ಹಗಲು ರಾತ್ರಿ ನೀರಿಗಾಗಿ ಸಾಲು: ಶಿಡೇನೂರು, ಬನ್ನಿಹಟ್ಟಿ, ಕೊಲ್ಲಾಪುರ, ಲಕಮಾಜಿಕೊಪ್ಪ, ಆಣೂರು, ತಿಮ್ಮೇನಹಳ್ಳಿ, ಅಳಲಗೇರಿ, ಸಿದ್ದಾಪುರ, ಗುಂಡೇನಹಳ್ಳಿ, ಕಲ್ಲೆದೇವರ, ಸೇವಾನಗರ, ಅಂಗರಗಟ್ಟಿ, ಮೋಟೆಬೆನ್ನೂರ, ಶಿವಾಜಿನಗರ, ಹಳೆಗುಂಗರಕೊಪ್ಪ, ಹೊಸಗುಂಗರಕೊಪ್ಪ, ಕಾಟೇನಹಳ್ಳಿ, ತಡಸ, ಛತ್ರ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ತೀವ್ರಗೊಂಡಿದೆ. ಎರಡು ತಿಂಗಳಿಂದ ಕೊಳವೆ ಬಾವಿಗಳು ಬತ್ತಿದ ಪರಿಣಾಮ ನೀರಿಗಾಗಿ ಪರದಾಟ ಶುರುವಾಗಿದೆ. ಗ್ರಾಮದ ಒಂದೆರಡು ಕೊಳವೆ ಬಾವಿಗಳಿಂದ ಬೀಳುವ ಒಂದಿಂಚು ನೀರು ಪಡೆಯಲು ಊರಿನ ಜನರು ರಾತ್ರಿ- ಹಗಲೆನ್ನದೇ ಓಡಾಡುತ್ತಿದ್ದಾರೆ. ಕೆಲವರು ಹೊಲಗದ್ದೆಗಳಿಗೆ ತೆರಳಿ ಚಕ್ಕಡಿ, ಟ್ರ್ಯಾಕ್ಟರ್ ಮೂಲಕ ನೀರು ಸಂಗ್ರಹಿಸುತ್ತಿದ್ದಾರೆ.

ಸ್ಥಗಿತಗೊಂಡ ಯೋಜನೆ: ತಾಲೂಕಿನ ಮೋಟೆಬೆನ್ನೂರು ಬಹುಗ್ರಾಮ, ಚಿಕ್ಕಬಾಸೂರಿನಲ್ಲಿ ಬಹುಗ್ರಾಮ ನೀರು ಪೂರೈಕೆ ಯೋಜನೆಗಳು ಕಾರ್ಯಗತವಾಗಿವೆ. ಆಣೂರು ನೀರು ಪೂರೈಕೆ ಯೋಜನೆ ಜಾರಿಗೊಳಿಸಲು ಹಲವು ದಿನಗಳಿಂದ ಗ್ರಾಮಸ್ಥರು ಹೋರಾಟ, ಬೇಡಿಕೆ ಸಲ್ಲಿಸಿದರೂ ತಾಂತ್ರಿಕ ಹಾಗೂ ವಿವಿಧ ಕಾರಣಗಳಿಂದ ಯೋಜನೆ ಮಂಜೂರಾಗಿಲ್ಲ. ಈ ಗ್ರಾಮಗಳಲ್ಲಿ ಕೊಳವೆ ಬಾವಿಯಿಂದ ಪ್ಲೋರೈಡ್​ಯುುಕ್ತ ನೀರು ಲಭ್ಯವಾಗುತ್ತಿದೆ. ನೀರು ಶುದ್ಧೀಕರಿಸುವ ಘಟಕಗಳು ಸ್ಥಗಿತಗೊಂಡಿವೆ. ಸರ್ಕಾರ ಕುಡಿಯುವ ನೀರು ಪೂರೈಸುವ ಯೋಜನೆಗಳಿಗೆ ಪ್ರಥಮ ಆದ್ಯತೆ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬರಿದಾದ ಕೆರೆಗಳು: ಮೋಟೆಬೆನ್ನೂರು, ಶಿಡೇನೂರು, ಕೆರೂಡಿ, ನಂದಿಹಳ್ಳಿ, ಮಾಸಣಗಿ, ಆಣೂರು, ಬೆಳಕೇರಿ, ಕುಮ್ಮೂರು, ಕದರಮಂಡಲಗಿ, ತಡಸ, ಮುತ್ತೂರು, ಅಂಗರಗಟ್ಟಿ ಸೇರಿ ತಾಲೂಕಿನಲ್ಲಿರುವ 200ಕ್ಕೂ ಹೆಚ್ಚು ಕೆರೆಗಳು ಬರಿದಾಗಿವೆ.

ಸರ್ಕಾರದ ಕೆರೆ ಸಂಜೀವಿನಿ ಯೋಜನೆ ನೆಪಮಾತ್ರಕ್ಕೆ ಎಂಬಂತಾಗಿದೆ. ದೊಡ್ಡ ಯಂತ್ರಗಳಿಂದ ಮಣ್ಣನ್ನು ಹೊರಹಾಕಿಸಿ, ನದಿ ಮೂಲದಿಂದ ನೀರು ತುಂಬಿಸುವ ಕಾರ್ಯ ಭರದಿಂದ ಸಾಗಬೇಕಿದೆ. ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆ ಜಾರಿಯಾಗಿದ್ದು, ಕೆಲ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಆದರೆ, ಘಾಳಪೂಜಿ, ಚಿಕ್ಕಬಾಸೂರು, ಸೂಡಂಬಿ, ಹಿರೇಅಣಜಿ, ಅತ್ತಿಕಟ್ಟಿ, ಹಿರೇಹಳ್ಳಿ ಸೇರಿ ಹಲವು ಗ್ರಾಮಗಳ ಬೃಹತ್ ಕೆರೆಗಳು ಹೂಳು ತುಂಬಿಕೊಂಡಿದ್ದು, ನೀರು ನಿಲ್ಲದಂತಾಗಿವೆ. ಜನಪ್ರತಿನಿಧಿಗಳು ವಿಶೇಷ ಪ್ಯಾಕೇಜ್ ಮೂಲಕ ಕೆರೆಗಳ ಅಭಿವೃದ್ಧಿಗೆ ಒತ್ತು ನೀಡಬೇಕಿದೆ.

ಅಧಿಕಾರಿಗಳಿಂದ ತಪ್ಪು ಮಾಹಿತಿ: ತಾ.ಪಂ. ವ್ಯಾಪ್ತಿಯ 21 ಗ್ರಾಮ ಪಂಚಾಯಿತಿ ಪೈಕಿ 40 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದುಕೊಂಡಿದ್ದು, ರೈತರಿಗೆ ಸಕಾಲಕ್ಕೆ ಹಣ ಜಮೆ ಮಾಡುತ್ತಿಲ್ಲ. ಕೊಳವೆ ಬಾವಿಗೆ ಈಗ 8 ಸಾವಿರ ರೂ. ನೀಡುತ್ತಿದ್ದು, 15-20 ಸಾವಿರ ರೂ. ನೀಡಿದ್ದಲ್ಲಿ ಮಾತ್ರ ನೀಡುವುದಾಗಿ ರೈತರು ಒತ್ತಡ ಹಾಕುತ್ತಿದ್ದಾರೆ. ರೈತ ಸಂಘ ಸಹಾಯವಾಣಿ ಆರಂಭಿಸಿ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದು, ಅಧಿಕಾರಿಗಳು ಎಲ್ಲಿಯೂ ನೀರಿನ ಸಮಸ್ಯೆಯಿಲ್ಲವೆಂದು ತಪ್ಪು ಮಾಹಿತಿ ನೀಡುವ ಮೂಲಕ ಗೊಂದಲ ಉಂಟು ಮಾಡುತ್ತಿದ್ದಾರೆ.

ಜನಪ್ರತಿನಿಧಿಗಳು ಹಾಗೂ ಸರ್ಕಾರವು ತಾಲೂಕಿನ ನೀರಿನ ಬವಣೆ ತಪ್ಪಿಸುವಲ್ಲಿ ನಿರ್ಲಕ್ಷ್ಯ ತೋರಿದೆ. ಕುಡಿಯಲು ಯೋಗ್ಯವಲ್ಲದ ಸವಳು ನೀರನ್ನು ಗ್ರಾಮಸ್ಥರು ಕುಡಿಯುತ್ತಿದ್ದಾರೆ. ತಾಲೂಕಾಡಳಿತಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಜಾನುವಾರುಗಳಂತೂ ನೀರಿಗಾಗಿ ಪರದಾಡುತ್ತಿವೆ. ಜಿಲ್ಲಾಧಿಕಾರಿಗಳು ಕೂಡಲೆ ಸ್ಥಳೀಯ ಗ್ರಾಮಸ್ಥರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹುಡುಕಬೇಕು.
| ಚನ್ನಬಸಪ್ಪ ಶಿಡೇನೂರು, ಆಣೂರು ಗ್ರಾಮಸ್ಥ

2018-19ನೇ ಸಾಲಿನ 36 ಲಕ್ಷ ರೂ. ಅನುದಾನ ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಜಮೆಯಿದೆ. ಪ್ರಸಕ್ತ ವರ್ಷ ಹಣ ಬಂದಿಲ್ಲ. ಅಗತ್ಯವಿರುವ ಗ್ರಾಮಗಳಲ್ಲಿ ಈ ಹಣದಿಂದ ನೀರಿನ ಪೂರೈಕೆ ಮಾಡಲಾಗುತ್ತಿದೆ. ತಾಲೂಕಿನ ನಾಲ್ಕು ಗ್ರಾಪಂಗಳಲ್ಲಿ ನೀರಿನ ಕೊರತೆ ಉಂಟಾಗಿದ್ದು, ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ. ಶಿಡೇನೂರು, ಬನ್ನಿಹಟ್ಟಿ, ನಂದಿಹಳ್ಳಿ ಸೇರಿ ತೀರಾ ನೀರಿನ ಅಭಾವ ಉಂಟಾಗಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಅಂತರ್ಜಲ ಕೊರತೆಯಿಂದ ಎಲ್ಲೆಡೆ ನೀರಿನ ಅಭಾವಿದೆ. ಸಾರ್ವಜನಿಕರು ನೀರನ್ನು ಮಿತವಾಗಿ ಬಳಕೆ ಮಾಡಬೇಕಿದೆ.
| ಕೆ. ಗುರುಬಸವರಾಜ, ತಹಸೀಲ್ದಾರ್ ಬ್ಯಾಡಗಿ

Leave a Reply

Your email address will not be published. Required fields are marked *