ಕುಡಿಯುವ ನೀರಿಗೆ ಒತ್ತಾಯಿಸಿ ಪ್ರತಿಭಟನೆ

ಹೊಸನಗರ: ಮಾರುತಿಪುರ ಗ್ರಾಪಂ ವ್ಯಾಪ್ತಿಯ ಅರಗೋಡಿ ಗ್ರಾಮ ಮಾವಿನಹೊಳೆಯ ಕುಟುಂಬಗಳಿಗೆ ಕುಡಿಯಲು ನೀರಿಲ್ಲದೆ 15 ದಿನವಾದರೂ ಪಂಚಾಯಿತಿ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಆರೋಪಿಸಿ ಮಂಗಳವಾರ ನೀರಿನ ಟ್ಯಾಂಕ್ ಬಳಿ ಖಾಲಿ ಕೊಡಪಾನ ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಕೆಲ ವರ್ಷಗಳ ಹಿಂದೆ ಮೂರು ಬಾವಿ ನಿರ್ವಿುಸಲಾಗಿತ್ತು. ಆದರೆ 3 ಬಾವಿಗಳಲ್ಲೂ ಹನಿ ನೀರಿಲ್ಲ. ನಂತರ ಕಚ್ಚಿಗೆಬೈಲು ಕಿರು ನೀರು ಸರಬರಾಜು ಯೋಜನೆಯನ್ನು ಮುಂದುವರಿಸಿ ಇಲ್ಲಿಗೂ ನೀರು ಒದಗಿಸಲಾಗುತ್ತಿತ್ತು. ಆದರೆ 15 ದಿನಗಳಿಂದ ನೀರು ಸ್ಥಗಿತಗೊಳಿಸಲಾಗಿದೆ. ಹತ್ತಿರದಲ್ಲಿದ್ದ ಹೊಳೆ ಬತ್ತಿ ತಿಂಗಳಾಗಿದೆ. ಈ ಎಲ್ಲ ಸಮಸ್ಯೆ ತಿಳಿದಿದ್ದರೂ ಇಲ್ಲಿಗೆ ಪ್ರತ್ಯೇಕ ಕೊಳವೆ ಬಾವಿ ನೀಡುವುದಕ್ಕೆ ಜನಪ್ರತಿನಿಧಿಗಳು ನಿರ್ಲಕ್ಷಿಸಿದ್ದಾರೆ ಎಂದರು.

ಇಲ್ಲಿರುವ ಮಿನಿ ಅಂಗನವಾಡಿ ಕೇಂದ್ರದ ಮಕ್ಕಳಿಗೂ ಕುಡಿಯಲು ಹಾಗೂ ಆಹಾರ ಸಿದ್ಧಗೊಳಿಸಲು ನೀರಿಲ್ಲ. ಹೀಗಾಗಿ ಅಲ್ಲಿ ಕರ್ತವ್ಯ ಮಾಡುತ್ತಿರುವ ಸಹಾಯಕಿಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀರಿಲ್ಲದ ಪರಿಣಾಮ ಹೊಳೆಯಲ್ಲಿ ನೀರನ್ನು ಅರಸಿ ಬಯಲು ಶೌಚದತ್ತ ಹೋಗುವಂತಾಗಿದೆ ಎಂದು ಅಳಲು ತೋಡಿಕೊಂಡರು.

ಸಮಸ್ಯೆ ಬಗೆಹರಿಸುವುದಾಗಿ ಪಿಡಿಒ ರಾಜು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರೂ ಪಟ್ಟುಬಿಡದ ಗ್ರಾಮಸ್ಥರು ತಹಸೀಲ್ದಾರ್ ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿದರು. ಬಳಿಕ ಸ್ಥಳಕ್ಕೆ ತಹಸೀಲ್ದಾರ್ ಸಿದ್ದೇಶ್ ಹಾಗೂ ಇಒ ರಾಮಚಂದ್ರ ಭಟ್ ಆಗಮಿಸಿ, ಖಾಸಗಿ ಕೊಳವೆ ಬಾವಿಯಿಂದ ಸದ್ಯಕ್ಕೆ ನೀರು ಒದಗಿಸಲಾಗುವುದು, ಬಳಿಕ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಈಶ್ವರ, ರಾಬರ್ಟ್, ರವಿಚಂದ್ರ, ಮುತ್ತುರಾಜ್, ವಿಶಾಲಾಕ್ಷಿ, ಜಾನಕಮ್ಮ, ಮೀನಾಕ್ಷಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *